ADVERTISEMENT

ವಯಸ್ಸಾದ ಗೋವುಗಳ ಸಮಸ್ಯೆಗೆ ಸರ್ಕಾರ ಪರಿಹಾರ ಹುಡುಕಿದೆ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 7 ಮೇ 2022, 8:34 IST
Last Updated 7 ಮೇ 2022, 8:34 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ವಯಸ್ಸಾದ ಗೋವುಗಳ ರಕ್ಷಣೆ ಮತ್ತು ಆರೈಕೆಯ ಸಮಸ್ಯೆಗೆ ವಿವಿಧ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ಪರಿಹಾರ ಹುಡುಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ಧ ಸಮಾರಂಭದಲ್ಲಿ 40 ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

'ಗೋ ಹತ್ಯೆ ನಿಷೇಧ ಕಾನೂನನ್ನು ನಮ್ಮ ಸರ್ಕಾರ ಬಿಗಿಗೊಳಿಸಿದೆ. ಆಗ ಕೆಲವರು ಗೋವುಗಳ ಕುರಿತು ಕೀಳಾಗಿ ಮಾತನಾಡಿದರು. ವಯಸ್ಸಾದ ಗೋವುಗಳನ್ನು ಯಾರು ಸಾಕುತ್ತಾರೆ? ರಕ್ಷಿಸುತ್ತಾರೆ ಎಂದು ಪ್ರಶ್ನಿಸಿದ್ದರು. ಗೋವುಗಳನ್ನು ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ಯೋಜನೆ, ಸರ್ಕಾರಿ ಪ್ರಾಯೋಜಿತ ಗೋಶಾಲೆಗಳ ಸ್ಥಾಪನೆಯಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ' ಎಂದರು.

ADVERTISEMENT

'ಭಾರತೀಯ ಸಂಸ್ಕೃತಿ ಜೀವ ಉಳಿಸುವುದರ ಪರವಾಗಿದೆ. ಹತ್ಯೆ ಮಾಡುವುದರ ಪರವಾಗಿ ಇಲ್ಲ. 75 ವರ್ಷಗಳ ಕಾಲ ನೀವು ಸಮಸ್ಯೆಗಳನ್ನೇ ಸೃಷ್ಟಿಸಿದ್ದೀರಿ. ಇನ್ನೂ ಅದನ್ನೇ ಮಾಡಬೇಡಿ. ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದನ್ನು ನಾವು ತೋರಿಸುತ್ತೇವೆ' ಎಂದು ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸುವವರ ವಿರುದ್ಧ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.

ಪಶುಸಂಗೋಪನಾ ಇಲಾಖೆಯ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ. ಸಿಬ್ಬಂದಿ ಕೊರತೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಪಶುಸಂಗೋಪನಾ ಸಚಿವ ಪುರುಷೋತ್ತಮ್ ರೂಪಾಲಾ ಮಾತನಾಡಿ, 'ಜಾನುವಾರು ಅಭಿವೃದ್ಧಿ ಮತ್ತು ಸಂರಕ್ಷಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ' ಎಂದು ಶ್ಲಾಘಿಸಿದರು.

ಕರ್ನಾಟಕದಲ್ಲಿ ಜಾನುವಾರುಗಳ ಕೃತಕ ವೀರ್ಯಾಣು ಸಂಗ್ರಹ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಶೀಘ್ರವಾಗಿ ಒಪ್ಪಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, '₹44 ಕೋಟಿ ವೆಚ್ಚದಲ್ಲಿ 275 ಪಶು ಸಂಚಾರಿ ಚಿಕಿತ್ಸಾ ವಾಹನ ಒದಗಿಸಲಾಗುವುದು. ಆರಂಭಿಕ ಹಂತದಲ್ಲಿ 11 ಜಿಲ್ಲೆಗಳಿಗೆ 70 ವಾಹನಗಳನ್ನು ಶನಿವಾರ ಸೇವೆಗೆ ಒದಗಿಸಲಾಗಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.