ADVERTISEMENT

ರವಿ ಬೆಳಗೆರೆ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗಣ್ಯರ ಸಂತಾಪ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 5:43 IST
Last Updated 13 ನವೆಂಬರ್ 2020, 5:43 IST
ಚಿತ್ರ ಕೃಪೆ: ರವಿ ಬೆಳಗೆರೆ ಅವರ ಫೇಸ್‌ಬುಕ್‌ ಖಾತೆ
ಚಿತ್ರ ಕೃಪೆ: ರವಿ ಬೆಳಗೆರೆ ಅವರ ಫೇಸ್‌ಬುಕ್‌ ಖಾತೆ   

ಬೆಂಗಳೂರು: ಹಿರಿಯ ಪತ್ರಕರ್ತ, ಹಾಯ್‌ ಬೆಂಗಳೂರು ಟ್ಯಾಬ್ಲಾಯ್ಡ್‌ನ ಪ್ರಧಾನ ಸಂಪಾದಕ ರವಿ ಬೆಳಗೆರೆ (62) ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗುರುವಾರ ತಡರಾತ್ರಿ ಹೃದಯಾಘಾತದಿಂದ ಅವರು ನಿಧನರಾದರು.

‘ಪತ್ರಕರ್ತ, ಬರಹಗಾರ ರವಿ ಬೆಳಗೆರೆ ನಿಧನರಾದ ಸುದ್ದಿ ತಿಳಿದು ದುಃಖವಾಗಿದೆ. ಪತ್ರಕರ್ತರಾಗಿ, ಲೇಖಕರಾಗಿ, ನಿರೂಪಕರಾಗಿ ಜನಪ್ರಿಯತೆ ಗಳಿಸಿದ್ದ ಅವರು, ಶಿಕ್ಷಣ ಸಂಸ್ಥೆಯನ್ನೂ ನಡೆಸುತ್ತಿದ್ದರು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಕುಟುಂಬದವರಿಗೆ, ಅಭಿಮಾನಿಗಳಿಗೆ, ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಅಕ್ಷರ ಮಾಂತ್ರಿಕ, ಖ್ಯಾತ ಪತ್ರಕರ್ತ ರವಿಬೆಳಗೆರೆ ನಿಧನ ನೋವಿನ ಸಂಗತಿ. ಅವರ ನಿಧನದಿಂದ ಪತ್ರಿಕಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಅಕ್ಷರ ಗಾರುಡಿಗ, ಹಿರಿಯ ಪತ್ರಕರ್ತ, ಕಾದಂಬರಿಕಾರ, 'ಹಾಯ್ ಬೆಂಗಳೂರು' ಸಂಪಾದಕ, ಅತ್ಯುತ್ತಮ ವಾಗ್ಮಿ ರವಿ ಬೆಳಗೆರೆ ಅವರ ನಿಧನ ಕನ್ನಡ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ. ಕನ್ನಡ ಸಾಹಿತ್ಯ ಲೋಕದಲ್ಲಿ ಸ್ಟಾರ್ ಬರಹಗಾರರಾಗಿ ಗುರುತಿಸಿಕೊಂಡಿದ್ದ ಬೆಳೆಗೆರೆ ಅವರ ಉಸಿರು ನಿಂತರು, ಅವರ ಅಕ್ಷರಗಳು ಎಂದಿಗೂ ಅಜರಾಮರ. ಅವರಿಗೆ ನನ್ನ ಅಂತಿಮ ನಮನಗಳು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ನಿಧನವು ಅತೀವ ದುಃಖವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಮೃತರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕುಟುಂಬವರ್ಗದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

‘ಬರಹಗಳ ಮೂಲಕವೇ ಬೆರಗು ಮೂಡಿಸಿದ್ದ, ಆ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ, ಅಕ್ಷರ ಮಾಂತ್ರಿಕ, ಸಂಪಾದಕ ಶ್ರೀ ರವಿ ಬೆಳಗೆರೆ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೆನೆ’ ಎಂದು ಸಚಿವ ಶಿವರಾಮ್‌ ಹೆಬ್ಬಾರ್ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.