ADVERTISEMENT

ಕನ್ನಡ ಹೆಸರು ಬದಲಿಸದಂತೆ ಕೇರಳ ಸಿ.ಎಂಗೆ ಪತ್ರ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 21:17 IST
Last Updated 28 ಜೂನ್ 2021, 21:17 IST
ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಕನ್ನಡ ಹೆಸರುಗಳನ್ನು ಹೊಂದಿರುವ ಗ್ರಾಮಗಳ ಹೆಸರನ್ನು ಬದಲಾಯಿಸುತ್ತಿರುವ ಬಗ್ಗೆ ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದರು

ಬೆಂಗಳೂರು: ‘ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಕನ್ನಡ ಹೆಸರು ಹೊಂದಿರುವ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀಕರಣಗೊಳಿಸದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಅವರನ್ನು ಸೋಮವಾರ ಭೇಟಿ ಮಾಡಿದಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ,ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಕನ್ನಡ ಹೆಸರುಗಳನ್ನು ಹೊಂದಿರುವ ಗ್ರಾಮಗಳ ಹೆಸರನ್ನು ಮಲಯಾಳಿ ಭಾಷೆಯ ಆಧಾರದ ಹೆಸರುಗಳನ್ನಾಗಿ ಬದಲಾಯಿಸುತ್ತಿರುವ ಬಗ್ಗೆ ಗಮನಕ್ಕೆ ತಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕೂಡ ಈ ಬಗ್ಗೆ ಕ್ರಮವಹಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ADVERTISEMENT

ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ, ‘ಈಗಾಗಲೇ ಈ ವಿಷಯ ನನ್ನ ಗಮನಕ್ಕೂ ಬಂದಿದೆ. ಕಾಸರಗೋಡು ಮತ್ತು ಮಂಜೇಶ್ವರ ಭಾಗದಲ್ಲಿ ಕನ್ನಡಿಗರು ಮತ್ತು ಮಲಯಾಳ ಭಾಷಿಗರು ಸಹಬಾಳ್ವೆಯಿಂದ ಬದುಕುತ್ತಿದ್ದು, ಕನ್ನಡ ಭಾಷೆಯ ಸಾಂಸ್ಕೃತಿಕ, ಐತಿಹಾಸಿಕ ಮಹತ್ವವಿರುವ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದು ಸೂಕ್ತವಲ್ಲ ಎಂದು ಕೇರಳದ ಮುಖ್ಯಮಂತ್ರಿಯ ಗಮನಕ್ಕೆ ತರಲಾಗುವುದು. ಗ್ರಾಮಗಳ ಹೆಸರುಗಳ ಬದಲಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಪತ್ರ ಬರೆದು ಮನವಿ ಮಾಡಲಾಗುವುದು’ ಎಂದಿದ್ದರು.

ಸೋಮವಾರ ಸಂಜೆಯೇ ಪತ್ರ ಬರೆದ ಯಡಿಯೂರಪ್ಪ, ಎರಡೂ ರಾಜ್ಯಗಳ ಜನರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಗಡಿ ಭಾಗದ ಪ್ರದೇಶದಲ್ಲಿನ ಗ್ರಾಮಗಳ ಹೆಸರು ಕನ್ನಡ ಮತ್ತು ತುಳು ಭಾಷೆಯಿಂದ ಪ್ರಭಾವಿತವಾಗಿವೆ. ಕನ್ನಡ, ತುಳು ಮತ್ತು ಮಲೆಯಾಳಿ ಭಾಷಿಗರು ಸಹೋದರರಂತೆ ಅನ್ಯೋನ್ಯವಾಗಿದ್ದಾರೆ. ಭಾಷಾ ಬಾಂಧವ್ಯ ಇದೇ ರೀತಿ ಮುಂದುವರಿಯಬೇಕು. ಹೆಸರು ಬದಲಿಸುವ ಪ್ರಯತ್ನ ತಮ್ಮ ಸರ್ಕಾರದಿಂದ ಮುಂದುವರಿದಿದ್ದರೆ, ಅದನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡುವುದಾಗಿ ಪಿಣರಾಯಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಹೆಸರು ಬದಲಾವಣೆ ಕೈಬಿಡಲು ಆಗ್ರಹ
ಕಾಸರಗೋಡು ಜಿಲ್ಲೆಯ ಕೆಲವು ಗ್ರಾಮಗಳ ಕನ್ನಡ ಹೆಸರುಗಳನ್ನು ಬದಲಾವಣೆ ಮಾಡಿ, ಮಲಯಾಳಿ ಹೆಸರುಗಳನ್ನು ಇಡುವ ಪ್ರಯತ್ನ ಕೈಬಿಡುವಂತೆ ಆಗ್ರಹಿಸಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದಾರೆ.

‘ಕಾಸರಗೋಡು ಜಿಲ್ಲೆ ಕೇರಳದಲ್ಲಿದ್ದರೂ ಅಲ್ಲಿನ ಜನರು ಕನ್ನಡ ಮತ್ತು ಕರ್ನಾಟಕದ ಜತೆಗೆ ದಶಕಗಳಿಂದಲೂ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಕನ್ನಡ ಮತ್ತು ಮಲಯಾಳ ಭಾಷೆಯ ಜನರು ಭಾಷಾ ಸೌಹಾರ್ದ ಮತ್ತು ಸಾಂಸ್ಕೃತಿಕ ಸಹಬಾಳ್ವೆಗೆ ಮಾದರಿಯಾಗಿದ್ದಾರೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

ಗ್ರಾಮಗಳ ಹೆಸರು ಬದಲಾವಣೆಯಿಂದ ಯಾವುದೇಪರಿಣಾಮ ಆಗುವುದಿಲ್ಲ ಎನ್ನುವ ವಾದವೂ ಇದೆ. ಆದರೆ, ಕಾಸರಗೋಡಿನಲ್ಲಿ ಭಾಷಾ ಸೌಹಾರ್ದದ ಒಂದು ಪರಂಪರೆ ಇದೆ. ಗ್ರಾಮಗಳ ಹೆಸರುಗಳನ್ನು ಕನ್ನಡದಲ್ಲೇ ಉಳಿಸುವುದರಿಂದ ಅತ್ಯುತ್ತಮವಾದ ಪರಂಪರೆಯನ್ನು ಮುಂದುವರಿಸಿದಂತೆ ಆಗುತ್ತದೆ. ಆದ್ದರಿಂದ ಗ್ರಾಮಗಳ ಹೆಸರುಗಳ ಮಲಯಾಳೀಕರಣ ಪ್ರಯತ್ನವನ್ನು ಮುಂದುರಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಹೋರಾಟ ಅನಿವಾರ್ಯವಾದೀತು– ಮನು ಬಳಿಗಾರ
ಬೆಂಗಳೂರು
: ‘ಕನ್ನಡದ ಊರುಗಳ ಹೆಸರುಗಳನ್ನು ಮಲಯಾಳಿ ಭಾಷೆಗೆ ರೂಪಾಂತರಿಸುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಆಗ್ರಹಿಸಿದ್ದಾರೆ.

‘ಮುಖ್ಯಮಂತ್ರಿಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ನೆರೆಯ ರಾಜ್ಯದ ಜೊತೆ ಮಾತನಾಡಿ ಈ ಪ್ರಯತ್ನ ನಿಲ್ಲಿಸಲು ತಕ್ಷಣವೇ ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕೇರಳ ರಾಜ್ಯದಲ್ಲಿರುವ ಕಾಸರಗೋಡು ಅಪ್ಪಟ ಕನ್ನಡ ಪ್ರದೇಶ. ಇದನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ನ್ಯಾಯಮೂರ್ತಿ ಮಹಾಜನ್‌ ಆಯೋಗವೇ ಶಿಫಾರಸು ಮಾಡಿತ್ತು. ಈ ಆಯೋಗದ ವರದಿ ನನೆಗುದಿಗೆ ಬಿದ್ದಿರುವುದರಿಂದ ಕಾಸರಗೋಡು ಕೇರಳದ ಭಾಗವಾಗಿ ಉಳಿದಿದೆ. ಕಾಸರಗೋಡಿನ ಪ್ರತಿ ಕಣವೂ ಕನ್ನಡಮಯವಾಗಿದೆ. ಹೀಗಿರುವಾಗ ಅಲ್ಲಿನ ಊರಿನ ಹೆಸರುಗಳನ್ನು ಮಲಯಾಳಿ ಭಾಷೆಗೆ ರೂಪಾಂತರಿಸುವುದು ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಮಾಡಿದ ಅಪಮಾನ’ ಎಂದು ತಿಳಿಸಿದ್ದಾರೆ.

‘ಕೇರಳದ ನಡೆಯಿಂದ ವಿವಿಧ ಭಾಷಿಗರ ನಡುವಣ ಸೌಹಾರ್ದ ಹದಗೆಡುತ್ತದೆ. ಕೇರಳ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಬೀದಿಗಿಳಿದು ಹೋರಾಡುತ್ತೇವೆ’ ಎಂದು ಎಚ್ಚರಿಸಿದ್ದಾರೆ.

‘ಹೋರಾಟ ಅನಿವಾರ್ಯವಾದೀತು’
‘ಕನ್ನಡದ ಊರುಗಳ ಹೆಸರುಗಳನ್ನು ಮಲಯಾಳಿ ಭಾಷೆಗೆ ರೂಪಾಂತರಿಸುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ ಆಗ್ರಹಿಸಿದ್ದಾರೆ.

‘ಮುಖ್ಯಮಂತ್ರಿಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ನೆರೆಯ ರಾಜ್ಯದ ಜೊತೆ ಮಾತನಾಡಿ ಈ ಪ್ರಯತ್ನ ನಿಲ್ಲಿಸಲು ತಕ್ಷಣವೇ ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.

‘ಕೇರಳ ರಾಜ್ಯದಲ್ಲಿರುವ ಕಾಸರಗೋಡು ಅಪ್ಪಟ ಕನ್ನಡ ಪ್ರದೇಶ. ಇದನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ನ್ಯಾಯಮೂರ್ತಿ ಮಹಾಜನ್‌ ಆಯೋಗವೇ ಶಿಫಾರಸು ಮಾಡಿತ್ತು. ಈ ಆಯೋಗದ ವರದಿ ನನೆಗುದಿಗೆ ಬಿದ್ದಿರುವುದರಿಂದ ಕಾಸರಗೋಡು ಕೇರಳದ ಭಾಗವಾಗಿ ಉಳಿದಿದೆ. ಕಾಸರಗೋಡಿನ ಪ್ರತಿ ಕಣವೂ ಕನ್ನಡಮಯವಾಗಿದೆ. ಹೀಗಿರುವಾಗ ಅಲ್ಲಿನ ಊರಿನ ಹೆಸರುಗಳನ್ನು ಮಲಯಾಳಿ ಭಾಷೆಗೆ ರೂಪಾಂತರಿಸುವುದು ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಮಾಡಿದ ಅಪಮಾನ’ ಎಂದು ತಿಳಿಸಿದ್ದಾರೆ.

‘ಕೇರಳದ ನಡೆಯಿಂದ ವಿವಿಧ ಭಾಷಿಗರ ನಡುವಣ ಸೌಹಾರ್ದ ಹದಗೆಡುತ್ತದೆ. ಕೇರಳ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಬೀದಿಗಿಳಿದು ಹೋರಾಡುತ್ತೇವೆ’ ಎಂದು ಎಚ್ಚರಿಸಿದ್ದಾರೆ.

***
ಕೇರಳ ಸರ್ಕಾರ ಆ ಗ್ರಾಮಗಳ ಜನರ ಅಭಿಪ್ರಾಯವನ್ನೂ ಕೇಳದೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಕನ್ನಡದ ಅಸ್ಮಿತೆಗಾಗಿ ಈ ಕ್ರಮವನ್ನು ವಿರೋಧಿಸಬೇಕಾಗಿದೆ.
-ಅರವಿಂದ ಲಿಂಬಾವಳಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

***

ಕೇರಳ ಸರ್ಕಾರ ತೋರುತ್ತಿರುವ ಕನ್ನಡ ವಿರೋಧಿ ಧೋರಣೆ ವಿರುದ್ಧ ಕನ್ನಡಿಗರು ಸಂಘಟಿತರಾಗಿ ಪ್ರತಿಭಟಿಸಬೇಕು. ರಾಜ್ಯದ ಮುಖ್ಯಮಂತ್ರಿ ಅವರು ಕೇರಳದ ಮುಖ್ಯಮಂತ್ರಿ ಜೊತೆ ಚರ್ಚಿಸಬೇಕು.
-ಪ್ರತಾಪಸಿಂಹ, ಸಂಸದ

***

ಕನ್ನಡ ಹೆಸರಿನ ಬದಲಾವಣೆ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತರಲಾಗುವುದು. ಅವರೇ ಕೇರಳ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಲಿದ್ದಾರೆ.
-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.