ADVERTISEMENT

ಮುಖ್ಯಮಂತ್ರಿ ಜನಸ್ಪಂದನ; ಅಹವಾಲು ಸಲ್ಲಿಸಲು ಜನರ ದಂಡು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 5:06 IST
Last Updated 27 ನವೆಂಬರ್ 2023, 5:06 IST
   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಹೇಳಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದಾರೆ.

ಮನವಿ ಪತ್ರಗಳ ಸಹಿತ ಬಂದಿರುವರರಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಸರತಿ ಸಾಲಿನಲ್ಲಿ ನಿಲ್ಲುವುದನ್ನ ತಪ್ಪಿಸಲು 20 ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. ವೃದ್ಧರು, ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್‌ಗಳ ವ್ಯವಸ್ಥೆಯಿದೆ.  ಕುಡಿಯುವ ನೀರು, ಆಹಾರ, ಶೌಚದ ವ್ಯವಸ್ಥೆ, ನೂಕುನುಗ್ಗಲು ಆಗದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. 

ಜನತಾ ದರ್ಶನಕ್ಕೆ ಬಂದವರ ನೋಂದಣಿ ಮೊದಲು ನಡೆಯಲಿದೆ. ಯಾವ ಜಿಲ್ಲೆಯಿಂದ ಬಂದಿದ್ದಾರೆ, ಸಮಸ್ಯೆ ಸ್ವರೂಪ ಏನು, ಯಾವ ಇಲಾಖೆಗೆ ಸೇರಿದ ಸಮಸ್ಯೆ ಎಂಬುದನ್ನು ಅಧಿಕಾರಿಗಳು ಪರಿಗಣಿಸಲಿದ್ದಾರೆ.

ADVERTISEMENT

ಮನೆ, ನಿವೇಶನ, ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳು, ಜಮೀನು ವಿವಾದ- ಭೂಗಳ್ಳರ ಬೆದರಿಕೆ, ಒತ್ತುವರಿ, ಪೋಡಿ ಆಗದಿರುವುದು, ಬಗರ್ ಹುಕುಂ, ನೋಂದಣಿ ವಿಳಂಬ, ಆರೋಗ್ಯ ಸಮಸ್ಯೆ - ಕಿಡ್ನಿ, ಹೃದಯ, ಮೆದುಳು ಸಂಬಂಧಿತ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ಹಲವು ಸಮಸ್ಯೆಗಳು, ಹಣಕಾಸಿನ ಸಮಸ್ಯೆ - ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆಯ ತೊಂದರೆ, ಅನಾರೋಗ್ಯಪೀಡಿತರಿಗೆ ಚಿಕಿತ್ಸೆ, ಮದುವೆ, ಉದ್ಯೋಗ ಸಮಸ್ಯೆ ಹೀಗೆ ಅಹವಾಲುಗಳ ಪಟ್ಟಿ ಸಹಿತ ಜನರ ದಂಡೇ ಸೇರಿದೆ.

ನಿಗಮ, ಮಂಡಳಿ ನೇಮಿಸುವಂತೆ ಒತ್ತಾಯಿಸಲು ಕೆಲವರು ಬಂದಿದ್ದಾರೆ. ಪಿಎಸ್ಐ ಪರೀಕ್ಷಾ ದಿನಾಂಕ‌ ಮುಂದೂಡುವಂತೆ ಮನವಿ ಸಹಿತ  ಅಭ್ಯರ್ಥಿಗಳು ಬಂದಿದ್ದಾರೆ. ಗೃಹಲಕ್ಷ್ಮಿ ಯೋಜನೆ ಸಂಬಂಧ ತಾಂತ್ರಿಕ ಸಮಸ್ಯೆಯನ್ನು ಮುಖ್ಯಮಂತ್ರಿಗೆ ಗಮನಕ್ಕೆ ತರಲು ಬಂದವರೂ ಸಾಲಿನಲ್ಲಿ ಇದ್ದಾರೆ.

ಈಗಾಗಲೇ ಎಲ್ಲ ಜಿಲ್ಲಾ ಜಿಲ್ಲೆಗಳ ಜಿಲ್ಲಾಶಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್,ನ, 27ರಂದು ನಡೆಯಲಿರವ ಜನಸ್ಪಂದನೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಂಪರ್ಕಿಸಿ ಜನರ ಸಮಸ್ಯೆಗಳ ಪರಿಹರಿಸುವಂತೆ ನಿರ್ದೇಶನ ನೀಡಬಹುದು. ಹೀಗಾಗಿ, ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರಗಳಲ್ಲಿ ಹಾಜರಿರಬೇಕು. ಮುಖ್ಯಮಂತ್ರಿ ಕಚೇರಿಯಿಂದ ಕರೆಗಳು ಬಂದ ತಕ್ಷಣ ಸ್ವೀಕರಿಸಬೇಕು’ ಎಂದು ಸೂಚಿಸಿದ್ದಾರೆ.

ಬಂದೋಬಸ್ತ್‌: ಕಾರ್ಯಕ್ರಮದ ಭದ್ರತೆಗೆ ಒಬ್ಬರು ಡಿಸಿಪಿ,  ಮೂವರು ಎಸಿಪಿಗಳು, ಪೊಲೀಸ್‌ ಕಾನ್‌ಸ್ಟೇಬಕಲ್‌ಗಳ ಸಹಿತ 500ಕ್ಕೂ ಹೆಚ್ಚು ಮಂದಿಯನ್ನು ನೇಮಿಸಲಾಗಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿ 300ಕ್ಕೂ ಹೆಚ್ಚು ಮಂದಿ ಇದ್ದಾರೆ. ಅಲ್ಲದೆ ಸಹಾಯಕ ಸಿಬ್ಬಂದಿ ಸೇರಿ 1000 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.