ADVERTISEMENT

ಸಚಿವರು, ಶಾಸಕರಿಗೆ ಉಪ ಚುನಾವಣೆ ಹೊಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 16:33 IST
Last Updated 20 ಅಕ್ಟೋಬರ್ 2024, 16:33 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪ್ರತಿ ಚುನಾವಣೆ ಸಂದರ್ಭದಲ್ಲೂ ಬಿಜೆಪಿಯವರು ಸವಾಲಿಗೆ ಬಿದ್ದವರಂತೆ ಸುಳ್ಳುಗಳನ್ನು ಹೇಳುತ್ತಾರೆ. ಅವರ ಸುಳ್ಳುಗಳನ್ನು ಜನರೆದುರು ಬಯಲುಗೊಳಿಸಬೇಕು’ ಎಂದು ಸಂಪುಟ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

ADVERTISEMENT

ಉಪ ಚುನಾವಣೆಗೆ ತಯಾರಿ ನಡೆಸುವ ಸಂಬಂಧ ಚರ್ಚಿಸಲು ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಭಾನುವಾರ ಮಂತ್ರಿ ಪರಿಷತ್‌ ಸಭೆ ನಡೆಸಿದರು.

ಉಪ ಚುನಾವಣೆ ನಡೆಯಲಿರುವ ಮೂರೂ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕೆ ತಲಾ 20 ರಿಂದ 30 ಶಾಸಕರನ್ನು ಮತ್ತು ಕೆಲವು ಸಚಿವರನ್ನು ಹೋಬಳಿವಾರು ನಿಯೋಜಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ, ಜಾತಿ ಜನಗಣತಿ, ಒಳ ಮೀಸಲಾತಿ ಮತ್ತು ಪಂಚಮಸಾಲಿ ಸಮುದಾಯದ ಬೇಡಿಕೆ ಕುರಿತು ಹೇಳಿಕೆಗಳನ್ನು ನೀಡುವ ವೇಳೆ ಎಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.  

‘ಈ ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಹೊಸ ಹೊಸ ಸುಳ್ಳುಗಳನ್ನು ಬಿಜೆಪಿಯವರು ಹೇಳುತ್ತಲೇ ಇರುತ್ತಾರೆ. ಈ ಸುಳ್ಳುಗಳಿಗೆ ಪ್ರತಿಯಾಗಿ ವಾಸ್ತವ ವಿಷಯವನ್ನು ತೆರೆದಿಡಬೇಕು. ನಮ್ಮ ಪಕ್ಷದ (ಕಾಂಗ್ರೆಸ್) ಅಭ್ಯರ್ಥಿಗಳು ಈ ಮೂರೂ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ, ಪ್ರತಿಯೊಬ್ಬರೂ ತಾವು ವಹಿಸಿಕೊಂಡ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸಂಪೂರ್ಣ ಶ್ರಮ‌ ಹಾಕಿ ಚುನಾವಣೆ ನಿರ್ವಹಿಸಬೇಕು’ ಎಂದು ಸಚಿವರಿಗೆ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.

‌‘ಲೋಕಸಭೆ ಚುನಾವಣೆ ಮುಗಿದ ಮರುದಿನವೇ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಸಿ.ಟಿ.ರವಿವರೆಗೆ ಪ್ರತಿಯೊಬ್ಬರೂ ರಾಶಿ ರಾಶಿ ಸುಳ್ಳು ಹೇಳಿದ್ದರು ಉಪಚುನಾವಣೆ ಮುಗಿಯುವರೆಗೂ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಮಾಣ ಇನ್ನೂ ಹೆಚ್ಚಲಿದೆ’ ಎಂದಿದ್ದಾರೆ.

‘ಜಾತಿ ಗಣತಿ ವರದಿ, ಒಳ ಮೀಸಲಾತಿ, ಪಂಚಮಸಾಲಿ ಸಮುದಾಯದ ಬೇಡಿಕೆ ಕುರಿತಂತೆ ಕೂಡಾ ಬಿಜೆಪಿಯವರು ಅಪಪ್ರಚಾರ ಮಾಡುತ್ತಾರೆ. ಈ ವಿಚಾರಗಳ ಬಗ್ಗೆಯೂ ನಮ್ಮ ನಿಲುವು ಸ್ಪಷ್ಟವಾಗಿದೆ. ಆಯಾ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ನಮ್ಮ ಬೆಂಬಲ ಇರುವುದನ್ನು ಮನದಟ್ಟು ಮಾಡಿಸಿದ್ದೇವೆ. ಆದರೂ, ಸರಣಿ ಸುಳ್ಳುಗಳ ಮೂಲಕ ಬಿಜೆಪಿ ನಿರಂತರ ಅಪಪ್ರಚಾರ ಮಾಡುತ್ತಿದೆ. ಈ ಬಗ್ಗೆ ಎಚ್ಚರ ಇರಲಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.