ADVERTISEMENT

2028ರಲ್ಲೂ ಕಾಂಗ್ರೆಸ್‌ಗೆ ಗದ್ದುಗೆ ‘ಗ್ಯಾರಂಟಿ’: ಸಿದ್ದರಾಮಯ್ಯ

ಸೌಮ್ಯಾರೆಡ್ಡಿ ಅಧಿಕಾರ ಸ್ವೀಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 16:27 IST
Last Updated 17 ಅಕ್ಟೋಬರ್ 2024, 16:27 IST
<div class="paragraphs"><p>ಬೆಂಗಳೂರಿನನಲ್ಲಿ ಗುರುವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರು ನೂತನ ಅಧ್ಯಕ್ಷೆ ಸೌಮ್ಯಾರೆಡ್ಡಿ ಅವರಿಗೆ ಕಾಂಗ್ರೆಸ್‌ ಬಾವುಟವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಲಕ್ಷ್ಮಿ ಹೆಬ್ಬಾಳಕರ್, ಅಲ್ಕಾ ಲಂಬಾ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಬಿ.ವಿ. ಶ್ರೀನಿವಾಸ್ ಉಪಸ್ಥಿತರಿದ್ದರು</p></div>

ಬೆಂಗಳೂರಿನನಲ್ಲಿ ಗುರುವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರು ನೂತನ ಅಧ್ಯಕ್ಷೆ ಸೌಮ್ಯಾರೆಡ್ಡಿ ಅವರಿಗೆ ಕಾಂಗ್ರೆಸ್‌ ಬಾವುಟವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಲಕ್ಷ್ಮಿ ಹೆಬ್ಬಾಳಕರ್, ಅಲ್ಕಾ ಲಂಬಾ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಬಿ.ವಿ. ಶ್ರೀನಿವಾಸ್ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ/ ಎಂ.ಎಸ್.ಮಂಜುನಾಥ್

ಬೆಂಗಳೂರು: ಬಡವರ ಬದುಕಿಗೆ ಆಸರೆಯಾಗಿರುವ ‘ಗ್ಯಾರಂಟಿ’ ಯೋಜನೆಗಳನ್ನು ವಿರೋಧಿಸುವ ಬಿಜೆಪಿಗೆ ಜನರು ತಕ್ಕ ಉತ್ತರ ನೀಡಲಿದ್ದು, 2028ರ ಚುನಾವಣೆಯಲ್ಲೂ ಕಾಂಗ್ರೆಸ್‌ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ADVERTISEMENT

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದವರು.

‘ಮುಂದಿನ ಚುನಾವಣೆಯಲ್ಲೂ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುತ್ತಿರುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ. ನೀವು ನಮಗೆ ರಾಜಕೀಯ ಶಕ್ತಿ ಕೊಡಿ. ನಾವು ನಿಮಗೆ ಆರ್ಥಿಕ ಶಕ್ತಿ ನೀಡುತ್ತೇವೆ’ ಎಂದರು.

‘ಬಿಜೆಪಿ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯನ್ನೂ ವಿರೋಧಿಸುತ್ತಿದೆ. ಬಹುಜನರ, ದುಡಿಯುವ ವರ್ಗಗಳ, ಶ್ರಮಿಕ ಸಂಸ್ಕೃತಿಯ ವಿರೋಧಿಯಾಗಿದೆ. ಮಹಿಳಾ ಮೀಸಲಾತಿ, ಮಹಿಳಾ ಹಕ್ಕುಗಳನ್ನೂ ವಿರೋಧಿಸುತ್ತದೆ. ರಾಜ್ಯದ 1.21 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು ಆರ್ಥಿಕ ಶಕ್ತಿ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯನ್ನು ಅತ್ತೆ– ಸೊಸೆ ಜಗಳ ಆಡ್ತಾರೆ ಎನ್ನುವ ಸುಳ್ಳು ನೆಪ ಮುಂದಿಟ್ಟು ಮಹಿಳೆಯರ ಖಾತೆಗೆ ಹೋಗುವ ಹಣ ತಡೆಯಲು ಷಡ್ಯಂತ್ರ ನಡೆಸಿತ್ತು’ ಎಂದು ಆರೋಪಿಸಿದರು.

ಗೃಹಲಕ್ಷ್ಮಿ ಹಣದಲ್ಲಿ ಅತ್ತೆ ಸೊಸೆಗೆ ಬಳೆ ಅಂಗಡಿ ಹಾಕಿಕೊಟ್ಟ, ಹೊಲಿಗೆ ಯಂತ್ರ ಕೊಡಿಸಿದ ಉದಾಹರಣೆಗಳು ಸಾಕಷ್ಟಿವೆ. ಬಿಜೆಪಿಯ ಬಡವರ ವಿರೋಧಿ ಮನೋಸ್ಥಿತಿಯನ್ನು ಜನರಿಗೆ ಅರ್ಥ ಮಾಡಿಸುವ ಕೆಲಸವನ್ನು ಮಾಡಬೇಕು. ಕಾಂಗ್ರೆಸ್‌ಗೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಕೋರಿದರು. 

ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ಸ್ಪಷ್ಟತೆ ಕೊಡುವ ಮೂಲಕ ಕಾರ್ಯಕರ್ತೆಯರನ್ನು ಸಜ್ಜುಗೊಳಿಸಿ, ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯ ಸೌಮ್ಯರೆಡ್ಡಿ ಅವರಿಗೆ ಇದೆ. ಅವರ ನೇತೃತ್ವದಲ್ಲಿ ಪಕ್ಷ ಬಲಗೊಳ್ಳಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ, ಸಚಿವರಾದ ಕೃಷ್ಣ ಬೈರೇಗೌಡ, ಲಕ್ಷ್ಮಿ ಹೆಬ್ಬಾಳಕರ್, ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ಶಾಸಕ ಹ್ಯಾರಿಸ್ ಉಪಸ್ಥಿತರಿದ್ದರು. 

ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮೋನೋತ್ಸವದ ನೆನಪಿಗೆ ರಾಜ್ಯದಲ್ಲಿ  100 ಬ್ಲಾಕ್‌ಮಟ್ಟದ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲಾಗುವುದು.
–ಡಿ.ಕೆ. ಶಿವಕುಮಾರ್, ಅಧ್ಯಕ್ಷ ಕೆಪಿಸಿಸಿ

ಕೆಪಿಸಿಸಿ ಅಧ್ಯಕ್ಷತೆ ಎಷ್ಟು ದಿನವೋ ಗೊತ್ತಿಲ್ಲ: ಶಿವಕುಮಾರ್

‘ನಾನು ಕೆಪಿಸಿಸಿ ಅಧ್ಯಕ್ಷನಾಗಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ಆದರೆ 2028ರ ವಿಧಾನಸಭೆ 2029ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ನಾವೆಲ್ಲರೂ ಅವರ ಕೈ ಬಲಪಡಿಸಬೇಕು. ದೇಶದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಪಕ್ಷದ ವಿಚಾರ ಹಾಗೂ ಯೋಜನೆಗಳನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಬೇಕು. ಬಿಜೆಪಿ ಏನೇ ತಿಪ್ಪರಲಾಗ ಹಾಕಿದರೂ 2028ಕ್ಕೆ ನಮ್ಮದೇ ಸರ್ಕಾರ ಬರುತ್ತದೆ’ ಎಂದರು. 

‘ಯಾವ ರೀತಿ ರಾಜಕಾರಣ ಮಾಡಬೇಕು ಎನ್ನುವುದು ಗೊತ್ತಿದೆ. ಅವರು ಏನೇ ಚದುರಂಗ ಆಟವಾಡಿದರೂ ಹೇಗೆ ಚೆಕ್‌ಮೇಟ್‌ ನೀಡಬೇಕು ಎಂದು ಕಲಿತಿರುವೆ. ರಾಜಕಾರಣ ಫುಟ್ಬಾಲ್‌ ಅಲ್ಲ ಅದು ಚದುರಂಗದಾಟ’ ಎಂದು ಹೇಳಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ಸೌಮ್ಯರೆಡ್ಡಿ ಅವರನ್ನು ಆಯ್ಕೆ ಮಾಡಿದಾಗ ಅನೇಕರು ಟೀಕೆ ಮಾಡಿದರು. ಆದರೂ ಅವರಿಗೆ ಸ್ಥಾನ ನೀಡಿದೆವು. ಬೆಂಗಳೂರಿನಲ್ಲಿ ರಾಜಕಾರಣ ಮಾಡುವುದು ಅಷ್ಟು ಸುಲಭವಲ್ಲ. ರಾಜಕಾರಣದಲ್ಲಿ ಸೌಮ್ಯಾ ಪಳಗಿದ್ದಾರೆ. ಪಕ್ಷ ಬಲಪಡಿಸಲು ಅವರಿಗೆ ಜವಾಬ್ದಾರಿ ನೀಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.