ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಮೊದಲೇ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆಗಳಿಗೆ ಅನುಮೋದನೆ ಪಡೆದು, ಅಂಕಿತಕ್ಕೆ ಸಲ್ಲಿಸುವ ರಾಜ್ಯ ಸರ್ಕಾರದ ನಡೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕಾರಣಕ್ಕೆ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದ್ದ ನಾಲ್ಕು ಮತ್ತು ಬಜೆಟ್ ಅಧಿವೇಶನದಲ್ಲಿ ಮಂಡಿಸಿದ್ದ ಎರಡು ಸೇರಿ ಒಟ್ಟು ಆರು ಮಸೂದೆಗಳನ್ನು ರಾಜ್ಯಪಾಲರು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇನ್ನು ಮುಂದೆ ಹೀಗಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ ಬಳಿಕ ಒಪ್ಪಿಗೆ ನೀಡಿದ್ದಾರೆ. ಅಲ್ಲದೆ, ಚುನಾವಣಾ ಆಯೋಗದಿಂದ ಅನುಮತಿ ಪಡೆದು ಗೆಜೆಟ್ ಹೊರಡಿಸುವಂತೆ ಕಾನೂನು ಮತ್ತು ಸಂಸದೀಯ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಕರಡು ಮಸೂದೆಗಳನ್ನು ತುರ್ತು ವಿಷಯವೆಂಬ ಕಾರಣಕ್ಕೆ ಮುಖ್ಯಮಂತ್ರಿಯ ಒಪ್ಪಿಗೆ ಮೇಲೆ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ಈ ರೀತಿ ಮಂಡಿಸಲು ‘ಕರ್ನಾಟಕ ಸರ್ಕಾರದ ವ್ಯವಹಾರ ನಿರ್ವಹಣೆಯ ನಿಯಮಗಳು– 1977’ರಲ್ಲಿ ಅವಕಾಶ ಇಲ್ಲ. ಈ ರೀತಿ ಮಾಡುವುದಾದರೆ ಈ ನಿಯಮಕ್ಕೆ ತಿದ್ದುಪಡಿ ತರಬೇಕು ಎಂದು ರಾಜ್ಯಪಾಲರು ಜ. 4 ಮತ್ತು ಮಾರ್ಚ್ 13ರಂದು ಬರೆದ ಪತ್ರದಲ್ಲಿ ಸಲಹೆ ನೀಡಿದ್ದರು.
ರಾಜ್ಯಪಾಲರ ಪತ್ರಕ್ಕೆ ಇದೇ 18ರಂದು ಮರು ಪತ್ರ ಬರೆದಿರುವ ಮುಖ್ಯಮಂತ್ರಿ, ‘ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ನಿಯಮ ತಿದ್ದುಪಡಿಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಸಲ್ಲಿಸಿರುವ ಮಸೂದೆಗಳಿಗೆ ಒಪ್ಪಿಗೆ ನೀಡಬೇಕು’ ಎಂದು ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.