ADVERTISEMENT

ನರೇಗಾ: ₹478.46 ಕೋಟಿ ಬಾಕಿ: ವೇತನ ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಸಿಎಸ್‌ ಪತ್ರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 16:34 IST
Last Updated 17 ಅಕ್ಟೋಬರ್ 2023, 16:34 IST
ವಂದಿತಾ ಶರ್ಮಾ
ವಂದಿತಾ ಶರ್ಮಾ   

ಬೆಂಗಳೂರು: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಅಡಿ ಈಗಾಗಲೇ ವೆಚ್ಚ ಮಾಡಿರುವ ₹478.46 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ.

‘ನರೇಗಾ ಯೋಜನೆಯಲ್ಲಿ ಈಗಾಗಲೇ ಬಳಕೆ ಪ್ರಮಾಣಪತ್ರ ಸಲ್ಲಿಸಿರುವ ವೆಚ್ಚಕ್ಕೆ ಅನುಗುಣವಾಗಿ ಈ ಮೊತ್ತ ಬಿಡುಗಡೆಗೆ ಬಾಕಿಯಿದೆ’ ಎಂದು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶೈಲೇಶ್‌ ಕುಮಾರ್‌ ಸಿಂಗ್‌ ಅವರಿಗೆ ಅ. 11 ರಂದು ಬರೆದ ಪತ್ರದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ತಿಳಿಸಿದ್ದಾರೆ.

‘ಹಣ ಬಳಕೆಯ ಪ್ರಮಾಣಪತ್ರಗಳು ಮತ್ತು ವಾರ್ಷಿಕ ಲೆಕ್ಕಪರಿಶೋಧನೆಯ ವಿವರಗಳನ್ನು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ರಾಜ್ಯದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಈಗಾಗಲೇ ಸಲ್ಲಿಸಿದೆ. ಆ. 29ರಿಂದ ಈ ಮೊತ್ತ ಬಿಡುಗಡೆಗೆ ಬಾಕಿ ಉಳಿದಿದೆ’ ಎಂಬ ಅಂಶವನ್ನು ಮುಖ್ಯಕಾರ್ಯದರ್ಶಿ ಪತ್ರದಲ್ಲಿ ಗಮನಕ್ಕೆ ತಂದಿದ್ದಾರೆ.

ADVERTISEMENT

‘ರಾಜ್ಯದ 31 ಜಿಲ್ಲೆಗಳಲ್ಲಿ 236 ತಾಲ್ಲೂಕುಗಳಿವೆ. ಈ ಪೈಕಿ, 195 ತಾಲ್ಲೂಕುಗಳನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌) ಮಾನದಂಡಗಳ ಅನ್ವಯ ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ಅವುಗಳಲ್ಲಿ 161 ತಾಲ್ಲೂಕುಗಳಲ್ಲಿ ತೀವ್ರ ಬರ, 34 ತಾಲ್ಲೂಕುಗಳಲ್ಲಿ ಸಾಧಾರಣ ಬರ ಇದೆ. ಬರ ಪರಿಸ್ಥಿತಿಯಿಂದಾಗಿ ಗ್ರಾಮೀಣ ಭಾಗದ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ನರೇಗಾ ಯೋಜನೆಯನ್ನು ಹೆಚ್ಚು ಅವಲಂಬಿತರಾಗಿದ್ದಾರೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಗುಳೆ ಹೋಗುವವರ ಸಂಖ್ಯೆ ಕಡಿಮೆ ಮಾಡುವುದು ಮತ್ತು ನೆಲೆಸಿರುವ ಸ್ಥಳಗಳಲ್ಲಿಯೇ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು ನರೇಗಾ ಯೋಜನೆಯ ಮುಖ್ಯ ಉದ್ದೇಶ. ವೇತನ ಪಾವತಿ ವಿಳಂಬದಿಂದಾಗಿ ಕಾರ್ಮಿಕರು ತಮ್ಮ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಉದ್ಯೋಗ ಅರಸಿಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗಲು ಆರಂಭಿಸಿದ್ದಾರೆ’ ಎಂದೂ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

‘ನಾವು 2022–23ನೇ ಆರ್ಥಿಕ ವರ್ಷದ ಬಳಕೆ ಪ್ರಮಾಣಪತ್ರ, ವಾರ್ಷಿಕ ಲೆಕ್ಕಪತ್ರದ ವಿವರಗಳನ್ನು ಮತ್ತು ಪ್ರಸಕ್ತ ಸಾಲಿನ ಆಗಸ್ಟ್‌ 30ರ ವರೆಗಿನ ವೇತನ ಬಳಕೆ ಪ್ರಮಾಣಪತ್ರವನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸೆ. 22ರಂದೇ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರವು 2023-24 ರ ಸಾಲಿನ ಅನುಮೋದಿತ ಕಾರ್ಮಿಕ ಬಜೆಟ್‌ನಂತೆ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ವೇತನ ಅನುದಾನವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಬೇಕು’ ಎಂದೂ ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.