ಬೆಳಗಾವಿ: ಇಲ್ಲಿನ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ, ಉದ್ಯಮಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬಿಜೆಪಿ ಟಿಕೆಟ್ ದೊರೆತಿರುವುದರಿಂದ, ಆ ಭಾಗದ ಪ್ರಭಾವಿ ನಾಯಕರಾದ ‘ಕತ್ತಿ ಸಹೋದರ’ರಿಂದ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟುವ ಲಕ್ಷಣಗಳು ದಟ್ಟವಾಗಿ ಗೋಚರಿಸಿವೆ. ‘ಒಳ ಏಟು’ಗಳು ಪಕ್ಷದ ಅಭ್ಯರ್ಥಿಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಪಕ್ಷದ ವರಿಷ್ಠರ ನಡೆಯಿಂದ ಅಸಮಾಧಾನಗೊಂಡಿರುವ ಹಾಗೂ ಮುಖಭಂಗ ಅನುಭವಿಸಿರುವ ಈ ಸಹೋದರರು, ತಮ್ಮ ಮುಂದಿನ ನಡೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ.
ಈ ಕ್ಷೇತ್ರದಲ್ಲಿ, ಜೊಲ್ಲೆ ಅವರೊಂದಿಗೆ ಹಿರಿಯ ಶಾಸಕ ಉಮೇಶ ಕತ್ತಿ ಸಹೋದರ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಅವರು ಹಿಂದಿನ ಲೋಕಸಭಾ ಚುನಾವಣೆಯಲ್ಲಿ 3ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಈ ಬಾರಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ, ಹೈಕಮಾಂಡ್ ಅಣ್ಣಾಸಾಹೇಬ ಅವರಿಗೆ ಮಣೆ ಹಾಕಿದೆ.
ಉದ್ಯಮಿಯೂ ಆದ ಅವರು ನಿಪ್ಪಾಣಿ ಮತಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಪತಿ. ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ 2004ರಲ್ಲಿ ಪ್ರಕಾಶ ಹುಕ್ಕೇರಿ ವಿರುದ್ಧ ಹಾಗೂ 2018ರ ಚುನಾವಣೆಯಲ್ಲಿ ಪ್ರಕಾಶ ಹುಕ್ಕೇರಿ ಪುತ್ರ ಗಣೇಶ ಹುಕ್ಕೇರಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೊಮ್ಮೆ ಅವರ ವಿರುದ್ಧವೇ ಸೆಣಸಬೇಕಾಗಿದೆ.
ವರಿಷ್ಠರಿಗೆ ತಲೆನೋವು: ತಮ್ಮ ಸಹೋದರನಿಗೆ ಟಿಕೆಟ್ ಕೊಡಿಸುವುದಾಗಿ ಉಮೇಶ ಕತ್ತಿ ನಡೆಸಿದ ಪ್ರಯತ್ನ ವಿಫಲವಾಗಿದೆ. ಆ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು, ಸಹಕಾರ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಅವರ ಮುನಿಸು ಶಮನಗೊಳಿಸುವುದು ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಟಿಕೆಟ್ ವಂಚಿತರಾದ ರಮೇಶ ಕತ್ತಿ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.
ಕಾದು ನೋಡಿ! :ಈ ನಡುವೆ, ‘ಏ. 4ರವರೆಗೆ ಕಾದು ನೋಡಿ’ ಎಂಬ ಹೇಳಿಕೆ ಮೂಲಕ ಉಮೇಶ ಕತ್ತಿ ತಮ್ಮ ಅಸಮಾಧಾನ
ಹೊರಹಾಕಿದ್ದಾರೆ.
‘ಅಣ್ಣಾಸಾಹೇಬ ಜೊಲ್ಲೆ ಉತ್ಸಾಹ ನೋಡಿ ಅವರಿಗೆ ಟಿಕೆಟ್ ಕೊಟ್ಟಿರಬಹುದು. ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಕೋರಿದ್ದೇವೆ. ಅವರು ಸ್ಪಂದಿಸುವ ವಿಶ್ವಾಸವಿದೆ. ಅದು ಆಗುವವರೆಗೆ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳುವುದಿಲ್ಲ; ಪ್ರತಿಕ್ರಿಯಿಸುವುದಿಲ್ಲ’ ಎಂದು ಉಮೇಶ ಕತ್ತಿ ಹೇಳಿದರು.
‘ರಮೇಶ ಕತ್ತಿ ಹಿಂದೆ ಸಂಸದರಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದರು. ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದರು. ಕ್ಷೇತ್ರದಾದ್ಯಂತ ಓಡಾಡಿ ಜನರನ್ನು ಭೇಟಿಯಾಗಿದ್ದರು; ಅವರ ಸಂಪರ್ಕದಲ್ಲಿದ್ದರು. ಹೀಗಾಗಿ, ಅವರು ಸಂಸದರಾಗಬೇಕು ಎಂದು ಜನ ಆಸೆ ಪಟ್ಟಿದ್ದಾರೆ.
ಹೀಗಾಗಿಯೇ, ಮರುಪರಿಶೀಲಿಸುವಂತೆ ಕೇಳಿದ್ದೇವೆ. ಯಾವುದನ್ನೂ ಇನ್ನೆರಡು ದಿನಗಳಲ್ಲಿ ತಿಳಿಸುತ್ತಾರೆ ಎನ್ನುವ ಭರವಸೆ ಇದೆ. ಏ. 4ರವರೆಗೆ ಏನೇನು ಬದಲಾವಣೆ ಆಗುತ್ತದೆಯೋ ನೋಡೋಣ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.