ಗೌರಿಬಿದನೂರು: ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರು ವರ್ಷದ ಗಂಡು ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ವೈದ್ಯರು ಹಾಗೂ ಮೂವರು ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.
‘ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಸಾವು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ ಯಲ್ಲಿ ಸೋಮವಾರ ವರದಿ ಪ್ರಕಟವಾಗಿತ್ತು.
ವರದಿ ಹಿನ್ನೆಲೆಯಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ಸಿಬ್ಬಂದಿ ಸಭೆ ನಡೆಸಿದರು. ಭಾನುವಾರ ಕರ್ತವ್ಯದಲ್ಲಿದ್ದ ವೈದ್ಯರು, ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ‘ಮುಂದೆ ಇಂತಹ ಘಟನೆ ನಡೆಯದಂತೆ ನಿಗಾವಹಿಸಬೇಕು’ ಎಂದು ಎಚ್ಚರಿಸಿದರು.
‘ಡಾ.ಶಿವಕುಮಾರ್ ಅವರು ವೈದ್ಯರು ಮತ್ತು ಸಿಬ್ಬಂದಿ ಹೇಳಿಕೆಗಳನ್ನು ಪಡೆದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ವರದಿ ಸಲ್ಲಿಸಲಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಓ.ರತ್ನಮ್ಮ ತಿಳಿಸಿದರು.
‘ಒಂದೆರಡು ದಿನಗಳಲ್ಲಿ ತನಿಖೆ ನಡೆಸಿ ಮಗುವಿನ ಸಾವಿಗೆ ಕಾರಣ ಹುಡುಕುತ್ತೇವೆ. ರೋಗಿಗಳ ಜತೆ ಹೇಗೆ ವರ್ತಿಸುವುದು, ತ್ವರಿತವಾಗಿ ಸೌಲಭ್ಯ ಒದಗಿಸಬೇಕು ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ’ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಲಕ್ಷ್ಮಿಕಾಂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.