ADVERTISEMENT

ಬಾಲಮಂದಿರದ ಬಾಲಕ ಸಾಫ್ಟ್‌ವೇರ್ ಎಂಜಿನಿಯರ್‌!

24 ವರ್ಷಗಳ ಬಳಿಕ ಕುಟುಂಬವನ್ನು ಸೇರಿದ ಯುವಕ

ನಾಗರಾಜ ಚಿನಗುಂಡಿ
Published 14 ಮಾರ್ಚ್ 2019, 18:32 IST
Last Updated 14 ಮಾರ್ಚ್ 2019, 18:32 IST
ಚಿಕ್ಕಪ್ಪ, ಸಹೋದರ, ತಾಯಿ ಜೊತೆ ಸುನೀಲ (ಬಲತುದಿ) ಇದ್ದಾರೆ
ಚಿಕ್ಕಪ್ಪ, ಸಹೋದರ, ತಾಯಿ ಜೊತೆ ಸುನೀಲ (ಬಲತುದಿ) ಇದ್ದಾರೆ   

ರಾಯಚೂರು: ಜಿಲ್ಲಾ ಬಾಲಕರ ಬಾಲಮಂದಿರಕ್ಕೆ 24 ವರ್ಷಗಳ ಹಿಂದೆ ಸೇರಿಕೊಂಡಿದ್ದ ರಾಯಚೂರಿನ ಬಾಲಕ ಈಗ ಬೆಂಗಳೂರಿನ ವಿಪ್ರೋ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌!

ಸುನೀಲ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ತಾಯಿ ಕೂಲಿ ಮಾಡುತ್ತಿದ್ದರು. ಇವರನ್ನು ನೋಡಿಕೊಳ್ಳುವ ಜವಾಬ್ದಾರಿ ಚಿಕ್ಕಪ್ಪ ತಾಯಪ್ಪ ಅವರ ಮೇಲಿತ್ತು. ಅವರಿಗೆ ಸಾಧ್ಯವಾಗದೆ ಆರು ವರ್ಷದ ಸುನೀಲರನ್ನು ರಾಯಚೂರಿನ ಬಾಲಮಂದಿರಕ್ಕೆ ಒಪ್ಪಿಸಿದ್ದರು.

ಓದಲು ಅನುಕೂಲವಾಗಲಿ ಎನ್ನುವ ಕಾರಣದಿಂದ ಬಾಲಮಂದಿರ ಸಿಬ್ಬಂದಿ ಸುನೀಲರನ್ನು ಬೆಳಗಾವಿ ಜಿಲ್ಲೆ ಖಾನಾಪುರಕ್ಕೆ ಕಳುಹಿಸಿಕೊಟ್ಟಿರುವುದಾಗಿ ದಾಖಲು ಮಾಡಿದ್ದರು. ವಾಸ್ತವದಲ್ಲಿ ಬೆಳಗಾವಿ ಪಕ್ಕದ ನಿರ್ಮಲನಗರದ ಕ್ರಿಶ್ಚಿಯನ್‌ ಸಂಸ್ಥೆಯಲ್ಲಿ ಸುನೀಲರಿಗೆ ಆಶ್ರಯ ನೀಡಲಾಗಿತ್ತು.ತಾಯಪ್ಪ ಹಾಗೂ ಸುನೀಲರ ತಾಯಿ ಪಾರ್ವತಿ ಎರಡು ಸಲ ಖಾನಾಪುರಕ್ಕೆ ಹೋಗಿದ್ದರು. ಎಷ್ಟು ಹುಡುಕಿದರೂ ಮಗ ಎಲ್ಲಿದ್ದಾನೆ ಎನ್ನುವುದು ಗೊತ್ತಾಗಲಿಲ್ಲ.

ADVERTISEMENT

ನಿರ್ಮಲನಗರದ ಕ್ರಿಶ್ಚಿಯನ್‌ ಸಂಸ್ಥೆಯಲ್ಲಿ ಫಾದರ್‌ ಶಿರೀಲ್‌ ಫಾರ್ನಾಂಡಿಸ್‌ ಅವರು ಸುನೀಲರಿಗೆ ಶೈಕ್ಷಣಿಕವಾಗಿ ಮಾರ್ಗದರ್ಶಕರಾಗಿದ್ದರು.ತಮಗೆ ಬಂಧುಗಳು ಇದ್ದಾರೆ ಎಂಬುದನ್ನು ಮರೆತು ಓದಿನಲ್ಲಿ ಮುಳುಗಿದ ಸುನೀಲ, ಬೆಳಗಾವಿಯಲ್ಲಿಯೇ ಎಸ್ಸೆಸ್ಸೆಲ್ಸಿ ಮತ್ತು ಡಿಪ್ಲೊಮೊ ಮುಗಿಸಿದರು. ಆನಂತರ ಬೆಂಗಳೂರಿನ ಸಿಎಂಆರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಯಲ್ಲಿ ಎಲೆಕ್ಟ್ರಾನಿಕ್ಸ್‌ ಆಂಡ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ಕೋರ್ಸ್‌ ಪೂರ್ಣಗೊಳಿಸಿದರು.

ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ವಿಪ್ರೋ ಕಂಪೆನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಕೆಲಸ ಸಿಕ್ಕಿತು. ಉದ್ಯೋಗಕ್ಕೆ ಸೇರಿದ ನಾಲ್ಕು ವರ್ಷಗಳ ಬಳಿಕ, ಸಹೋದರ ಅನಿಲ ಮತ್ತು ತಾಯಿಯನ್ನು ಹುಡುಕುವ ಹಟಕ್ಕೆ ಬಿದ್ದರು. ರಾಯಚೂರಿನ ಬಾಲಮಂದಿರದ ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ಮೂಲಕ ಮೊದಲು ಚಿಕ್ಕಪ್ಪನನ್ನು ಪತ್ತೆ ಹಚ್ಚಿದರು.

ಕೂಲಿ ಕೆಲಸಕ್ಕಾಗಿ ಸೊಲ್ಲಾಪುರದಲ್ಲಿ ನೆಲೆ ನಿಂತಿರುವ ತಾಯಿ ಮತ್ತು ಪುಣೆಯಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಹೋದರ ಈಚೆಗೆ ರಾಯಚೂರಿಗೆ ಬಂದಿದ್ದಾರೆ.

24 ವರ್ಷಗಳ ಬಳಿಕ ಮಗನನ್ನು ನೋಡಿದ ತಾಯಿ, ಸಹೋದರ ಹಾಗೂ ಚಿಕ್ಕಪ್ಪ ಅವರು ಮಾತಿಲ್ಲದೆ ಕಣ್ಣೀರಾದರು. ‘ಮಗ ಎಲ್ಲಿಯೇ ಇದ್ದರೂ ವಿದ್ಯಾವಂತನಾಗಲಿ ಎಂದು ದೇವರಿಗೆ ಬೇಡಿಕೊಳ್ಳುತ್ತಿದ್ದೆವು. ನಂಬಿಕೆ ಸುಳ್ಳಾಗಿಲ್ಲ. ಈಗಲಾದರೂ ಮಗ ಸಿಕ್ಕಿದ್ದಾನೆ’ ಎಂದು ತಾಯಿ ಭಾವುಕರಾಗಿದರು.

‘ನಾನು ಬಾಲಮಂದಿರದಲ್ಲಿ ಬೆಳೆದರೂ ಅನಾಥ ಎನ್ನುವ ಪ್ರಜ್ಞೆ ಇರಲಿಲ್ಲ. ತಾಯಿ, ಅಜ್ಜಿ ಹಾಗೂ ತಮ್ಮನ ಮುಖ ನೆನಪಿಗೆ ಬರುತ್ತಿತ್ತು. ಗೂಗಲ್‌ ಮೂಲಕ ರಾಯಚೂರಿನ ಮಕ್ಕಳ ರಕ್ಷಣಾ ಘಟಕದ ದೂರವಾಣಿ ಸಂಖ್ಯೆಯನ್ನು ಹುಡುಕಿದೆ. ಅವರಿಗೆ ಕರೆ ಮಾಡಿ ವಿಷಯ ತಿಳಿಸಿ, ಅವರ ನೆರವಿನಿಂದ ಮನೆಮಂದಿಯನ್ನು ಹುಡುಕಿದ್ದೇನೆ’ ಎನ್ನುತ್ತಾರೆ ಸುನೀಲ.

‘ನನ್ನ ಜೀವನದಲ್ಲಿ ಆಗಿರುವ ಬೆಳವಣಿಗೆಗಳನ್ನು ಒಮ್ಮೆಲೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾತು ಬರುತ್ತಿಲ್ಲ. ನಾನು ಮನೆಯಿಂದ ಹೊರಗಿದ್ದರೂ ಸಹೋದರ ಅನಿಲ ಬಿ.ಕಾಂ. ಓದಿ ನೌಕರಿ ಮಾಡುತ್ತಿದ್ದಾನೆ. ಸಹೋದರಿ ನರ್ಸಿಂಗ್‌ ಮುಗಿಸಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಅವರು ವಿದ್ಯಾವಂತರಾಗಿರುವುದನ್ನು ನೋಡಿ ಖುಷಿಯಾಗಿದೆ. ಈಗ ನನಗೆ ಜವಾಬ್ದಾರಿ ಬಂದಂತಾಗಿದೆ. ರಾಯಚೂರಿನಲ್ಲಿ ಸ್ವಂತ ಮನೆಯಿಲ್ಲ. ಚಿಕ್ಕವನಿದ್ದಾಗ ಗುಡಿಸಲಿನಲ್ಲಿ ಮಲಗಿದ್ದ ನೆನಪಿದೆ. ಬೆಳಗಾವಿಯಲ್ಲಿ ಮನೆ ಕಟ್ಟಿಕೊಂಡು, ಮದುವೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.