ಬೆಂಗಳೂರು: ರಾಜ್ಯದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿವೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರೆ, ಎಲ್ಲೂ ಅಂತಹ ಪ್ರಕರಣ ವರದಿಯಾಗಿಲ್ಲ. ನಮ್ಮದು ಬಾಲ್ಯ ವಿವಾಹ ಮುಕ್ತ ರಾಜ್ಯ ಎಂಬ ಸಿದ್ಧ ಉತ್ತರ ಬಂದರೂ ಅಚ್ಚರಿ ಇಲ್ಲ.
ವಾಸ್ತವವೇ ಬೇರೆ. ಸರ್ಕಾರಿ ಅಧಿಕಾರಿಗಳ ಮೂಗಿನಡಿಯೇ ಬಾಲ್ಯ ವಿವಾಹಗಳು ನಡೆಯುತ್ತಿವೆ. ಎಲ್ಲ ಹಂತದ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಇರುತ್ತಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ಈ ಪ್ರಕರಣಗಳು ಹೊರ ಜಗತ್ತಿಗೆ ಬಾರದಂತೆ ನೋಡಿಕೊಳ್ಳುತ್ತಾರೆ. ‘ಚೈಲ್ಡ್ ರೈಟ್ಸ್ ಟ್ರಸ್ಟ್’ ಸಂಸ್ಥೆ 2018ರಲ್ಲಿ ಬೆಳಗಾವಿ, ಬಾಗಲಕೋಟೆ, ಬೀದರ್, ಚಾಮರಾಜನಗರ, ಕೋಲಾರ ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷೆಯಿಂದ ಒಂದೇ ವರ್ಷದಲ್ಲಿ3,117 ಬಾಲ್ಯ ವಿವಾಹ ನಡೆದಿರುವುದು ಸಾಬೀತಾಗಿದೆ.
ಬಾಲ್ಯ ವಿವಾಹವಾದವರ ವಯೋಮಾನ 13ರಿಂದ 17 ವರ್ಷ. ಇದಕ್ಕಿಂತಲೂ ಬೆಚ್ಚಿ ಬೀಳುವ ಸಂಗತಿ ಎಂದರೆ ಆಡಿಕೊಂಡು, ಶಾಲೆಗೆ ಹೋಗಬೇಕಾದವರಲ್ಲಿ ಹಲವರು ಬಾಲ್ಯ ವಿವಾಹದ ಬಳಿಕ ವಿಧವೆಯಾಗಿದ್ದಾರೆ, ವೇಶ್ಯಾವೃತ್ತಿಗೆ ತಳ್ಳಲ್ಪಟ್ಟಿದ್ದಾರೆ, ಗಂಡನಿಂದ ದೂರವಾಗಿ ಬಹಳ ತೊಂದರೆಗೆ ಸಿಲುಕಿದ್ದರೆ, ಕೆಲವರು ಸುಖವಾಗಿದ್ದಾರೆ ಎಂದು ‘ಚೈಲ್ಡ್ ರೈಟ್ಸ್ ಟ್ರಸ್ಟ್’ನ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
ಕೆಲವರು ದೌರ್ಜನ್ಯಕ್ಕೆ ತುತ್ತಾಗಿದ್ದಾರೆ, ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಇಂತಹವರನ್ನು ಗುರುತಿಸಿ ಕತ್ತಲ ಕೂಪದಿಂದ ಹೊರ ತರುವ ಪ್ರಯತ್ನ ನಡೆಸಿದ್ದೇವೆ. ಅಚ್ಚರಿ ಎಂದರೆ, ಆಶಾ ಕಾರ್ಯಕರ್ತೆಯರು, ಎಎನ್‌ಎಂಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಮಾತನಾಡುವುದಿಲ್ಲ ಎಂದರು.
ನಾವು ಆಯ್ಕೆ ಮಾಡಿಕೊಂಡ ಜಿಲ್ಲೆಗಳ ಪ್ರತಿ ತಾಲ್ಲೂಕುಗಳಲ್ಲಿ 3ರಿಂದ 4 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದೆವು. ಗ್ರಾಮಗಳಲ್ಲಿ ಮನೆ ಮನೆಗೆ ಹೋದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಸಿನಿಮಾ ಲವ್‌ಸ್ಟೋರಿಗೆ ಬೆಚ್ಚಿರುವ ಪೋಷಕರು
l ಸಿನಿಮಾಗಳಲ್ಲಿ ಬರುವ ‘ಲವ್‌ಸ್ಟೋರಿ’ಗಳಿಂದ ಹೆಣ್ಣು ಹೆತ್ತವರಲ್ಲಿ ಆತಂಕ ಹೆಚ್ಚಾಗಿದೆ. ಸಿನಿಮಾಗಳಲ್ಲಿ ಹೈಸ್ಕೂಲ್ ಅಥವಾ ಕಾಲೇಜು ಹುಡುಗಿಯನ್ನು ಪ್ರೀತಿಸಿ ಓಡಿ ಹೋಗಿ ಮದುವೆ ಆಗುವ ಕಥೆಗಳು ಗ್ರಾಮಾಂತರ ಪ್ರದೇಶದಲ್ಲಿ ಭಾರೀ ಪರಿಣಾಮ ಬೀರಿದೆ. ತಮ್ಮ ಹೆಣ್ಣು ಮಕ್ಕಳೂ ಇದೇ ರೀತಿ ಓಡಿ ಹೋದರೆ ಎಂಬ ಭೀತಿಯಿಂದ ಬಾಲಕಿ ಮೈನೆರೆದ ತಕ್ಷಣವೇ ಮದುವೆ ಮಾಡುತ್ತಾರೆ.
l ಉಪ್ಪಾರ ಸಮುದಾಯದಲ್ಲಿ ಹೆಚ್ಚು ಚಾಮರಾಜನಗರ ಜಿಲ್ಲೆಯಲ್ಲಿ ಉಪ್ಪಾರ ಸಮುದಾಯದಲ್ಲಿ ಬಾಲ್ಯ ವಿವಾಹ ಹೆಚ್ಚು. ಹೆಣ್ಣು ಮಕ್ಕಳು ಋತುಮತಿ ಆಗುತ್ತಿದ್ದಂತೆ ಗಂಡು ಹುಡುಕಿ ಮದುವೆ ಮಾಡುತ್ತಾರೆ. ವಿಳಂಬ ಆದಷ್ಟೂ ಹೆಣ್ಣು ಮಕ್ಕಳಿಗೆ ಮದುವೆ ಆಗುವ ಸಾಧ್ಯತೆ ಕಡಿಮೆ.
l ನಗರ ಪ್ರದೇಶದಲ್ಲೂ ಹೆಚ್ಚು: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶ, ಹೆಚ್ಚು ವಿದ್ಯಾವಂತರಿರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲೂ ಬಾಲ್ಯ ವಿವಾಹ ನಡೆಯುತ್ತಿದೆ.
l ಪರಿಶಿಷ್ಟರಲ್ಲಿ ಹೆಚ್ಚು ಇತರ ಸಮುದಾಯಗಳಿಗೆ ಹೋಲಿಸಿದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಬಾಲ್ಯ ವಿವಾಹ ಪ್ರಮಾಣ ಹೆಚ್ಚು.
ಪೆಂಥಕೋಸ್ಟ್, ಕಲ್ವರಿ ಮುಂತಾದ ಕ್ರೈಸ್ತ ಪಂಗಡಗಳಿಗೆ ಮತಾಂತರಗೊಂಡವರಲ್ಲೂ ಬಾಲ್ಯವಿವಾಹ ಹೆಚ್ಚು. ಮುಸ್ಲಿಂ ಸಮುದಾಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಾಲ್ಯ ವಿವಾಹ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.