ADVERTISEMENT

ಮಗು ಅಪಹರಿಸಿ ₹ 1.50 ಲಕ್ಷಕ್ಕೆ ಮಾರಿದ್ದ !

ಗಿರಿನಗರ ಠಾಣೆ ಪೊಲೀಸರ ಕಾರ್ಯಾಚರಣೆ * ಪ್ರಕರಣ ದಾಖಲಾದ ಮೂರೇ ದಿನಕ್ಕೆ ಮಗು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 18:38 IST
Last Updated 3 ನವೆಂಬರ್ 2019, 18:38 IST
ಲೋಕೇಶ್
ಲೋಕೇಶ್   

ಬೆಂಗಳೂರು: ಕೂಲಿ ಕಾರ್ಮಿಕರೊಬ್ಬರ ಮಗುವನ್ನು ಅಪಹರಿಸಿ₹ 1.50 ಲಕ್ಷಕ್ಕೆ ಮಾರಾಟ ಮಾಡಿ ಎಂಟು ತಿಂಗಳ ಹಿಂದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಕಳ್ಳ ಟಿ. ಲೋಕೇಶ್ ಅಲಿಯಾಸ್ ಲೋಕಿ (40) ಎಂಬಾತನನ್ನು ಗಿರಿನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

‘ರಾಜಗೋಪಾಲ ನಗರ ನಿವಾಸಿ ಲೋಕಿ ವಿರುದ್ಧ ಸರಗಳವು ಹಾಗೂ ದ್ವಿಚಕ್ರ ವಾಹನ ಕಳವು ಆರೋಪದಡಿ ರಾಜಾಜಿನಗರ ಹಾಗೂ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಮದ್ದೂರು ಠಾಣೆ ವ್ಯಾಪ್ತಿಯಲ್ಲೂ ಆತ ಅಪರಾಧ ಕೃತ್ಯ ಎಸಗಿದ್ದ. ಮೂರು ಬಾರಿ ಜೈಲಿಗೂ ಹೋಗಿ ಜಾಮೀನು ಮೇಲೆ ಹೊರಬಂದಿದ್ದ ಆತ ಕಳವು ಮಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಯಾದಗಿರಿ ಜಿಲ್ಲೆಯ ಸುರಪುರದ ಚನ್ನಪ್ಪ ದಂಪತಿ ಮೂವರು ಮಕ್ಕಳ ಸಮೇತ ಬೆಂಗಳೂರಿಗೆ ಬಂದಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸಕ್ಕೆ ಸೇರಿದ್ದರು. ದಂಪತಿಯ ಮೂರು ವರ್ಷದ ಮಗು ಬಾಗೇಶ್‌ನನ್ನು ಮಾರ್ಚ್‌ 14ರಂದು ಅಪಹರಿಸಿದ್ದ ಲೋಕೇಶ್, ಬೇರೊಬ್ಬ ದಂಪತಿಗೆ ₹ 1.50 ಲಕ್ಷಕ್ಕೆ ಮಾರಾಟ ಮಾಡಿದ್ದ’ ಎಂದು ಮೂಲಗಳು ಹೇಳಿವೆ.

ADVERTISEMENT

ಆಟೊ ನೀಡಿದ್ದ ಸುಳಿವು:‘ಕಳವು ಕೃತ್ಯದ ಜೊತೆಗೆ ಮಕ್ಕಳನ್ನು ಅಪಹರಿಸಿ ಮಾರಾಟ ಮಾಡಲು ಆರೋಪಿ ಸಂಚು ರೂಪಿಸಿದ್ದ. ಕೂಲಿ ಕಾರ್ಮಿಕರ ಅಪಹರಣ ಮಾಡಿದರೆ ಪೊಲೀಸರು ಸಮರ್ಪಕವಾಗಿ ತನಿಖೆ ಮಾಡುವುದಿಲ್ಲವೆಂದು ತಿಳಿದು, ಅಂಥ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದ. ಅವಾಗಲೇ ಬಾಗೇಶ್ ಕಣ್ಣಿಗೆ ಬಿದ್ದಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಅಪಹರಣಕ್ಕೂ ವಾರದ ಮುಂಚೆ ಮಗು ಹಾಗೂ ಆತನ ಅಣ್ಣ ಮೌನೇಶ್‌ನಿಗೆ ಚಾಕಲೇಟ್‌ ಕೊಟ್ಟು ಪರಿಚಯ ಮಾಡಿಕೊಂಡಿದ್ದ. ಅವರ ಜೊತೆ ಆಟವನ್ನೂ ಆಡುತ್ತಿದ್ದ. ಅಪಹರಣ ದಿನದಂದು ಆಟೊದಲ್ಲಿ ಬಂದಿದ್ದ ಆರೋಪಿ, ಮೌನೇಶ್‌ನಿಗೆ ₹ 10 ಕೊಟ್ಟು ಜ್ಯೂಸ್‌ ತರುವಂತೆ ಹೇಳಿ ಕಳುಹಿಸಿದ್ದ. ನಂತರ ಮಗುವನ್ನು ಆಟೊದಲ್ಲಿ ಹತ್ತಿಸಿಕೊಂಡು ಅಪಹರಣ ಮಾಡಿದ್ದ’ ಎಂದು ಮೂಲಗಳು ತಿಳಿಸಿವೆ.

‘ಪರಿಚಯಸ್ಥ ದಂಪತಿಗೆ ಮಗು ಕೊಟ್ಟಿದ್ದ ಆರೋಪಿ, ’ಇದು ನನ್ನ ಸಂಬಂಧಿ ಮಗು. ಇದನ್ನು ನಿಮ್ಮ ಬಳಿ ಇಟ್ಟುಕೊಂಡು ₹1.50 ಲಕ್ಷ ಕೊಡಿ. ಸ್ವಲ್ಪ ದಿನದ ನಂತರ ಕಾನೂನು ಪ್ರಕಾರವೇ ನಿಮಗೆ ದತ್ತು ಕೊಡಿಸುತ್ತೇನೆ’ ಎಂದು ಹೇಳಿದ್ದ. ಅದನ್ನು ನಂಬಿದ್ದ ದಂಪತಿ ಹಣ ಕೊಟ್ಟಿದ್ದರು. ಹಣದ ಸಮೇತವೇ ಆರೋಪಿ ನಾಪತ್ತೆಯಾಗಿದ್ದ.’

‘ಮಗು ಕಾಣೆಯಾಗುತ್ತಿದ್ದಂತೆ ಗಾಬರಿಗೊಂಡಿದ್ದ ತಂದೆ ಚನ್ನಪ್ಪ ಠಾಣೆಗೆ ದೂರು ನೀಡಿದ್ದರು. ಆರೋಪಿ ಬಳಸಿದ್ದ ಆಟೊದ ಸುಳಿವು ಆಧರಿಸಿ ತನಿಖೆ ಕೈಗೊಂಡು ಮೂರೇ ದಿನದಲ್ಲಿ ಮಗುವನ್ನು ರಕ್ಷಿಸಲಾಯಿತು. ಆದರೆ, ಲೋಕೇಶ್ ಸಿಕ್ಕಿರಲಿಲ್ಲ. ಆತನ ಸಂಬಂಧಿಕರಾದ ಅನಿತಾ ಹಾಗೂ ಸಂದೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಲೋಕೇಶ್‌ನೇ ಕೃತ್ಯ ಎಸಗಿದ್ದು ಖಾತ್ರಿ ಆಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಸಿಮ್ ಕಾರ್ಡ್ ಬದಲಿಸಿ ಓಡಾಟ
‘ಮಗು ಖರೀದಿಸಿದ್ದ ದಂಪತಿಗೆ, ‘ಅಪಹರಣ ಮಾಡಿದ ಮಗು’ ಎಂಬುದು ಗೊತ್ತಿರಲಿಲ್ಲ. ಸಂಬಂಧಿಕರ ಮಗು ಎಂದಿದ್ದಕ್ಕೆ ತೆಗೆದುಕೊಂಡೆವು’ ಎಂದು ಹೇಳಿಕೆ ನೀಡಿದ್ದರು. ಮಗುವನ್ನೂ ವಾಪಸು ನೀಡಿದ್ದರು’ ಎಂದು ಮೂಲಗಳು ಹೇಳಿವೆ.

‘ದಂಪತಿ ಬಳಿ ಪೊಲೀಸರು ಬಂದು ಹೋಗಿದ್ದಾರೆಂಬ ಮಾಹಿತಿ ಆರೋಪಿಗೆ ಗೊತ್ತಾಗಿತ್ತು. ತನ್ನನ್ನೂ ಪೊಲೀಸರು ಪತ್ತೆ ಮಾಡಬಹುದು ಎಂದುಕೊಂಡ ಆರೋಪಿ ತಲೆಮರೆಸಿಕೊಂಡು ಓಡಾಡಲಾರಂಭಿಸಿದ್ದ. ಸಿಮ್ ಕಾರ್ಡ್‌ ಬದಲಿಸಿ ಊರೂರು ಸುತ್ತುತ್ತಿದ್ದ’ ಎಂದು ತಿಳಿಸಿವೆ.

200 ಆಟೊ ಪರಿಶೀಲನೆ
‘ಮಹದೇವ ಎಂಬುವರಿಗೆ ಸೇರಿದ್ದ ಆಟೊವನ್ನು ಬಾಡಿಗೆ ಪಡೆದು ಆರೋಪಿ ಕೃತ್ಯ ಎಸಗಿದ್ದ. ಮಗುವನ್ನು ಅಪಹರಿಸಿಕೊಂಡು ಹೋದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೆ, ಆಟೊದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ಕೆಲ ಸಂಖ್ಯೆಗಳು ಮಾತ್ರ ಕಾಣಿಸಿದ್ದವು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲವು ಸಂಖ್ಯೆಗಳು ಹಾಗೂ ವಿನ್ಯಾಸದ ಆಧಾರದಲ್ಲೇ ಆಟೊ ಪತ್ತೆಗೆ ಹುಡುಕಾಟ ನಡೆಸಲಾಯಿತು. ನಗರದ 200ಕ್ಕೂ ಹೆಚ್ಚು ಆಟೊಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಅದೇ ವೇಳೆಯೇ ಮಹದೇವ ಅವರ ಆಟೊವನ್ನು ಆರೋಪಿ ಬಾಡಿಗೆ ಪಡೆದ ಸಂಗತಿ ತಿಳಿಯಿತು. ಅದೇ ಸುಳಿವಿನಿಂದ ಪ್ರಕರಣ ಭೇದಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.