ADVERTISEMENT

ಕೊಡಗು ಸಂತ್ರಸ್ತರಿಗೆ ನೆರವಾದ ಶಾಲಾ ಬಾಲಕ

ವಿನಾಯಕ ಭಟ್ಟ‌
Published 13 ನವೆಂಬರ್ 2019, 23:00 IST
Last Updated 13 ನವೆಂಬರ್ 2019, 23:00 IST
ಹರ್ಷ
ಹರ್ಷ   

ದಾವಣಗೆರೆ: ಕಳೆದ ವರ್ಷ ಅತ್ತ ಕೊಡಗು ಜಿಲ್ಲೆಯಲ್ಲಿ ಮಹಾ ಮಳೆಯಲ್ಲಿ ಜನರ ಬದುಕು ಮುಳುಗುತ್ತಿದ್ದರೆ, ಇತ್ತ ಅದನ್ನು ಟಿವಿಯಲ್ಲಿ ನೋಡಿದ ನಗರದ ಶಾಲಾ ಬಾಲಕನ ಹೃದಯ ಮಿಡಿಯುತ್ತಿತ್ತು. ಸಂತ್ರಸ್ತರಿಗೆ ತಾನೂ ‘ಆಸರೆ’ಯಾಗಬೇಕು ಎಂಬ ಅಪರೂಪದ ಕಾಳಜಿ ಅವನಲ್ಲಿ ಮೂಡಿತು. ಸಂತ್ರಸ್ತರ ನೋವಿಗೆ ಕಣ್ಣೀರಿಟ್ಟಿದ್ದ ಅವನು, ಜನರಿಂದ ₹ 25,400 ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿಕೊಟ್ಟ ಬಳಿಕ ಹರ್ಷಗೊಂಡಿದ್ದ.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಈಗ 5ನೇ ತರಗತಿಯಲ್ಲಿ ಓದುತ್ತಿರುವ ಹರ್ಷ ಈ ಸಾಧನೆ ಮಾಡಿದ ಬಾಲಕ. ದಕ್ಷಿಣ ಸಂಚಾರ ಠಾಣೆಯ ಕಾನ್‌ಸ್ಟೆಬಲ್‌ ಆಗಿರುವ ತಂದೆ ಎಸ್‌. ಹೇಮಣ್ಣ ಅವರು ಕೆಲಸ ಮಾಡುತ್ತಿದ್ದ ನಗರದ ಅರುಣಾ ಸರ್ಕಲ್‌ನಲ್ಲಿ 2018ರ ಆಗಸ್ಟ್‌ 19ರಂದು ಸಂಜೆ ವಾಹನ ಸವಾರರಿಂದ ‘ಪರಿಹಾರ ನಿಧಿ’ ಸಂಗ್ರಹಿಸಿದ್ದ. ಮರುದಿನ ಸಂಜೆ ತನ್ನ ತಮ್ಮ ವೈಭವ್‌ನನ್ನೂ ಜೊತೆಗೆ ಕರೆದುಕೊಂಡು ನಿಧಿ ಸಂಗ್ರಹಿಸುವ ಮೂಲಕ ಮಾನವೀಯತೆ ಮೆರೆದಿದ್ದ. ತಾನು ಸಂಗ್ರಹಿಸಿದ್ದ ₹ 25,400 ಅನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡುವ ಮೂಲಕ ಪ್ರಶಂಸೆಗೆ ಪಾತ್ರನಾಗಿದ್ದ.

‘ಈ ವರ್ಷ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ₹ 1,000 ಅನ್ನು ಶಾಲೆಗೆ ತೆಗೆದುಕೊಂಡು ಹೋಗಿ ಕೊಟ್ಟಿದ್ದೆ. ವೈದ್ಯನಾಗಿ ಬಡವರ ಸೇವೆ ಮಾಡಬೇಕು ಎಂಬ ಗುರಿ ಹೊಂದಿದ್ದೇನೆ’ ಎನ್ನುತ್ತಾನೆ ಹರ್ಷ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.