ಆಟ – ಪಾಟಕ್ಕೆ ಸೀಮಿತರಾಗದೆ ಭಿನ್ನ ಆಲೋಚನೆ – ಆಚರಣೆಗಳ ಮೂಲಕ ಸಾಮಾಜಿಕ ಹೊಣೆಗಾರಿಕೆ ಮೆರೆದಿರುವ ಈ ಮಕ್ಕಳು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿ ಇತರೆ ಮಕ್ಕಳಿಗೂ ಮಾದರಿಯಾಗಿದ್ದಾರೆ. ಈ ಸಾಧಕ ಮಕ್ಕಳ ಸಂಕ್ಷಿಪ್ತ ಪರಿಚಯ...
ರಾಯಚೂರು: ಕೃಷ್ಣಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ರಸ್ತೆಯಲ್ಲಿ ಆಂಬುಲೆನ್ಸ್ ಸಂಚರಿಸಲು ಪ್ರಾಣದ ಹಂಗು ತೊರೆದು ದಾರಿ ತೋರಿಸಿದ್ದ ಬಾಲಕ ವೆಂಕಟೇಶ ನಾಯಕ ಬದುಕು ಈಗ ಬದಲಾಗಿದೆ.
ಮಾಧ್ಯಮಗಳಲ್ಲಿ ಬಿತ್ತರವಾದಬಾಲಕನ ಸಾಹಸ ಪ್ರವೃತ್ತಿ ನೋಡಿದ ನೆರೆ ರಾಜ್ಯಗಳ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸಿದರು. ಕೇರಳದ ಕಲ್ಲಿಕೋಟೆಯ ಹಲವು ಸಂಘ–ಸಂಸ್ಥೆಗಳವರು ಅಭಿನಂದನಾ ಸಮಾರಂಭ ಏರ್ಪಡಿಸಿ ವೆಂಕಟೇಶನನ್ನು ಸನ್ಮಾನಿಸಿ, ಆತನ ಶಿಕ್ಷಣಕ್ಕೆ ನೆರವು ನೀಡಿದ್ದಾರೆ.
ದೇವದುರ್ಗ ತಾಲ್ಲೂಕಿನ ಹಿರೇರಾಯಕುಂಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 6ನೇ ತರಗತಿಯಲ್ಲಿ ವೆಂಕಟೇಶ ನಾಯಕ ಓದುತ್ತಿದ್ದಾನೆ. ರಾಯಚೂರು ಜಿಲ್ಲಾಡಳಿತವು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ‘ಶೌರ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.
ಕೇರಳದ ಸರ್ಕಾರೇತರ ಸಂಸ್ಥೆ ಹೆಲ್ಪಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್, ಎಂಐಯುಪಿ ಸ್ಕೂಲ್ ಹಾಗೂ ಫೋಕಸ್ ಇಂಡಿಯಾ ಪ್ರತಿನಿಧಿಗಳು ಈಚೆಗೆ ವೆಂಕಟೇಶನ ಮನೆಗೆ ಭೇಟಿ ನೀಡಿದರು. ₹5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುತ್ತಿದ್ದಾರೆ.
ತಂದೆ ದೇವೇಂದ್ರಪ್ಪ ಸಣ್ಣ ರೈತರು. ‘ಉತ್ತಮವಾಗಿ ಅಧ್ಯಯನ ಮಾಡಿ, ಏನಾದರೂ ನೌಕರಿ ಮಾಡಲಿ ಎನ್ನುವುದು ನಮ್ಮ ಬಯಕೆ. ಸಾಹಸ ಆತನ ತಲೆಗೆ ಹೊಳೆದ ವಿಚಾರ. ಯಾರೂ ಹೇಳಿಕೊಟ್ಟಿರಲಿಲ್ಲ' ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.