ಬೆಂಗಳೂರು: ವಯೋಮಿತಿ ಆಧಾರದಲ್ಲಿ ಶಕ್ತಿ ಯೋಜನೆಯನ್ನು ಪುರುಷರಿಗೂ ವಿಸ್ತರಿಸುವ ಕುರಿತು ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ನೀಲಸಂದ್ರದ ಪಾಲಿಕೆ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಚರಣ್ ಪ್ರಶ್ನೆಗೆ ಅವರು ಉತ್ತರಿಸಿದರು.
‘ನೀವು ಐದು ಗ್ಯಾರಂಟಿ ನೀಡಿದ್ದೀರಿ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದು, ನಮ್ಮ ಅಮ್ಮ ಅಕ್ಕ, ತಂಗಿಯರನ್ನು ಮಾತ್ರ ಊರಿಗೆ ಕರೆದುಕೊಂಡು ಹೋಗುತ್ತಾರೆ. ಗಂಡು ಮಕ್ಕಳಿಗೆ ಈ ಯೋಜನೆ ಇಲ್ಲವೇ’ ಎನ್ನುವುದು ಚರಣ್ ಪ್ರಶ್ನೆ.
‘ನಿಮ್ಮ ತಾಯಿಗೆ ₹2000, ಬಸ್ ಉಚಿತ ಪ್ರಯಾಣ, ನಿಮ್ಮ ಮನೆಗೆ 10 ಕೆಜಿ ಅಕ್ಕಿ, ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಪುರುಷರಿಗೂ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.
‘ನಾನೂ ಮುಖ್ಯಮಂತ್ರಿಯಾಗಬೇಕು. ಅದಕ್ಕಾಗಿ ಏನು ಓದಬೇಕು? ಹೇಗೆ ದಾರಿ ಹುಡುಕಬೇಕು’ ಎಂದು ಪಂಚಶೀಲ ನಗರದ ಪಾಲಿಕೆ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ವಿದ್ಯಾಸಾಗರ್ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರು ಆಗಬಹುದು. ನಮ್ಮ ತಂದೆ ರೈತರಾಗಿದ್ದರು. ನಾನು ರಾಜಕೀಯ ಕ್ಷೇತ್ರ ಆರಿಸಿಕೊಂಡೆ. ಯಾವುದೇ ವೃತ್ತಿ, ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕಾದರೆ ಗುಣಮಟ್ಟದ ಶಿಕ್ಷಣ, ಆರ್ಥಿಕ ಸ್ಥಿತಿ ಹಾಗೂ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಮಕ್ಕಳಲ್ಲಿ ಜ್ಞಾನ, ನಾಯಕತ್ವದ ಗುಣ ಬೆಳೆಸಲೆಂದೇ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಲು ಹಾಗೂ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ವಿಧಾನಸೌಧ ಶಾಸನ ಸಭೆ ನಡೆಯುವ ಜಾಗ. ಇಂತಹ ಜಾಗಕ್ಕೆ ನೀವು ಬರಬೇಕು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಐಎಎಸ್ ಅಧಿಕಾರಿಗಳಾಗುವ ಪಣ ತೊಡಬೇಕು’ ಎಂದರು.
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ‘ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಸರ್ಕಾರಿ ಶಾಲೆಯ ಮಕ್ಕಳೇ ಆಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕೆಲ ಮೂಲ ಸೌಕರ್ಯಗಳ ಅಭಾವವಿದೆ. ಹಂತ-ಹಂತವಾಗಿ ಬಗೆಹರಿಸಲಾಗುವುದು. ಶಿಕ್ಷಕರ ನೇಮಕಾತಿಗೂ ಆದ್ಯತೆ ನೀಡಿದ್ದೇವೆ’ ಎಂದರು.
‘ಖಾಸಗಿ ಶಾಲೆಗಳಲ್ಲಿ ವ್ಯಾನ್, ಬಸ್ ವ್ಯವಸ್ಥೆ ಇರುತ್ತದೆ, ಪಾಲಿಕೆ ಶಾಲೆಗಳಿಗೆ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ’ ಎಂದು ವಿದ್ಯಾರ್ಥಿ ನಿರ್ಭೀತಾ ಪ್ರಶ್ನೆಗೆ ಉತ್ತರಿಸಿದ ಮಧುಬಂಗಾರಪ್ಪ, ಪಾಲಿಕೆ ಶಾಲೆಗಳಿಗೆ ಹತ್ತಿರದ ಮಕ್ಕಳೇ ಬರುತ್ತಾರೆ. ಹಾಗಾಗಿ, ವಾಹನ ವ್ಯವಸ್ಥೆ ಮಾಡಿಲ್ಲ. ಈ ಕುರಿತು ಸ್ಥಳೀಯ ಸಂಸ್ಥೆಗಳ ಜತೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತೆ ವಿನೋತ್ ಪ್ರಿಯಾ ಉಪಸ್ಥಿತರಿದ್ದರು.
ದಟ್ಟಣೆ ನಿಯಂತ್ರಿಸಲಿವೆ ಸುರಂಗ ರಸ್ತೆಗಳು
ನಗರ ಸಂಚಾರ ದಟ್ಟಣೆ ನಿಯಂತ್ರಿಸಲು ಸುರಂಗ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ‘ಶಾಲಾ ಅವಧಿಯಲ್ಲಿ ವಾಹನಗಳ ದಟ್ಟಣೆ ಕಾರಣಕ್ಕೆ ನಿಗದಿತ ಸಮಯಕ್ಕೆ ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ. ಮಾಲಿನ್ಯವೂ ಹೆಚ್ಚಾಗಿದೆ’ ಎಂಬ ಕೌಸಲ್ಯ ಪ್ರಶ್ನೆಗೆ ಅವರು ಉತ್ತರಿಸಿದರು. ‘ಬೆಂಗಳೂರಿನ ಹವಾಗುಣದಿಂದಾಗಿ ತಂತ್ರಜ್ಞಾನ ವೈದ್ಯಕೀಯ ಹಬ್ ಆಗಿ ಬೆಳೆದಿದೆ. 20 ವರ್ಷಗಳ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ 70 ಲಕ್ಷ ಜನಸಂಖ್ಯೆಯಿತ್ತು. ಈಗ 1.40 ಕೋಟಿ ಇದೆ. ವರ್ತುಲ ರಸ್ತೆ ಮೆಟ್ರೋ ಮಾರ್ಗ ಉಪ ನಗರ ಯೋಜನೆಗಳಿಂದಲೂ ದಟ್ಟಣೆ ನಿಯಂತ್ರಣ ಸಾಧ್ಯವಾಗಿಲ್ಲ. ಹಾಗಾಗಿ ಸುರಂಗ ರಸ್ತೆಗಳಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.