ADVERTISEMENT

ಮಕ್ಕಳ ಆನ್‌ಲೈನ್‌ ಗೀಳು ಮುಕ್ತಿಗೆ 10 ತಂಡ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 20:30 IST
Last Updated 14 ಆಗಸ್ಟ್ 2023, 20:30 IST
ಬೆಂಗಳೂರಿನಲ್ಲಿ ಸೋಮವಾರ ಮಕ್ಕಳ ಮೇಲಿನ ಆನ್‌ಲೈನ್ ಲೈಂಗಿಕ ಶೋಷಣೆ ತಡೆ ಕುರಿತ ಸಮಾಲೋಚನಾ ಸಭೆಯಲ್ಲಿ  ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮಾತನಾಡಿದರು. ಅಶೋಕ್ ಕುಮಾರ್, ತಂಗಪೆರುಮಾಳ್ ಪೊನ್‌ಪಾಂಡಿ, ಭಾರತಿ ದೇವಿ ಇದ್ದರು– ಪ್ರಜಾವಾಣಿ ಚಿತ್ರ. 
ಬೆಂಗಳೂರಿನಲ್ಲಿ ಸೋಮವಾರ ಮಕ್ಕಳ ಮೇಲಿನ ಆನ್‌ಲೈನ್ ಲೈಂಗಿಕ ಶೋಷಣೆ ತಡೆ ಕುರಿತ ಸಮಾಲೋಚನಾ ಸಭೆಯಲ್ಲಿ  ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮಾತನಾಡಿದರು. ಅಶೋಕ್ ಕುಮಾರ್, ತಂಗಪೆರುಮಾಳ್ ಪೊನ್‌ಪಾಂಡಿ, ಭಾರತಿ ದೇವಿ ಇದ್ದರು– ಪ್ರಜಾವಾಣಿ ಚಿತ್ರ.    

ಬೆಂಗಳೂರು: ಮೊಬೈಲ್‌, ಆನ್‌ಲೈನ್‌ ಗೀಳಿನಿಂದ ಮಕ್ಕಳನ್ನು ಹೊರತರಲು ಜಿಲ್ಲಾವಾರು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಅದಕ್ಕಾಗಿ ವಿವಿಧ ಕ್ಷೇತ್ರಗಳ ತಜ್ಞರು, ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ 10 ತಂಡಗಳನ್ನು ರಚಿಸಲಾಗುತ್ತಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹೇಳಿದರು.

ಅನನ್ಯ ಎಜುಕೇಷನ್‌ ಅಂಡ್‌ ಎಂಪವರ್‌ಮೆಂಟ್‌ ಟ್ರಸ್ಟ್‌, ಚಿಲ್ಡ್ರನ್‌ ಆಫ್‌ ಇಂಡಿಯಾ ಫೌಂಡೇಷನ್‌ ಸೋಮವಾರ ಹಮ್ಮಿಕೊಂಡಿದ್ದ ‘ಮಕ್ಕಳ ಮೇಲಿನ ಆನ್‌ಲೈನ್‌ ಲೈಂಗಿಕ ಶೋಷಣೆ ತಡೆ’ ಕುರಿತ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್‌ ನಂತರ ಬಹುತೇಕ ಮಕ್ಕಳು ಆನ್‌ಲೈನ್‌ಗೆ ಅಂಟಿಕೊಂಡಿದ್ದಾರೆ. ಅವರನ್ನು ನಿಧಾನವಾಗಿ ವ್ಯಸನದಿಂದ ಹೊರತಂದು ಪುಸ್ತಕಗಳ ಓದು, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಬೇಕಿದೆ. ದುಡುಕಿದರೆ ಮಕ್ಕಳ ಜೀವಕ್ಕೆ ಅಪಾಯ ಎದುರಾಗಲಿದೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಅರ್ಥಮಾಡಿಸಲು ತಂಡದ ಸದಸ್ಯರು ಕನಿಷ್ಠ ಮೂರು ಜಿಲ್ಲೆಗಳಿಗೆ ಭೇಟಿ ನೀಡುವರು. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಪೋಷಕರ ಜತೆ ಚರ್ಚಿಸುವರು. ಸುದೀರ್ಘ ಅವಧಿ ಬಯಸುವ ಈ ಕಾರ್ಯವನ್ನು ತಂಡಗಳು ಕನಿಷ್ಠ ಐದು ವರ್ಷಗಳಾದರೂ ನಿರ್ವಹಿಸಬೇಕು ಎನ್ನುವ ಆಲೋಚನೆ ಇದೆ ಎಂದರು.

ADVERTISEMENT

ಸಿಐಡಿ ಆರ್ಥಿಕ ವಿಭಾಗದ ಎಸ್‌.ಪಿ. ಎಂ.ಡಿ.ಶರತ್‌ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿತನದ ಸುರಕ್ಷೆಯ ಖಾತ್ರಿ ಇರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಫೋಟೊ, ವಿಚಾರ ವಿನಿಮಯ ಮಾಡಿಕೊಳ್ಳಬಾರದು. ಸೈಬರ್ ಅಪರಾಧಗಳ ಕುರಿತು ಪೋಷಕರು‌ ನಿಗಾವಹಿಸಬೇಕು. ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ವಂಚನೆ, ಅಪಾಯದ ಮುನ್ಸೂಚನೆ ಸಿಕ್ಕ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ವೈ.ಮರಿಸ್ವಾಮಿ ‍ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಟರ್‌ನ್ಯಾಷನಲ್‌ ಜಸ್ಟೀಸ್‌ ಮಿಷನ್‌ ವಿಭಾಗೀಯ ಉಪಾಧ್ಯಕ್ಷ ಎ.ಎಂ.ಅಶೋಕ್, ನಿಮ್ಹಾನ್ಸ್ ಮಾನಸಿಕ ಸಮಾಜಶಾಸ್ತ್ರದ ವಿಭಾಗದ ಮಾಜಿ ಉಪಾಧ್ಯಕ್ಷ ಡಾ.ಆರ್‌.ಧನಶೇಖರ್ ಸಾಂಡಿಯನ್‌, ಡಿಟಿಎಚ್‌ ಸಂಸ್ಥೆಯ ನಿರ್ದೇಶಕ ತಂಗಪೆರುಮಾಳ್ ಪೊನ್‌ಪಾಂಡಿ, ಚೈಲ್ಡ್‌ ರೈಟ್‌ ಟ್ರಸ್ಟ್‌ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮ, ಬೆಂಗಳೂರು ಕೇಂದ್ರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭಾರತಿದೇವಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.