ADVERTISEMENT

‘ಚಿಲುಮೆ’: ಆ್ಯಪ್ ಲಾಕ್‌ ತೆರೆದ ಪೊಲೀಸರು

*ಸಮೀಕ್ಷಾ ಆ್ಯಪ್‌ನಲ್ಲಿ ‘ಅಕ್ರಮ’ದ ಮಾಹಿತಿ, * ಬಿಬಿಎಂಪಿಯ 45 ಅಧಿಕಾರಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 18:17 IST
Last Updated 23 ನವೆಂಬರ್ 2022, 18:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಮಾಡಿಕೊಂಡಿದ್ದ ಆರೋಪ ಹೊತ್ತಿರುವ ‘ಚಿಲುಮೆ’ ಸಂಸ್ಥೆಯ ‘ಸಮೀಕ್ಷಾ ಆ್ಯಪ್‌’ನಲ್ಲಿ ಅಕ್ರಮದ ಹಲವು ಮಾಹಿತಿಗಳಿದ್ದು, ಕೊನೆಗೂ ಅದರ ಲಾಕ್‌ ತೆರೆಯುವಲ್ಲಿ ತನಿಖಾ ತಂಡ ಯಶಸ್ವಿ ಆಗಿದೆ.

ಸಂಜೀವ್‌ ಶೆಟ್ಟಿ ಎಂಬುವರು ಈ ಸಮೀಕ್ಷಾ ಆ್ಯಪ್‌ ಅಭಿವೃದ್ಧಿ ಪಡಿಸಿದ್ದರು. ಸಂಸ್ಥೆ ವಿರುದ್ಧ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತರಾದ ರಂಗಪ್ಪ ದೂರು ನೀಡುತ್ತಿದ್ದಂತೆ ಸಂಜೀವ್‌ ಶೆಟ್ಟಿ ಆ್ಯಪ್‌ ಅನ್ನು ಲಾಕ್‌ ಮಾಡಿಕೊಂಡು ಪರಾರಿಯಾಗಿದ್ದರು. ಅವರನ್ನು ಈಗ ಪೊಲೀಸರು ವಶಕ್ಕೆ ಪಡೆದಿದ್ದರೂ ಆ್ಯಪ್‌ನ ಲಾಕ್‌ ತೆರೆಯಲು ಸಾಧ್ಯವಾಗಿರಲಿಲ್ಲ. ತಾಂತ್ರಿಕ ಪರಿಣಿತರ ಸಹಾಯದಿಂದ ಪೊಲೀಸರು ಆ್ಯಪ್‌ ಲಾಕ್‌ ತೆರೆದಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ.

‘ವಿಧಾನಸಭೆ ಕ್ಷೇತ್ರವಾರು ಸಮೀಕ್ಷೆ ನಡೆಸಿದ ವಿವರ, ದತ್ತಾಂಶ ಮಾರಾಟ, ದತ್ತಾಂಶ ಖರೀದಿಸಿದ್ದ ರಾಜಕಾರಣಿಗಳ ವಿವರ, ಮತದಾರರ ಹೆಸರು ಅಳಿಸಿ ಹಾಕಿರುವವರ ಸಂಖ್ಯೆ ಸೇರಿ ಎಲ್ಲ ಅಕ್ರಮಗಳ ಮಾಹಿತಿ ಈ ಆ್ಯಪ್‌ನಲ್ಲಿಯೇ ಅಡಕವಾಗಿವೆ. ಚಿಲುಮೆ ಸಂಸ್ಥೆಯ ವೆಬ್‌ಸೈಟ್‌ ರೂಪಿಸಿದ್ದ ದಿವ್ಯಾ ಅವರ ವಿಚಾರಣೆ ಬಾಕಿಯಿದೆ. ಸಾಫ್ಟ್‌ವೇರ್ ಎಂಜಿನಿಯರ್‌ ಆಗಿರುವ ದಿವ್ಯಾ ಆ್ಯಪ್‌ ಅಭಿವೃದ್ಧಿಪಡಿಸಲೂ ನೆರವು ನೀಡಿದ್ದರು’ ಎಂದು ಮೂಲಗಳು
ಹೇಳಿವೆ.

ADVERTISEMENT

ಬಂಧಿತ ಆರೋಪಿ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ ಅವರ ಕಲ್ಲನಾಯನಹಳ್ಳಿಯ ಮನೆ, ಅಲ್ಲಿನ ತೋಟದ ಮನೆ, ನಗರದ ಮಲ್ಲೇಶ್ವರದ 18ನೇ ಕ್ರಾಸ್‌ನಲ್ಲಿನ ಮೂರು ಅಂತಸ್ತಿನ ಕಟ್ಟಡ, ನೆಲಮಂಗಲದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಶೋಧಿಸಿದರು. ಕಂಪ್ಯೂಟರ್‌ ಸೇರಿ ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ರವಿಕುಮಾರ್ ಪತ್ನಿ ಐಶ್ವರ್ಯಾ ಅವರ ವಿಚಾರಣೆ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನ್ಯಾಯಾಲಯದ ಅನುಮತಿ ಮೇರೆಗೆ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿದ್ದ ಆರೋಪಿಗಳಾದ ಕೆಂಪೇಗೌಡ, ಕೆ.ಎಂ.ಲೋಕೇಶ್‌, ರೇಣುಕಾ ಪ್ರಸಾದ್, ಧರ್ಮೇಶ್‌ ಅವರಿಗೆ ತನಿಖಾ ತಂಡವು ಬುಧವಾರ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆಹಾಕಿದೆ.

ಬಿಬಿಎಂಪಿಯ ಕಂದಾಯ ವಿಭಾಗದ 45 (ಇಆರ್‌ಒ ಹಾಗೂ ಎಇಆರ್‌ಒ) ಅಧಿಕಾರಿಗಳನ್ನು ಬುಧವಾರ ಹಲಸೂರು ಗೇಟ್‌ ಪೊಲೀಸರು ವಿಚಾರಣೆ ನಡೆಸಿದರು ಎಂದು ಪೊಲೀಸ್ ಮೂಲಗಳು
ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.