ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣ: ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ

​ಪ್ರಜಾವಾಣಿ ವಾರ್ತೆ
Published 3 ಮೇ 2024, 22:12 IST
Last Updated 3 ಮೇ 2024, 22:12 IST
ಚಿನ್ನಸ್ವಾಮಿ ಕ್ರೀಡಾಂಗಣ   -ಪ್ರಜಾವಾಣಿ ಸಂಗ್ರಹ ಚಿತ್ರ
ಚಿನ್ನಸ್ವಾಮಿ ಕ್ರೀಡಾಂಗಣ   -ಪ್ರಜಾವಾಣಿ ಸಂಗ್ರಹ ಚಿತ್ರ   

ನವದೆಹಲಿ: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆಬಾವಿಗಳು ಸೇರಿದಂತೆ ವಿವಿಧ ನೀರಿನ ಮೂಲಗಳ ವಿವರಗಳನ್ನು ಒದಗಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೂಚಿಸಿದೆ. 

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ನಡುವೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಐಪಿಎಲ್‌ ಪಂದ್ಯಗಳಿಗೆ ಸಂಸ್ಕರಿಸಿದ ನೀರು ಪೂರೈಕೆ ಮಾಡಿರುವುದನ್ನು ನ್ಯಾಯಮಂಡಳಿ ಪ್ರಧಾನ ಪೀಠ ಗಂಭೀರವಾಗಿ ಪರಿಗಣಿಸಿದೆ. ಮಾಧ್ಯಮ ವರದಿಗಳ ಆಧಾರದಲ್ಲಿ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಹಾಗೂ ತಜ್ಞ ಸದಸ್ಯ ಎ.ಸೆಂಥಿಲ್‌ ವೇಲ್ ಅವರನ್ನು ಒಳಗೊಂಡ ಪೀಠವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈ ಸಂಬಂಧ ಕ್ರಿಕೆಟ್‌ ಸಂಸ್ಥೆಯಿಂದ ಪೀಠ ಕಳೆದ ತಿಂಗಳು ವರದಿ ಕೇಳಿತ್ತು. ಸಂಸ್ಥೆಯು ವರದಿ ಸಲ್ಲಿಸಿದೆ. 

ಕ್ರೀಡಾಂಗಣದ ಒಟ್ಟು ಬಳಕೆ ಅಥವಾ ನೀರಿನ ಬಳಕೆ ದಿನಕ್ಕೆ 1,94,000 ಲೀಟರ್. ಅದರಲ್ಲಿ 80 ಸಾವಿರ ಲೀಟರ್ ಶುದ್ಧ ನೀರು ಎಂಬುದನ್ನು ನ್ಯಾಯಮಂಡಳಿ ಗಮನಿಸಿದೆ.

ADVERTISEMENT

400 ಅಡಿ ಆಳದ ನಾಲ್ಕು ಕೊಳವೆಬಾವಿಗಳನ್ನು ಒಳಗೊಂಡಂತೆ ವಿವಿಧ ನೀರಿನ ಮೂಲಗಳನ್ನು ಕ್ರೀಡಾಂಗಣ ಒಳಗೊಂಡಿದೆ. ಈ ಕೊಳವೆಬಾವಿಗಳ ನೀರಿನ ಬಳಕೆಯನ್ನು ಲೆಕ್ಕಾಚಾರ ಮಾಡಲು ಮೀಟರ್‌ಗಳಿಲ್ಲ ಎಂಬುದನ್ನು ಪೀಠ ಗಮನಿಸಿದೆ. 

ಕುಡಿಯುವ ಬಳಕೆಗೆ ಹೊರತಾದ ಉದ್ದೇಶಗಳಿಗಾಗಿ ಪ್ರತಿದಿನ 64 ಸಾವಿರ ಲೀಟರ್ ಸಂಸ್ಕರಿಸಿದ ನೀರನ್ನು ಪೂರೈಸಲು ಅನುಮೋದನೆ ನೀಡಲಾಗಿದೆ ಎಂದು ಕ್ರಿಕೆಟ್‌ ಸಂಸ್ಥೆಯು ವರದಿಯಲ್ಲಿ ತಿಳಿಸಿದೆ.

ತಾನು ನೀರನ್ನು ಪಡೆದಿರುವ ವಿವಿಧ ಮೂಲಗಳ ಕುರಿತು ಸಮಗ್ರ ವಿವರಗಳನ್ನು ನೀಡಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕ್ರಿಕೆಟ್‌ ಸಂಸ್ಥೆಯು ಪೀಠಕ್ಕೆ ಕೋರಿದೆ. ನಾಲ್ಕು ವಾರಗಳೊಳಗೆ ವಿವರ ನೀಡುವಂತೆ ಸಂಸ್ಥೆಗೆ ಪೀಠ ಸೂಚಿಸಿದೆ. ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 13ಕ್ಕೆ ಮುಂದೂಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.