ಚಿತ್ರದುರ್ಗ: ಆಳೆತ್ತರ ಬೆಳೆದ ಜಾಲಿ ಮುಳ್ಳಿನ ಗಿಡಗಳ ಮಧ್ಯೆ ಸಾಗುವ ಬಂಡಿ ಹಾದಿಯಲ್ಲಿ ಕರಿ ಕಲ್ಲುಗಳು ಮೇಲೆದ್ದಿವೆ. ಕೆರೆ ಏರಿ, ಬೆಟ್ಟದ ತಪ್ಪಲನ್ನು ಬಳಸಿ ಮೂರೂವರೆ ಕಿ.ಮೀ ಹೆಜ್ಜೆ ಹಾಕಿದರೆ ಮರಡಿಹಟ್ಟಿಯ ದರ್ಶನವಾಗುತ್ತದೆ. ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡ ಈ ಹಳ್ಳಿ, ಆಧುನಿಕ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಏದುಸಿರು ಬಿಡುತ್ತಿರುವುದು ಎದ್ದು ಕಾಣುತ್ತದೆ.
ಚಳ್ಳಕೆರೆ ತಾಲ್ಲೂಕಿನ ಸಿದ್ಧೇಶ್ವರನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಡಿಹಟ್ಟಿ ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ 89 ಕಿ.ಮೀ ದೂರದಲ್ಲಿದೆ. ಆಂಧ್ರಪ್ರದೇಶದ ಮಡಕಶಿರಾ ಹಾಗೂ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಹಳ್ಳಿಗಳು ಆಸುಪಾಸಿನಲ್ಲಿವೆ. ಗೊಲ್ಲ ಸಮುದಾಯ ವಾಸವಾಗಿರುವ ಈ ಹಟ್ಟಿ ಮೌಢ್ಯಗಳಿಗೂ ಜೋತುಬಿದ್ದಿದೆ. ನಗರ, ಪಟ್ಟಣವನ್ನು ಕಾಣದ ಹಲವರು ಇಲ್ಲಿದ್ದಾರೆ. ಆದರೆ, ಹಟ್ಟಿಯ ಗುಡಿಸಲುಗಳ ಮೇಲೆ ಟಿ.ವಿ ಡಿಶ್ ಬುಟ್ಟಿ ಕಾಣಿಸುತ್ತಿವೆ. ಹಲವರ ಜೇಬಿನಲ್ಲಿ, ಗುಡಿಸಲಿನ ಸೂರಿನಲ್ಲಿ ಮೊಬೈಲ್ ಫೋನು ರಿಂಗಿಣಿಸುತ್ತವೆ.
ಬಂಡಿ ದಾರಿ ಊರು ತಲುಪಿಸುತ್ತದೆಯಾದರೂ ಮನೆ ಮುಟ್ಟಿಸುವುದಿಲ್ಲ. ಹಟ್ಟಿ ಮುಂಭಾಗದಲ್ಲೇ ಸಿಗುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದಾಟಿದರೆ ಅಲ್ಲಲ್ಲಿ ಹರಡಿಕೊಂಡ ಮನೆಗಳಿಗೆ ಕಾಲು ದಾರಿಯೇ ರಾಜಮಾರ್ಗ. ಎರಡು ಗುಡಿಸಲುಗಳ ಮಧ್ಯದ ಹಾದಿಯಲ್ಲಿ ಬಚ್ಚಲು ನೀರು ಹರಿಯುತ್ತದೆ. ಈ ನೀರು ದಾಟಲು ಅಲ್ಲಲ್ಲಿ ಹಾಕಿದ ಕಲ್ಲುಗಳ ಮೇಲೆ ಕಾಲಿಡುತ್ತ ಮನೆ ತಲುಪಬೇಕು. ಇರುವ ಒಂದೇ ಬೀದಿಗೆ ಸಿಮೆಂಟ್ ಕಾಂಕ್ರಿಟ್ ಹಾಕಲಾಗಿದೆಯಾದರೂ ವರ್ಷ ಕಳೆಯುವ ಹೊತ್ತಿಗೆ ದೂಳು ಮೇಲೆಳುತ್ತಿದೆ.
‘ಇಲ್ಲೇಕೆ ರಸ್ತೆ ಹೀಗೆ?’ ಎಂದರೆ ‘ಇದು ಹಟ್ಟಿಯಲ್ಲವೇ’ ಎಂಬ ಮರುಪ್ರಶ್ನೆಯೇ ಗ್ರಾಮ ಪಂಚಾಯಿತಿ ಸದಸ್ಯರ ಉತ್ತರ. ಈ ಪ್ರತಿಕ್ರಿಯೆಯಲ್ಲೇ ಹಟ್ಟಿಯ ಬಗೆಗಿನ ತಾತ್ಸಾರವೂ ವ್ಯಕ್ತವಾಗುತ್ತದೆ.
‘ರಸ್ತೆ ಮಾಡ್ಕೊಡಿ ಅಂತ ಕೇಳ್ಕೊತಾನೆ ಇದೇವಿ ಸಾಮಿ. ಆದ್ರೆ ಯಾರು ಕಿವಿಗೆ ಹಾಕಿಕೊಳ್ತಿಲ್ಲ ಇಲ್ಲ. ಬಂಡಿ ಹಾದಿ ಮುಚ್ಕೊಂಡಿದೆ. ಕರಡಿ ಓಡಾಡ್ತವೆ, ಮಕ್ಳು, ಹೆಂಗಸ್ರು ಒಬ್ಬೊಬ್ರೆ ಹೋಗೋಕಾಗಲ್ಲ. ಹೊತ್ತು ಮುಳ್ಗಿದ್ ಮ್ಯಾಲೆ ಓಡಾಡಲ್ಲ. ಅವ್ರು ಇವ್ರು ಬೈಕ್ ಇಟ್ಕೊಂಡೊರು ಬರ್ತಾರೆ–ಹೋಗ್ತಾರೆ...’ ಎಂದರು ಗ್ರಾಮಸ್ಥ ನರಸಿಂಹಪ್ಪ.
ಮೂರೂವರೆ ಕಿ.ಮೀ ಹೆಜ್ಜೆ ಹಾಕಿ ಕ್ಯಾದಿಗುಂಟೆ ತಲುಪಿದರೆ ಸಾರಿಗೆ ಬಸ್ ಸಿಗುತ್ತದೆ. ಕೆಲ ‘ಸ್ಥಿತಿವಂತರು’ ಮಾತ್ರ ದ್ವಿಚಕ್ರ ವಾಹನಗಳನ್ನು ಇಟ್ಟುಕೊಂಡಿದ್ದಾರೆ. ಕೃಷಿ ಉತ್ಪನ್ನ ಸಾಗಣೆ ಸಂದರ್ಭದಲ್ಲಿ ಊರಿಗೆ ಸರಕು ಸಾಗಣೆ ವಾಹನ ಬರುತ್ತದೆ.
ಆರು ತಿಂಗಳ ಹಿಂದೆ ಬೆಳಕು: ಎರಡು ದಶಕಗಳ ಹಿಂದೆಯೇ ಹಟ್ಟಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ರಾತ್ರಿಯ ಕತ್ತಲು ಓಡಿಸುವ ಪ್ರಖರತೆಯನ್ನು ಆ ವಿದ್ಯುತ್ ದೀಪಗಳು ಹೊರಸೂಸಿದ್ದು ಆರು ತಿಂಗಳಿಂದ ಈಚೆಗೆ. ಬುಡ್ಡಿ ದೀಪದಷ್ಟೇ ಬೆಳಕು ನೀಡುತ್ತಿದ್ದ ವಿದ್ಯುತ್ ದೀಪಗಳು, ಹಟ್ಟಿಯನ್ನು ಅಂಧಕಾರದಲ್ಲಿ ಇಟ್ಟದ್ದೇ ಹೆಚ್ಚು. ಗ್ರಾಮಕ್ಕೆ ಪ್ರತ್ಯೇಕ ವಿದ್ಯುತ್ ಪರಿವರ್ತಕ ಅಳವಡಿಸಿದ ಬಳಿಕ ಪರಿಸ್ಥಿತಿ ಸುಧಾರಿಸಿದೆ.
‘ಇದ್ಯುತ್ ಕಂಬ ಇದ್ರೆ ಏನು ಬಂತು? ಬೆಳಕು ಬರ್ಬೇಕು. ಮೊನ್ನೆಯಿಂದ ಇಂಥ ಬೆಳಕು ಕಂಡಿದ್ದೇವೆ. ನಮ್ಮ ಕಷ್ಟ ಯಾವ ಪುಣ್ಯಾತ್ಮಂಗೆ ಗೊತ್ತಾತೊ ತಿಳಿದು. ಆದ್ರೆ ಇದ್ಯುತ್ ದೀಪದಲ್ಲಿ ಬೆಳಕು ಕಾಣ್ತಿದೆ...’ ಎಂದು ಕುಕ್ಕರುಗಾಲಲ್ಲಿ ಕುಳಿತು ಕಂಬವನ್ನೇ ದಿಟ್ಟಿಸುತ್ತ ಪುಟ್ಟಕ್ಕ ಕೃತಜ್ಞತೆ ಸಲ್ಲಿಸಿದರು.
ಹಟ್ಟಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 18 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಪಕ್ಕದಲ್ಲೇ ಇರುವ ಅಂಗನವಾಡಿಯಲ್ಲಿ 30 ಮಕ್ಕಳಿದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರು, ಅಂಗನವಾಡಿಗೆ ಒಬ್ಬರು ಕಾರ್ಯಕರ್ತೆ ಇದ್ದಾರೆ. ಐದನೇ ತರಗತಿ ವ್ಯಾಸಂಗಕ್ಕೆ ಸಿದ್ಧೇಶ್ವರನದುರ್ಗಕ್ಕೆ ಬರುವುದು ಅನಿವಾರ್ಯ. ಸಾರಿಗೆ ಸಂಪರ್ಕದ ಕೊರತೆಯ ಕಾರಣಕ್ಕೆ ಅನೇಕ ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸಿದ್ದಾರೆ. ಸರ್ಕಾರಿ ನೌಕರಿ ಪಡೆದ ಯಾರೊಬ್ಬರು ಈ ಹಟ್ಟಿಯಲ್ಲಿಲ್ಲ. ಬೆಂಗಳೂರಿನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ 8 ಜನ ಲಾಕ್‌ಡೌನ್ ಬಳಿಕ ಊರು ಸೇರಿದ್ದಾರೆ.
‘ನರೇಗಾ’ಕ್ಕಿಂತ ಕಡಿಮೆ ಕೂಲಿ:
ಸರ್ಕಾರಿ ದಾಖಲೆಗಳ ಪ್ರಕಾರ ಹಟ್ಟಿಯಲ್ಲಿ ದೊಡ್ಡ ಹಿಡುವಳಿಗಳೇ ಹೆಚ್ಚಿವೆ. ಕುಟುಂಬ ವಿಘಟನೆಗೊಂಡರೂ ತಾತನ ಆಸ್ತಿ ಮೊಮ್ಮಕ್ಕಳಿಗೂ ಹಸ್ತಾಂತರವಾಗಿಲ್ಲ. 9 ಎಕರೆ ಭೂಮಿ ಹೊಂದಿದ ದೇವರಾಜ್ ಅವರೇ ಹಟ್ಟಿಯ ದೊಡ್ಡ ರೈತ. ಬಹುತೇಕರ ಜಮೀನು ಮೂರು ಎಕರೆಗಿಂತ ಹೆಚ್ಚಿಲ್ಲ. ಕೆಲವರ ಹಿಡುವಳಿ 30 ಗುಂಟೆ ದಾಟಿಲ್ಲ. ಶೇಂಗಾ ಇಲ್ಲಿನ ಪ್ರಮುಖ ಬೆಳೆ. ಮಳೆಯಾದರೆ ಮಾತ್ರ ಇದು ಕೈಸೇರುತ್ತದೆ. ಮಳೆ ಕೈಕೊಟ್ಟರೆ ಕೂಲಿ ಅನಿವಾರ್ಯ. ಸಲಿಗ (50 ಕುರಿ), ಒಂದೂವರೆ ಸಲಿಗ ಹೊಂದಿದ 12 ಕುಟುಂಬಗಳು ಹಟ್ಟಿಯಲ್ಲಿವೆ. ಕುರಿ ಸಾಕಣೆ ಇವರ ಮೂಲ ಕಸುಬು. ಬಿಟ್ಟರೆ ಸುತ್ತಲಿನ ಹಳ್ಳಿಗಳಿಗೆ ಕೂಲಿ ಕೆಲಸಕ್ಕೆ ಹೋಗುವುದು ಇಲ್ಲಿನವರ ರೂಢಿ.
ಊರಿಗೆ ರಸ್ತೆ ಇಲ್ಲ. ಸೀಮೆ ಜಾಲಿಯ ಮಧ್ಯೆ ಸಾಗುವುದು ಕಷ್ಟ. ಮಕ್ಕಳು, ಮಹಿಳೆಯರು ಜೀವಭಯದಲ್ಲಿ ಸಂಚರಿಸಬೇಕು. ರಾತ್ರಿ ಹುಷಾರು ತಪ್ಪಿದರೆ ಆಸ್ಪತ್ರೆಗೆ ತೆರಳುವುದು ದುಸ್ತರವಾಗಿದೆ
ವಿನೋದಮ್ಮ, ಗೃಹಿಣಿ
ಸೊಸೈಟಿ ಮೂರು ಕಿ.ಮೀ ದೂರದಲ್ಲಿದೆ. ಪಡಿತರವನ್ನು ತಲೆ ಮೇಲೆ ಹೊತ್ತು ಹಟ್ಟಿಗೆ ತರಬೇಕು. ವಾಹನ ಓಡಾಡುವಂತಹ ರಸ್ತೆ ನಿರ್ಮಿಸಿದರೆ ಪಡಿತರ ತರಲು ಅನುಕೂಲವಾಗುತ್ತದೆ
ನಿಶ್ಚಿತ ಯುವತಿ
ಸಿ.ಸಿ ರಸ್ತೆ ನಿರ್ಮಾಣವಾಗಿದೆ. ಆದರೆ, ಅದರ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಸೊಳ್ಳೆ ಹಾವಳಿ ವಿಪರೀತವಾಗಿದ್ದು, ಕಾಯಿಲೆಗೆ ತುತ್ತಾಗುತ್ತಿದ್ದೇವೆ.
ದೇವರಾಜ್, ಗ್ರಾಮದ ಯುವಕ
ಮರಡಿಹಟ್ಟಿಯ ಪರಿಚಯ
ಸಿದ್ದೇಶ್ವರನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಡಿಹಟ್ಟಿ ಸರ್ಕಾರಿ ದಾಖಲೆಯಲ್ಲಿ ಇಲ್ಲ. ಸಿದ್ದೇಶ್ವರನದುರ್ಗದಿಂದ ಮೂರು ಕಿ.ಮೀ ದೂರದಲ್ಲಿರುವ ಹಟ್ಟಿ, ಗ್ರಾಮದ ಭಾಗ ಎಂಬುದು ಸರ್ಕಾರಿ
ಅಧಿಕಾರಿಗಳ ವಿಶ್ಲೇಷಣೆ. ಸುಮಾರು 45 ಕುಟುಂಬಗಳು ಇಲ್ಲಿ ವಾಸವಾಗಿವೆ. 200ಕ್ಕೂ ಹೆಚ್ಚು ಜನಸಂಖ್ಯೆ ಗ್ರಾಮದಲ್ಲಿದೆ.
ಗ್ರಾಮ ಪಂಚಾಯಿತಿ 1ನೇ ವಾರ್ಡ್ ವ್ಯಾಪ್ತಿಯಲ್ಲಿದ್ದರೂ, ಈವರೆಗೆ ಒಬ್ಬರು ಮಾತ್ರ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗಡಿ ಗ್ರಾಮದ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರಿಂದ ಲಾಕ್‌ಡೌನ್‌ಗೂ
ಮೊದಲು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ತಂಡವೊಂದು ಇಲ್ಲಿಗೆ ಭೇಟಿ ನೀಡಿತ್ತು. ಇದನ್ನು ಹೊರತುಪಡಿಸಿ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಯೂ ಇಲ್ಲಿಗೆ ಭೇಟಿ ನೀಡಿಲ್ಲ ಎಂಬುದು ಹಟ್ಟಿ ಜನರ ಆರೋಪ.
ಮೂಲೆ ಸೇರಿದ ಶೌಚಾಲಯ ಪರಿಕರ
ಚಿತ್ರದುರ್ಗ ಜಿಲ್ಲೆಯನ್ನು ಬಹಿರ್ದೆಸೆಮುಕ್ತ ಎಂದು ಘೋಷಣೆ ಮಾಡಲಾಗಿದೆ. ಆದರೆ, ಮರಡಿಹಟ್ಟಿಯ ಯಾವ ಮನೆಯಲ್ಲೂ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಗ್ರಾಮ ಪಂಚಾಯಿತಿಯಿಂದ ಸಬ್ಸಿಡಿ ರೂಪದಲ್ಲಿ ನೀಡಿದ ಶೌಚಾಲಯದ ಪರಿಕರ ಹಲವರ ಮನೆಯ ಮೂಲೆಯಲ್ಲಿ ದೂಳು ಹಿಡಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.