ADVERTISEMENT

ರಕ್ತವಿಲ್ಲದೇ ‘ರಕ್ತಚರಿತ್ರೆ’ ಹೇಗೆ ಸಾಧ್ಯ: ದರ್ಶನ್ ಪರ ವಕೀಲ ನಾಗೇಶ್ ವಾದ ಮಂಡನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 22:30 IST
Last Updated 10 ಅಕ್ಟೋಬರ್ 2024, 22:30 IST
ದರ್ಶನ್
ದರ್ಶನ್   

ಬೆಂಗಳೂರು: ‘ಪಂಚನಾಮೆ ವೇಳೆ ರಕ್ತದ ಗುರುತಿನ ಕಲೆಗಳೇ ಸಿಕ್ಕಿಲ್ಲ. ಕೇವಲ ವಾದದಲ್ಲಿ ‘ಅರೇಬಿಯನ್ ನೈಟ್ಸ್ ಅಲ್ಲ’,  ‘ರಕ್ತಚರಿತ್ರೆ’ ಆಗಿದೆ ಎಂದು ವಾದ ಮಂಡಿಸಲಾಗಿದೆ. ಜಪ್ತಿ ಮಾಡಿಕೊಂಡ ವಸ್ತುಗಳಲ್ಲಿ ರಕ್ತದ ಕಲೆಯ ಗುರುತೇ ಇಲ್ಲದ ಮೇಲೆ ರಕ್ತಚರಿತ್ರೆ ಹೇಗೆ ಸಾಧ್ಯ’ ಎಂದು ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದರು.

57ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ಗುರುವಾರ ದರ್ಶನ್‌ ಜಾಮೀನು ಅರ್ಜಿಯ ವಿಚಾರಣೆ ವೇಳೆ ವಾದ ಮಂಡಿಸಿದ ನಾಗೇಶ್ ಅವರು, ‘ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್‌) ವರದಿಯಲ್ಲೂ ರಕ್ತದ ಕಲೆಯ ಗುರುತುಗಳು ಇರುವುದು ದೃಢಪಟ್ಟಿಲ್ಲ’ ಎಂದು ಹೇಳಿದರು.

‘ತನಿಖಾಧಿಕಾರಿಗಳು ಗೂಗಲ್ ವಿಳಾಸ ಪಡೆದಿಲ್ಲ. ಕರೆ ವಿವರವನ್ನೂ ಸಂಗ್ರಹಿಸಿಲ್ಲ. ಇದ್ಯಾವುದೂ ಇಲ್ಲದೇ ಸಾಕ್ಷಿಗಳ ಹೇಳಿಕೆ ಆಧರಿಸಿ, ಆರೋಪಿಗಳು ಕೃತ್ಯದ ಸ್ಥಳದಲ್ಲಿದ್ದರು ಎಂದು ಹೇಗೆ ಹೇಳುತ್ತಾರೆ’ ಎಂದು ವಕೀಲರು ಪ್ರಶ್ನಿಸಿದರು‌.

ADVERTISEMENT

‘ಪಟ್ಟಣಗೆರೆಯ ಶೆಡ್‌ ಸಮೀಪದ ಟವರ್ ಲೊಕೇಷನ್ ವ್ಯಾಪ್ತಿಯಲ್ಲಿಯೇ ಆರೋಪಿಗಳ ವಾಸದ ಮನೆಗಳಿವೆ. ಅಲ್ಲೇ ಮನೆಯಿದ್ದಾಗ ಅವರೆಲ್ಲಾ ಶೆಡ್​​ನಲ್ಲಿ ಇದ್ದರು ಎಂಬುದು ಸಾಬೀತಾಗುವುದಿಲ್ಲ. ಐ.ಪಿ ವಿಳಾಸದ ಮೂಲಕ ವ್ಯಕ್ತಿಯೊಬ್ಬರು ಇದ್ದ ನಗರ ಮಾತ್ರ ತೋರಿಸಬಹುದು’ ಎಂದರು.

‘ಕೃತ್ಯ ಸಾಬೀತುಪಡಿಸುವ ಅಂಶವೇ ಇಲ್ಲ’: ‘ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿ ಬಿಟ್ಟರೆ ಬೇರೆ ಸಾಕ್ಷಿಯೇ ಇಲ್ಲ. ಕೃತ್ಯ ಸಾಬೀತು ಪಡಿಸುವಂತಹ ಯಾವುದೇ ಅಂಶವೂ ಇಲ್ಲ. ಪ್ರತ್ಯಕ್ಷ ಸಾಕ್ಷಿಯನ್ನು ಸೃಷ್ಟಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿಯ ಹೇಳಿಕೆಯನ್ನೂ 13 ದಿನ ವಿಳಂಬವಾಗಿ ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ವರದಿ ಬಂದ ಬಳಿಕ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಗೂ, ಹೇಳಿಕೆಗೂ ಹೊಂದಾಣಿಕೆ ಆಗುವಂತೆ ಮಾಡಲು ವಿಳಂಬ ಮಾಡಲಾಗಿದೆ’ ಎಂದು ನಾಗೇಶ್ ವಾದಿಸಿದರು.‌

‘ಪಟ್ಟಣಗೆರೆ ಶೆಡ್​​ನಲ್ಲಿ ಮಣ್ಣಷ್ಟೇ ಅಲ್ಲ, ರಕ್ತದ ಕಲೆಯೂ ಸಿಕ್ಕಿದೆ. ಮನೆಯಲ್ಲಿ ಶೂ ಇಟ್ಟ ಬಗ್ಗೆ ದರ್ಶನ್ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ‌. ಲೊಕೇಷನ್‌, ಕರೆ ವಿವರವೂ ಹೊಂದಾಣಿಕೆ ಆಗಿದೆ. ತಂತ್ರಜ್ಞಾನ ತುಂಬಾ ಅಭಿವೃದ್ಧಿ ಆಗಿದೆ‌. ಹೀಗಾಗಿ, ವ್ಯಕ್ತಿಯ ಇರುವಿಕೆಯ ಸ್ಥಳದ ನಿಖರತೆ ಪತ್ತೆ ಹಚ್ಚಬಹುದಾಗಿದೆ’ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್‌ ಪ್ರತಿವಾದ ಮಂಡಿಸಿದರು.

‘ಸಾವಿರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂಬ ಮಾತ್ರಕ್ಕೆ ಜಾಮೀನು ನೀಡಲು ಆಗುವುದಿಲ್ಲ. ಹೀಗಾಗಿ, ದರ್ಶನ್​​ಗೆ ಜಾಮೀನು ನೀಡಬಾರದು’ ಎಂದು ಹೇಳಿದರು. ಬಳಿಕ, ನ್ಯಾಯಾಲಯವು ಅಕ್ಟೋಬರ್‌ 14ಕ್ಕೆ ಆದೇಶ ಕಾಯ್ದಿರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.