ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ನಟ ದರ್ಶನ್, ಅವರ ಆಪ್ತೆ ಪವಿತ್ರಾಗೌಡ ಹಾಗೂ ಸಹಚರರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಬುಧವಾರವೂ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯಿತು.
ತನಿಖಾಧಿಕಾರಿಗಳ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನಕುಮಾರ್ ಪ್ರತಿವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಾಲಯವು ದರ್ಶನ್ ಅವರ ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಪವಿತ್ರಾಗೌಡ ಸೇರಿದಂತೆ ಐವರು ಆರೋಪಿಗಳ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯವು ಕಾಯ್ದಿರಿಸಿದ್ದು ಅ.14ರಂದು ಆದೇಶ ಪ್ರಕಟಿಸಲಾಗುವುದು ಎಂದು ಹೇಳಿತು.
ಇದಕ್ಕೂ ಮೊದಲು ಪ್ರಸನ್ನಕುಮಾರ್ ಅವರು, ‘ಪವಿತ್ರಾಗೌಡ, ದರ್ಶನ್ ಅವರು ಅಪಹರಣ ಹಾಗೂ ಕೊಲೆಯಲ್ಲಿ ಶಾಮೀಲಾಗಿದ್ದಾರೆ. ಅವರಿಗೆ ಜಾಮೀನು ನೀಡಬಾರದು. ಎಂಟನೇ ಆರೋಪಿ ಕಾರು ಚಾಲಕ ರವಿಶಂಕರ್ ಬಟ್ಟೆಯ ಮೇಲೆ ರಕ್ತದ ಕಲೆ ಪತ್ತೆ ಆಗಿದ್ದು ಆತನಿಗೂ ಜಾಮೀನು ನೀಡಬಾರದು’ ಎಂದು ವಾದ ಮಂಡಿಸಿದರು.
‘ಎ–13 ದೀಪಕ್ ಅವರ ಮೇಲೆ ಕೊಲೆ, ಅಪಹರಣದ ಆರೋಪ ಇಲ್ಲ. ಆತನ ಮೇಲೆ ಸಾಕ್ಷ್ಯ ನಾಶದ ಆರೋಪ ಇದೆ. ಇದು ಜಾಮೀನು ನೀಡಬಹುದಾದ ಆರೋಪ’ ಎಂದು ಹೇಳಿದರು.
ದರ್ಶನ್ ಪರವಾಗಿ ವಕೀಲ ಸಿ.ವಿ.ನಾಗೇಶ್ ಅವರು ಕಳೆದ ವಾರ ವಾದ ಮಂಡಿಸಿದ್ದರು. ‘ದರ್ಶನ್ ಅವರು ಚಪ್ಪಲಿ ಧರಿಸಿದ್ದೆ’ ಎಂದು ಸ್ವಇಚ್ಛಾ ಹೇಳಿಕೆಯಲ್ಲಿ ತಿಳಿಸಿದ್ದರು. ಅವರ ಮನೆಯಿಂದ ತನಿಖಾಧಿಕಾರಿಗಳು ಶೂ ಜಪ್ತಿ ಮಾಡಿಕೊಂಡಿದ್ದರು. ಇದು ಕಳಪೆ ತನಿಖೆ ಎಂದು ನಾಗೇಶ್ ಹೇಳಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಪ್ರಸನ್ನಕುಮಾರ್ ಅವರು, ‘ದರ್ಶನ್ ಅವರು ಚಪ್ಪಲಿ ಧರಿಸಿದ್ದಾಗಿ ಹೇಳಿದ್ದರು. ಅಂದು ಆರೋಪಿ ಹೇಳಿದ್ದನ್ನಷ್ಟೇ ಹೇಳಿಕೆಯಲ್ಲಿ ನಮೂದಿಸಲಾಗಿತ್ತು. ಅದಾದ ಮೇಲೆ ತಾನು ಶೂ ಧರಿಸಿದ್ದಾಗಿ ಹೇಳಿದ್ದರು. ಅವರೇ ಶೂ ಕೊಡುವಂತೆಯೂ ಪತ್ನಿಗೆ ಹೇಳಿದ್ದರು. ವಿಚಾರಣೆ ವೇಳೆ ಆರೋಪಿ ಹೇಳಿದ್ದನ್ನಷ್ಟೇ ದಾಖಲಿಸುವುದು ತನಿಖಾಧಿಕಾರಿಗಳ ನಿಯಮ’ ಎಂದು ಹೇಳಿದರು.
‘ಬಿಸಿ ನೀರಿನಲ್ಲಿ ಬಟ್ಟೆ ಒಗೆದರೂ ರಕ್ತದ ಕಲೆಯ ಗುರುತು ಇರುತ್ತದೆ. ದರ್ಶನ್ ಅವರ ಬಟ್ಟೆಗಳನ್ನು ತಣ್ಣೀರಿನಲ್ಲಿ ಒಗೆಯಲಾಗಿತ್ತು. ಬಟ್ಟೆಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಪರಿಶೀಲನೆ ವೇಳೆ ಬಟ್ಟೆಯ ಮೇಲೆ ರಕ್ತದ ಕಲೆಯ ಗುರುತು ಇರುವುದು ದೃಢವಾಗಿದೆ’ ಎಂದು ಪ್ರಸನ್ನಕುಮಾರ್ ವಾದ ಮಂಡಿಸಿದರು.
‘ಶೂಗೆ ಅಂಟಿಗೊಂಡಿದ್ದ ಮಣ್ಣನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದು ಕೃತ್ಯ ನಡೆದ ಸ್ಥಳದಲ್ಲಿನ ಮಣ್ಣು ಎಂಬುದು ಸಾಬೀತಾಗಿದೆ’ ಎಂದು ಹೇಳಿದರು.
‘ಕೃತ್ಯ ನಡೆದ ಸ್ಥಳದಲ್ಲಿ 96 ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲವು ವಸ್ತುಗಳಲ್ಲಿ ರಕ್ತದ ಕಲೆ ಇಲ್ಲವೆಂದ ಮಾತ್ರಕ್ಕೆ ಕೃತ್ಯವೇ ನಡೆದಿಲ್ಲ ಎನ್ನಲಾಗದು’ ಎಂದರು.
‘ಸಂದೇಶ ಓದಿಸಿ ಹಲ್ಲೆ’
‘ರೇಣುಕಸ್ವಾಮಿಗೆ ಧನರಾಜ್, ಪವನ್ ಮತ್ತು ನಂದೀಶ್ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ನಂತರ, ಧನರಾಜ್ ಎಲೆಕ್ಟ್ರಿಕ್ ಶಾಕ್ ನೀಡಿದ್ದರು. ಅದಾದ ಮೇಲೆ ರೇಣುಕಸ್ವಾಮಿ ಅಸ್ವಸ್ಥಗೊಂಡು ಮಲಗಿದ್ದರು. ಆ ಫೋಟೊವನ್ನು ತೆಗೆದ ವಿನಯ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ನಡೆಸುತ್ತಿದ್ದವರಿಗೆ ಕಳುಹಿಸಿದ್ದರು. ಬಳಿಕ, ದರ್ಶನ್ ಶೆಡ್‌ಗೆ ಬಂದಿದ್ದರು. ಆಗ ರೇಣುಕಸ್ವಾಮಿ ಅವರನ್ನು ಮೇಲಕ್ಕೇಳಿಸಿ ದರ್ಶನ್ ಎದೆಗೆ ಒದ್ದಿದ್ದರು. ರೇಣುಕಸ್ವಾಮಿ ಪ್ಯಾಂಟ್ ಬಿಚ್ಚಿಸಿ ಮರ್ಮಾಂಗಕ್ಕೂ ಒದೆಯಲಾಗಿದೆ. ಬಳಿಕ ಪವಿತ್ರಾಗೌಡ ಅವರಿಗೆ ರೇಣುಕಸ್ವಾಮಿ ಇನ್‌ಸ್ಟಾಗ್ರಾಂ ಖಾತೆಯಿಂದ ಕಳುಹಿಸಿದ್ದ ಸಂದೇಶ ಓದಿಸಿ ಹಲ್ಲೆ ನಡೆಸಲಾಗಿದೆ’ ಎಂದು ಪ್ರಸನ್ನಕುಮಾರ್ ವಾದ ಮಂಡಿಸಿದರು.
ಪ್ರದೋಷ್ ಪುನಃ ಬೆಂಗಳೂರು ಜೈಲಿಗೆ
ಬೆಂಗಳೂರು: ‘ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಎಸ್.ರಾವ್ ಅವರನ್ನು ಪುನಃ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಿ’ ಎಂದು ಜೈಲು ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಸಂಬಂಧ ಪ್ರದೋಷ್ ಎಸ್.ರಾವ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.
‘ವಿಚಾರಣಾ ಕೈದಿಗಳನ್ನು ಬೇರೊಂದು ಜೈಲಿಗೆ ಸ್ಥಳಾಂತರ ಮಾಡಲು ಸೂಕ್ತ ಕಾರಣಗಳಿರಬೇಕು. ಅಂತೆಯೇ, ಅವರನ್ನು ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಸ್ಥಳಾಂತರ ಮಾಡುವುದು ಆಡಳಿತಾತ್ಮಕ ಕ್ರಮವಲ್ಲ. ಬದಲಾಗಿ ನ್ಯಾಯಾಂಗ ಮತ್ತು ಅರೆ ನ್ಯಾಯಾಂಗದ ಕಾರ್ಯ. ಈ ಪ್ರಕ್ರಿಯೆಯಲ್ಲಿ ಕೈದಿಯ ವಾದವನ್ನು ಆಲಿಸಲು ಸೂಕ್ತ ಕಾಲಾವಕಾಶ ಕೊಡಬೇಕಾಗುತ್ತದೆ. ಇಲ್ಲವಾದಲ್ಲಿ ಕೈದಿಯ ವಿರುದ್ದ ಪೂರ್ವಗ್ರಹ ಭಾವನೆ ಉಂಟಾಗುತ್ತದೆ. ಹೀಗಾಗಿ, ಕೈದಿಗಳನ್ನು ಸ್ಥಳಾಂತರ ಮಾಡುವ ಸಂದರ್ಭಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ತಮ್ಮ ವಿವೇಚನೆ ಬಳಸಬೇಕಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅರ್ಜಿದಾರರ ಪರ ಬಿ.ಜೆ.ಹಿತೇಶ್ ಗೌಡ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.