ಚಿತ್ರದುರ್ಗ: ಇಲ್ಲಿಗೆ ಸಮೀಪದ ಬಂಡ್ಲೋರಹಟ್ಟಿ ಗ್ರಾಮವನ್ನು ದತ್ತು ಪಡೆದಿರುವ ನಟ ಪ್ರಕಾಶ್ ರೈ, ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ.
ಪ್ರಕಾಶ್ ರಾಜ್ ಫೌಂಡೇಷನ್ ₹ 3 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಘಟಕವನ್ನು ಗ್ರಾಮಸ್ಥರು ಉದ್ಘಾಟಿಸಿದ್ದಾರೆ. ಫ್ಲೋರೈಡ್‌ಯುಕ್ತ ನೀರು ಈ ಗ್ರಾಮದ ಪ್ರಮುಖ ಸಮಸ್ಯೆ ಆಗಿತ್ತು. ಶುದ್ಧ ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರು ಪ್ರಕಾಶ್ ರೈ ಅವರಿಗೆ ಮನವಿ ಮಾಡಿದ್ದರು.
ಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದ ಕುರಿತು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಕಾಶ್ ರಾಜ್ ಫೌಂಡೇಷನ್ ಸಮನ್ವಯಕಾರ ಅನಿಲ್ ಕುಮಾರ್ ಚಿಕ್ಕದಾಳವಟ್ಟ, ‘ಗ್ರಾಮೀಣ ಪ್ರದೇಶದ ಜನರ ಏಳಿಗೆಗೆ ಪ್ರಕಾಶ್ ರಾಜ್ ಫೌಂಡೇಷನ್ ಕೆಲಸ ಮಾಡುತ್ತಿದೆ. ಬಡಮಕ್ಕಳು ಓದುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ಥಳೀಯರು, ಸರ್ಕಾರ ಮತ್ತು ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಬಂಡ್ಲೋರಹಟ್ಟಿ ಗ್ರಾಮಸ್ಥರ ಸಹಕಾರ ಅಗತ್ಯ’ ಎಂದರು.
ಮರಡಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜ್ಯೋತಿ ವೈದ್ಯನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ಸದಸ್ಯ ಟಿ.ರಾಘವೇಂದ್ರ, ಮುಖಂಡರಾದ ವಾಸುದೇವರೆಡ್ಡಿ, ರಂಗನಾಥ್, ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.