ADVERTISEMENT

ಸಾಕ್ಷ್ಯಗಳ ವಿಚಾರಣೆ ಪೂರ್ಣ; ನ್ಯಾಯಾಲಯದ ಆದೇಶದಂತೆ ಶಿವಮೂರ್ತಿ ಶರಣರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 11:11 IST
Last Updated 7 ಅಕ್ಟೋಬರ್ 2024, 11:11 IST
<div class="paragraphs"><p>ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಸೋಮವಾರ ಹೊರಬಂದ&nbsp;ಶಿವಮೂರ್ತಿ ಮುರುಘಾ ಶರಣರಿಗೆ ಭಕ್ತರು ಹಾರ ಹಾಕಿ ಸ್ವಾಗತ ಕೋರಿದರು&nbsp;</p></div>

ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಸೋಮವಾರ ಹೊರಬಂದ ಶಿವಮೂರ್ತಿ ಮುರುಘಾ ಶರಣರಿಗೆ ಭಕ್ತರು ಹಾರ ಹಾಕಿ ಸ್ವಾಗತ ಕೋರಿದರು 

   

ಚಿತ್ರದುರ್ಗ: ಪೋಕ್ಸೊ ಪ್ರಕರಣದ ಸಂತ್ರಸ್ತೆಯರು ಹಾಗೂ ಪ್ರಮುಖ‌ ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದ ರಿಂದ, ಪ್ರಮುಖ ಆರೋಪಿಯಾದ ಮುರುಘಾ ಮಠದ ಶಿವಮೂರ್ತಿ ಶರಣರು ಸೋಮವಾರ ಇಲ್ಲಿನ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದರು.

‘ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ, ಇಬ್ಬರು ಸಂತ್ರಸ್ತೆಯರು ಸೇರಿದಂತೆ ಒಟ್ಟು 13 ಸಾಕ್ಷಿಗಳ ವಿಚಾರಣೆ ಕೊನೆಗೊಂಡಿದೆ. ಹೀಗಾಗಿ ಶರಣರ ಜಾಮೀನಿಗೆ ಸುಪ್ರೀಂ ಕೋರ್ಟ್‌ ನೀಡಿದ್ದ ತಡೆ ತೆರವುಗೊಂಡಿದೆ’ ಎಂದು 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಚನ್ನಬಸಪ್ಪ ಹಡಪದ ಆದೇಶಿಸಿದರು. ಸೋಮವಾರ ಸಂಜೆ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿದ ಶರಣರು ಕಾರಾಗೃಹದಿಂದ ಹೊರಬಂದರು.

ADVERTISEMENT

ಪ್ರಕರಣ ಸಂಬಂಧ 2023, ನ.8ರಂದು ಹೈಕೋರ್ಟ್, ಶರಣರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ನಂತರ ಪೋಕ್ಸೊದ 2ನೇ ಪ್ರಕರಣ ಸಂಬಂಧ ಅವರು ಮತ್ತೆ ಬಂಧನಕ್ಕೊಳಗಾಗಿದ್ದರು. ಜಾಮೀನು ಪರಿಗಣಿಸಿದ್ದ ಹೈಕೋರ್ಟ್‌ ನ.20ರಂದು ಅವರ ಬಿಡುಗಡೆಗೆ ಆದೇಶ ನೀಡಿತ್ತು.

ಹೈಕೋರ್ಟ್‌ ಜಾಮೀನಿನ ವಿರುದ್ಧ ಸಂತ್ರಸ್ತೆಯರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸಂತ್ರಸ್ತೆಯರು ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌ ಜಾಮೀನಿಗೆ ತಡೆ ನೀಡಿತ್ತು. ವಾರದೊಳಗೆ ನ್ಯಾಯಾಲಯದ ಎದುರು ಶರಣಾಗುವಂತೆ ಶರಣರಿಗೆ ಸೂಚಿಸಿತ್ತು. ಅದರಂತೆ ಮೇ 27ರಂದು ಅವರು ಮತ್ತೆ ಶರಣಾಗಿದ್ದರು.

ಸಂತ್ರಸ್ತೆಯರು ಹಾಗೂ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಯುವ ವರೆಗೂ ಆರೋಪಿ ನ್ಯಾಯಾಂಗ ಬಂಧನ ದಲ್ಲಿರಬೇಕು. ಜೊತೆಗೆ ವಿಚಾರಣೆಯನ್ನು 4 ತಿಂಗಳೊಳಗೆ ಪೂರ್ಣಗೊಳಿಸಬೇಕು. ಅಷ್ಟರಲ್ಲಿ ಸಾಧ್ಯವಾಗದಿದ್ದರೆ 2 ತಿಂಗಳು ಹೆಚ್ಚುವರಿಯಾಗಿ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

‘ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ 130 ದಿನದೊಳಗೆ ಸಂತ್ರಸ್ತೆಯರು ಹಾಗೂ ಸಾಕ್ಷಿಗಳ ವಿಚಾರಣೆ ಪೂರ್ಣ ಗೊಂಡಿದ್ದು, ಜಾಮೀನಿಗಿದ್ದ ತಡೆ ತಾನಾಗಿಯೇ ತೆರವುಗೊಂಡಿದೆ. ಹೀಗಾಗಿ ಹೈಕೋರ್ಟ್ ಜಾಮೀನು ಮುಂದುವರಿಯಲಿದೆ. ಇದನ್ನು ಪರಿಗಣಿಸಿ ಸ್ವಾಮೀಜಿ ಬಿಡುಗಡೆಗೆ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದರು. ಮಿಕ್ಕ ಸಾಕ್ಷಿಗಳ ವಿಚಾರಣೆ ಮುಂದುವರಿಯಲಿದೆ' ಎಂದು ಶರಣರ ಪರ ವಕೀಲ ವಿಶ್ವನಾಥಯ್ಯ ತಿಳಿಸಿದರು.

ಕಾಲಿಗೆರಗಿದ ಭಕ್ತರು: ಶಿವಮೂರ್ತಿ ಶರಣರು ಜೈಲಿನಿಂದ ನಗುನಗುತ್ತಲೇ ಹೊರಬಂದರು. ಅವರನ್ನು ಕಂಡೊಡನೆ ಮುರುಘಾ ಮಠದ ಕಿರಿಯ ಸ್ವಾಮೀಜಿಗಳು, ಭಕ್ತರು ಕಾಲಿಗೆ ಎರಗಿ ನಮಸ್ಕರಿಸಿದರು. ದಾವಣಗೆರೆ ಮತ್ತು ಚಿತ್ರದುರ್ಗದ ಭಕ್ತರು ಸ್ವಾಮೀಜಿಗೆ ಹಾರ ಹಾಕಿ ಸ್ವಾಗತಿಸಿದರು. ಕೆಲ ಭಕ್ತರು ಸ್ವಾಮೀಜಿ ಪರ ಜೈಕಾರ ಹಾಕಲು ಮುಂದಾದರು. ಆದರೆ, ಪೊಲೀಸರು ಅವರನ್ನು ತಡೆದರು.

ಹೈಕೋರ್ಟ್‌ ಆದೇಶದಂತೆ ಶರಣರಿಗೆ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಲು ಅವಕಾಶವಿಲ್ಲ. ಅಂತೆಯೇ ಅವರು ದಾವಣಗೆರೆ ಶಿವಯೋಗ ಆಶ್ರಮದತ್ತ ತೆರಳಿದರು. ದಾವಣಗೆರೆ ವಿರಕ್ತ ಮಠದ ಬಸವಪ್ರಭುಶ್ರೀ, ಶರಣರ ಉತ್ತರಾಧಿಕಾರಿ ಬಸವಾದಿತ್ಯ ಇದ್ದರು.

ಉತ್ಸವದ ವೇಳೆಯಲ್ಲೇ ಬಿಡುಗಡೆ ಭಾಗ್ಯ

ಶಿವಮೂರ್ತಿ ಶರಣರ ಬಂಧನದ ನಂತರ ನಗರದ ಮುರುಘಾ ಮಠದ ಆವರಣದಲ್ಲಿ ಎಲ್ಲ ಚಟುವಟಿಕೆ ಸ್ತಬ್ಧಗೊಂಡಿದ್ದವು. ಮಠದ ಆಡಳಿತಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಭಕ್ತರು ಈಗ ನವರಾತ್ರಿ ಅಂಗವಾಗಿ ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಸ್ವಾಮೀಜಿ 150ನೇ ಜಯಂತ್ಯುತ್ಸವ ಆಯೋಜಿಸಿದ್ದಾರೆ. ಮಠದ ಆವರಣದಲ್ಲಿ ಸಂಭ್ರಮ ಮರುಕಳಿಸಿದ್ದು ವೈಭವಯುತವಾಗಿ ಅಧ್ಯಾತ್ಮ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ.

ಇದೇ ವೇಳೆ ಶಿವಮೂರ್ತಿ ಶರಣರು ಬಿಡುಗಡೆಯಾದ ಸುದ್ದಿ ಮಠದ ಅಂಗಳದಲ್ಲಿ ಚರ್ಚೆಗೆ ಕಾರಣವಾಯಿತು. ಬಿಡುಗಡೆ ನಂತರ ಶರಣರು ಮುರುಘಾ ಮಠದ ಪಕ್ಕದ ರಸ್ತೆಯಲ್ಲೇ ದಾವಣಗೆರೆಯತ್ತ ಪ್ರಯಾಣಿಸಿದರು. ಅವರನ್ನು ನೋಡಲು ಅಪಾರ ಭಕ್ತರು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ಮಠದ ಬಳಿ ಬರುತ್ತಲೇ ಶರಣರು ಭಕ್ತರತ್ತ ಕೈಬೀಸಿ ಮುಂದೆ ಸಾಗಿದರು.

‘ಬಸವೇಶ, ಮುರುಘೇಶನ ಆಶೀರ್ವಾದ’

ಕಾರಾಗೃಹದಿಂದ ಹೊರಬಂದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೂರ್ತಿ ಶರಣರು, ‘ಬಸವೇಶ, ಮುರುಘೇಶನ ಆಶೀರ್ವಾದದಿಂದ ನಾವಿಂದು ಬಿಡುಗಡೆಯಾಗಿದ್ದೇವೆ. ಎಲ್ಲ ಪ್ರಕರಣಗಳ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ. ಸತ್ಯಕ್ಕೆ ಜಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಇದು ಮಾತನಾಡುವ ಕಾಲವಲ್ಲ, ಮೌನ ವಹಿಸುವಂತಹ ಕಾಲ. ವಿಚಾರ ಮಾಡಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.