ADVERTISEMENT

ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಸಾಕ್ಷ್ಯ ನುಡಿಯದಂತೆ ಬೆದರಿಕೆ

ಸಂತ್ರಸ್ತೆ ಚಿಕ್ಕಪ್ಪನ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 29 ಮೇ 2024, 14:04 IST
Last Updated 29 ಮೇ 2024, 14:04 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರದುರ್ಗ: ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಸಾಕ್ಷ್ಯ ನುಡಿಯದಂತೆ ಸಂತ್ರಸ್ತ ಬಾಲಕಿಗೆ ಬೆದರಿಸಿದ ಚಿಕ್ಕಪ್ಪನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್‌ ದಾಖಲಾಗಿದೆ.

ಮಕ್ಕಳ ಕಲ್ಯಾಣ ಸಮಿತಿಯ ಶಿಫಾರಸಿನ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪರಿವೀಕ್ಷಣಾಧಿಕಾರಿ ದೂರು ನೀಡಿದ್ದಾರೆ. ಹಲ್ಲೆ (ಐಪಿಸಿ 323), ಅಪಾಯಕಾರಿ ಆಯುಧ ಬಳಕೆ (ಐಪಿಸಿ 324), ಉದ್ದೇಶಪೂರ್ವಕ ಅವಮಾನ (ಐಪಿಸಿ 504) ಹಾಗೂ ಜೀವ ಬೆದರಿಕೆ (ಐಪಿಸಿ 506) ಮತ್ತು ಬಾಲನ್ಯಾಯ ಕಾಯ್ದೆಯ ಕಲಂ 75ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ADVERTISEMENT

ಶಿವಮೂರ್ತಿ ಶರಣರ ವಿರುದ್ಧ ದಾಖಲಾದ ಮೊದಲ ಪೋಕ್ಸೊ ಪ್ರಕರಣದ ಸಂತ್ರಸ್ತೆಯಾದ 17 ವರ್ಷದ ಬಾಲಕಿ, ಚಿಕ್ಕಪ್ಪನ ಆಶ್ರಯದಲ್ಲಿದ್ದಳು. ಪ್ರಮುಖ ಸಾಕ್ಷಿಯಾಗಿರುವ ಸಂತ್ರಸ್ತೆಗೆ ಶರಣರ ವಿರುದ್ಧ ಸಾಕ್ಷ್ಯ ನುಡಿಯದಂತೆ ಹಾಗೂ ದೂರು ಹಿಂಪಡೆಯುವಂತೆ ಬೆದರಿಸಲಾಗಿತ್ತು. ಆತಂಕಗೊಂಡ ಬಾಲಕಿ ಮನೆ ತೊರೆದು ಮೈಸೂರಿನ ‘ಒಡನಾಡಿ’ ಸೇವಾ ಸಂಸ್ಥೆಯ ಆಶ್ರಯ ಪಡೆದು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗಿದ್ದಳು.

ಕಿರಿಯ ಸಹೋದರನಿಗೂ ಚಿಕ್ಕಪ್ಪ ಕಿರುಕುಳ ನೀಡುತ್ತಿರುವ ಬಗ್ಗೆ ಸಂತ್ರಸ್ತ ಬಾಲಕಿ ಆರೋಪಿಸಿದ್ದಳು. ಬಾಲಕಿಯ ಹೇಳಿಕೆ ಆಧಾರದ ಮೇರೆಗೆ ಬಾಲಕನ್ನು ಬುಧವಾರ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿತ್ತು. ಚಿಕ್ಕಪ್ಪನ ಕುಟುಂಬ ಯಾವುದೇ ಕಿರುಕುಳ ನೀಡಿಲ್ಲ ಎಂಬುದಾಗಿ ಹೇಳಿಕೆ ನೀಡಿರುವ ಬಾಲಕ, ಬಾಲ ಮಂದಿರದ ಆಶ್ರಯ ನಿರಾಕರಿಸಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.