ADVERTISEMENT

ಶೀಘ್ರವೇ ಕ್ರೈಸ್ತ ಅಭಿವೃದ್ಧಿ ನಿಗಮ‌ ಸ್ಥಾಪನೆ: ಸಿದ್ದರಾಮಯ್ಯ

ಬೆಸಿಲಿಕಾ ಚರ್ಚ್‌ನಲ್ಲಿ ತಾಯಿ ಮೇರಿ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 15:35 IST
Last Updated 8 ಸೆಪ್ಟೆಂಬರ್ 2023, 15:35 IST
   

ಬೆಂಗಳೂರು: ‘ಶೀಘ್ರದಲ್ಲೇ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ತಾಯಿ ಮೇರಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದ ಅವರು, ‘ಬಜೆಟ್‌ನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಘೋಷಿಸಲಾಗಿದೆ. ಈ ನಿಗಮಕ್ಕೆ ₹100 ಕೋಟಿ ಅನುದಾನ ಮೀಸಲಿರಿಸಿ ಅರ್ಹ ಅಧ್ಯಕ್ಷರನ್ನು ನೇಮಿಸಲಾಗುವುದು’ ಎಂದು ಭರವಸೆ ನೀಡಿದರು.

‘ಭಾರತವೇ ಒಂದು ಭಾವೈಕ್ಯ ಕೇಂದ್ರ. ಇಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಮನುಷ್ಯ ದ್ವೇಷಕ್ಕೆ ಜಾಗ ಇಲ್ಲ. ಕೆಲವರು ಮನುಷ್ಯ ದ್ವೇಷವನ್ನೇ ಸಂಸ್ಕೃತಿಯನ್ನಾಗಿ ಆಚರಿಸಲು ಪ್ರಯತ್ನಿಸುತ್ತಿದ್ದಾರೆ. ದ್ವೇಷದ ವಾತಾವರಣ ಹರಡಿಸುವವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಮತೀಯ ಗೂಂಡಾಗಿರಿಗೆ ಅವಕಾಶ ಇಲ್ಲ. ಕಾನೂನು ಉಲ್ಲಂಘಿಸಿದರೆ ತಕ್ಕ ಶಾಸ್ತಿಯಾಗಲಿದೆ’ ಎಂದು ಎಚ್ಚರಿಸಿದರು.

ADVERTISEMENT

‘ಬೆಸಿಲಿಕಾ ಪ್ರಾರ್ಥನಾ ಮಂದಿರಕ್ಕೆ ಎಲ್ಲಾ ಜಾತಿ, ಧರ್ಮದವರು ಭೇಟಿ ನೀಡುತ್ತಾರೆ. ಹೀಗಾಗಿ ಇದೊಂದು ಭಾವೈಕ್ಯತಾ ಕೇಂದ್ರವಾಗಿ ರೂಪುಗೊಂಡಿದೆ. ಕ್ರೈಸ್ತ ಸಮುದಾಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಾಡಿಗೆ ಅಪಾರ ಸೇವೆ ಸಲ್ಲಿಸಿದೆ’ ಎಂದು ಮೆಚ್ಚುಗೆ ಸೂಚಿಸಿದರು.

ಶಿವಾಜಿನಗರ ಮೆಟ್ರೊ ನಿಲ್ದಾಣಕ್ಕೆ ಸೇಂಟ್ ಮೇರೀಸ್ ನಿಲ್ದಾಣ ಎಂದು ಹೆಸರಿಡಬೇಕು ಎನ್ನುವುದೂ ಸೇರಿ ಸಮುದಾಯದ ಮುಖಂಡರು ಮುಂದಿಟ್ಟಿರುವ ಮೂರು ಬೇಡಿಕೆಗಳ ಬಗ್ಗೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಆರ್ಚ್ ಬಿಷಪ್ ಪೀಟರ್ ಮಚ್ಚಾದೋ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.