ADVERTISEMENT

ಕ್ರಿಸ್‌ಮಸ್‌: ಭರ್ಜರಿ ಖರೀದಿ, ಸಿಂಗಾರಗೊಂಡಿವೆ ಚರ್ಚ್‌ಗಳು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 4:25 IST
Last Updated 22 ಡಿಸೆಂಬರ್ 2021, 4:25 IST
ಶಿವಾಜಿನಗರದ ಮಳಿಗೆಯೊಂದರಲ್ಲಿ ಕ್ರಿಸ್‌ಮಸ್‌ಗಾಗಿ ಇಟ್ಟಿರುವ ಸಾಂತಾ ಕ್ಲಾಸ್‌ ಗೊಂಬೆಗಳನ್ನು ಮಕ್ಕಳು ಕುತೂಹಲದಿಂದ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ
ಶಿವಾಜಿನಗರದ ಮಳಿಗೆಯೊಂದರಲ್ಲಿ ಕ್ರಿಸ್‌ಮಸ್‌ಗಾಗಿ ಇಟ್ಟಿರುವ ಸಾಂತಾ ಕ್ಲಾಸ್‌ ಗೊಂಬೆಗಳನ್ನು ಮಕ್ಕಳು ಕುತೂಹಲದಿಂದ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕ್ರಿಸ್‌ಮಸ್‌ಗೆ ಕ್ಷಣಗಣನೆ ಆರಂಭವಾಗಿದ್ದು,ನಗದಲ್ಲಿರುವ ಚರ್ಚ್‌ಗಳು ಸಿಂಗಾರಗೊಂಡು ಕಳೆಗಟ್ಟಿವೆ. ಮಾರುಕಟ್ಟೆಗಳಲ್ಲಿ ಕ್ರಿಸ್‌ಮಸ್‌ಗಾಗಿ ಅಲಂಕಾರಿಕ ವಸ್ತುಗಳು, ಉಡುಗೊರೆಗಳ ಖರೀದಿ ಭರಾಟೆ ಶುರುವಾಗಿದೆ.

ಕಳೆದ ವರ್ಷ ಕ್ರಿಸ್‌ಮಸ್‌ ಆಚರಣೆಗೆ ಕೋವಿಡ್‌ ನಿರ್ಬಂಧಗಳಿದ್ದವು. ಈ ಸಲದ ಆಚರಣೆಯನ್ನು ವಿಜೃಂಭಣೆಯಿಂದ ನಡೆಸಲು ಕ್ರೈಸ್ತ ಸಮುದಾಯ ಸಜ್ಜಾಗಿದೆ.

ಶಿವಾಜಿನಗರದ ಸೇಂಟ್‌ ಮೇರಿಸ್‌ ಬೆಸಿಲಿಕಾ, ಫ್ರೇಜರ್‌ ಟೌನ್‌ನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆಯಲ್ಲಿರುವ ಸಂತ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ ಚರ್ಚ್, ಸೇಂಟ್ ಜಾನ್ಸ್ ಚರ್ಚ್ ಸೇರಿದಂತೆ ನಗರದಲ್ಲಿ ಅನೇಕ ಚರ್ಚ್‌ಗಳು ಬಣ್ಣದ ದೀಪಗಳಿಂದ ಸಿಂಗಾರಗೊಂಡಿವೆ.

ADVERTISEMENT

ಚರ್ಚ್‌ನ ಆವರಣದಲ್ಲಿಯೇಸುವಿನ ಜೀವನ ಬಿಂಬಿಸುವ ಗೋದಲಿ ಪ್ರದರ್ಶನಕ್ಕೆ ತಯಾರಿಗಳು ನಡೆದಿವೆ. ಬೃಹದಾಕಾರದ ನಕ್ಷತ್ರಗಳು, ಕ್ರಿಸ್‌ಮಸ್‌ ವೃಕ್ಷಗಳು, ಬಣ್ಣ ಬಣ್ಣದ ಬಲೂನುಗಳು, ಗಂಟೆಗಳು ಹಾಗೂ ಸಾಂತಾ ಕ್ಲಾಸ್‌ನ ಪ್ರತಿರೂಪಗಳು ಚರ್ಚ್‌ಗಳು ಮೆರುಗನ್ನು ಹೆಚ್ಚಿಸಿವೆ.

ನಗರದ ಬಹುತೇಕ ಮಾಲ್‍ಗಳು, ಮೊಬೈಲ್, ಆಭರಣಗಳು ಹಾಗೂ ವಸ್ತ್ರದ ಮಳಿಗೆಗಳ ಪ್ರವೇಶದ್ವಾರದಲ್ಲಿ ಗ್ರಾಹಕರನ್ನು ಸೆಳೆಯಲು ಕ್ರಿಸ್‌ಮಸ್‌ ವೃಕ್ಷಗಳನ್ನು ನಿಲ್ಲಿಸಿ, ಅದಕ್ಕೆ ಬಣ್ಣದ ದೀಪಾಲಂಕಾರ ಮಾಡಲಾಗಿದೆ.

ಎಂ.ಜಿ.ರಸ್ತೆ, ಚರ್ಚ್‍ರಸ್ತೆ, ಗಾಂಧಿ ಬಜಾರ್, ಚಾಮರಾಜಪೇಟೆಯ ಪ್ರಮುಖ ಮಳಿಗೆಗಳಲ್ಲಿ ಕ್ರಿಸ್‍ಮಸ್‍ಗೆ ಅಗತ್ಯವಾದ ಅಲಂಕಾರಿಕ ವಸ್ತುಗಳು, ಉಡುಗೊರೆಗಳ ಮಾರಾಟ ಭರದಿಂದ ಸಾಗಿದೆ. ವಸ್ತ್ರ ಮಳಿಗೆಗಳಲ್ಲೂ ಹಬ್ಬಕ್ಕಾಗಿ ಖರೀದಿ ಜೋರಾಗಿದ್ದು, ಮಳಿಗೆಗಳಲ್ಲಿ ಜನಜಂಗುಳಿ ಕಂಡುಬಂತು. ಕ್ರೈಸ್ತ ಸಮುದಾಯದವರ ನಿವಾಸಗಳು ಬಣ್ಣ ಬಣ್ಣದ ತೋರಣಗಳು, ತೂಗು ನಕ್ಷತ್ರಗಳು, ಗಂಟೆಗಳು ಹಾಗೂ ದೀಪಾಲಂಕಾರಗಳಿಂದ ಕಂಗೊಳಿಸುತ್ತಿವೆ.

ಕ್ರಿಸ್‌ಮಸ್‌ಗಾಗಿ ಬೇಕರಿಗಳಲ್ಲಿ ವಿಶೇಷ ಕೇಕ್‌ಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಹಬ್ಬಕ್ಕಾಗಿ ವೈವಿಧ್ಯಮಯ ಚಾಕೊಲೇಟ್‌ಗಳು ಮಳಿಗಳಲ್ಲಿ ಹೆಚ್ಚು ಮಾರಾಟ ಆಗುತ್ತಿವೆ.

‘ಎಲ್ಲ ಚರ್ಚ್‍ಗಳಲ್ಲಿಈ ಸಲ ಕ್ರಿಸ್‍ಮಸ್ ಅನ್ನು ‘ಸಿನೋಟ್’ ಸಂದೇಶದಡಿ ಆಚರಿಸಲಾಗುತ್ತಿದೆ. ಸಿನೋಟ್ ಎಂದರೆಎಲ್ಲ ವರ್ಗದ ಜನ ಒಗ್ಗೂಡಿ ಸಾಗುವಂತೆ ಮಾಡುವುದು. ಈ ಸಂಬಂಧ ರೋಮ್‌ನಲ್ಲಿ ಮುಂದಿನ ವರ್ಷಧರ್ಮಸಭೆ ನಡೆಯಲಿದೆ. ಜನರು ಎದುರಿಸುತ್ತಿರುವ ಸವಾಲುಗಳು ಹಾಗೂ ಇನ್ನಿತರ ವಿಚಾರಗಳ ಬಗ್ಗೆಜಗತ್ತಿನ ವಿವಿಧ ದೇಶಗಳಲ್ಲಿರುವ ಕ್ರೈಸ್ತ ಪ್ರಮುಖರು ಸಭೆ ಸೇರಿ ಚರ್ಚಿಸಲಿದ್ದಾರೆ’ ಎಂದುಬೆಂಗಳೂರು ಮಹಾಧರ್ಮ ಕ್ಷೇತ್ರದ ಸಂಪರ್ಕ ಮಾಧ್ಯಮಗಳ ಕೇಂದ್ರದ ನಿರ್ದೇಶಕ ರೆವರೆಂಡ್ ಸಿರಿಲ್ ವಿಕ್ಟರ್ ಜೋಸೆಫ್ ತಿಳಿಸಿದರು.

ಕೇಕ್‌ ಪ್ರದರ್ಶನ‌
ಬೆಂಗಳೂರು:
ಶುಗರ್‌ ಸ್ಕಲ್ಟ್‌ ಅಕಾಡೆಮಿಯು ಯು.ಬಿ.ಸಿಟಿ ಬಳಿಯ ಸೇಂಟ್‌ ಜೋಸೆಫ್ಸ್‌ ಶಾಲಾ ಮೈದಾನದಲ್ಲಿ 47ನೇ ಕೇಕ್‌ ಪ್ರದರ್ಶನ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು 2022ರ ಜನವರಿ 2ರವರೆಗೆ ಮುಂದುವರಿಯಲಿದೆ.

ಶುಗರ್‌ ಸ್ಕಲ್ಟ್‌ ಅಕಾಡೆಮಿ ನಿರ್ದೇಶಕ ಸ್ಯಾಮಿ ಜೆ.ರಾಮಚಂದ್ರನ್‌ ಮತ್ತು ಅವರ ವಿದ್ಯಾರ್ಥಿಗಳು ತಯಾರಿಸಿರುವ ವಿವಿಧ ಬಗೆಯ ವಿವಿಧ ವಿನ್ಯಾಸ, ಗಾತ್ರ, ಅಳತೆ, ತೂಕದ ಕೇಕ್‌ಗಳು ಪ್ರದರ್ಶನದಲ್ಲಿವೆ. ನಟ ದಿವಂಗತ ಪುನೀತ್‌ ರಾಜ್‌ಕುಮಾರ್ ಅವರ ಪ್ರತಿಮೆ ಕೇಕ್‌ ಈ ವರ್ಷದ ವಿಶೇಷ ಮೆರುಗು. ಅಲ್ಲದೇ ಸ್ಟ್ಯಾಚ್ಯೂ ಆಫ್‌ ಲಿಬರ್ಟಿ, ಗ್ರೇಟ್‌ ಸ್ಫಿಂಕ್ಸ್‌ ಆಫ್‌ ಗೀಜಾ ಕ್ಲಾಸಿಕ್‌ ಜಂಗಲ್‌ ಬುಕ್, ಗೇಟ್‌ವೇ ಆಫ್‌ ಡ್ರೀಮ್‌ಲ್ಯಾಂಡ್, ಪೆಂಗ್ವಿನ್‌ ಆಫ್‌ ಮಡಗಾಸ್ಕರ್ ಮೊದಲಾದ ಒಟ್ಟು 6.1 ಟನ್ ತೂಕದ 21 ಬಗೆಯ ಕೇಕ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.