ಬೆಂಗಳೂರು: ಐಎಂಎ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ‘ಯಲ್ಲೋ ಎಕ್ಸ್‌ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಂಪನಿ ವಿರುದ್ಧ ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿದೆ.
ವಿವಿಧ ಹೆಸರಿನಲ್ಲಿ ಐದು ಕಂಪನಿಗಳನ್ನು ತೆರೆದು ಪ್ರತಿಯೊಬ್ಬರಿಂದ ₹2 ಲಕ್ಷದಿಂದ ₹2.50 ಲಕ್ಷದ ವರೆಗೂ ಹಣ ಸಂಗ್ರಹಿಸಲಾಗಿದೆ. ಸುಮಾರು 2 ಸಾವಿರಕ್ಕೂ ಹೆಚ್ಚು ಜನರನ್ನು ವಂಚಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ಸುಮಾರು ₹60 ಕೋಟಿಯಿಂದ ₹70 ಕೋಟಿ ಸಂಗ್ರಹಿಸಿರಬಹುದು. ಇವು ಬ್ಲೇಡ್ ಕಂಪನಿಗಳು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಬುಧವಾರ ಹೇಳಿದರು.
‘ಹಣ ಹೂಡಿಕೆದಾರರ ಹೆಸರಿನಲ್ಲಿ ಟ್ಯಾಕ್ಸಿ ಖರೀದಿಸಿ, ಅವುಗಳನ್ನು ಉಬರ್ ಸೇರಿದಂತೆ ವಿವಿಧ
ಟ್ರಾವೆಲ್ಸ್ ಸಂಸ್ಥೆಗಳಿಗೆ ಬಾಡಿಗೆಗೆ ನೀಡಲಾಗುವುದು. ಹಣ ತೊಡಗಿಸಿದವರಿಗೆ ಪ್ರತಿ ತಿಂಗಳು ₹10 ಸಾವಿರದಿಂದ ₹25 ಸಾವಿರದ ವರೆಗೆ ನೀಡುವುದಾಗಿ ಹೇಳಿ ನಂಬಿಸಲಾಗಿದೆ. 100 ಕಾರುಗಳನ್ನು ಖರೀದಿಸಿದ್ದರೂ, ಇವುಗಳನ್ನು ಹಣ ನೀಡಿದವರ ಹೆಸರಿಗೆ ನೋಂದಾಯಿಸದೆ ಕಂಪನಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಜನರಿಂದ ಸಂಗ್ರಹಿಸಿದ ಹಣವನ್ನೇ ಬಳಕೆಮಾಡಿಕೊಂಡು ಕೆಲವರಿಗೆ ಕಾರು ಬಾಡಿಗೆ ಮೊತ್ತವಾಗಿ ತಲಾ ₹10 ಸಾವಿರದಂತೆ ನೀಡಲಾಗಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ವಂಚಿಸಲು ತೆರೆದಿರುವ ಕಂಪನಿಗಳು
ಯಲ್ಲೋ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಲಿಮಿಟೆಡ್, ಯಲ್ಲೋಎಕ್ಸ್‌ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಯಲ್ಲೋ ಫೈನಾನ್ಸ್ ಅಂಡ್ ಅರ್ನಿಂಗ್ಸ್ ಲಿಮಿಡೆಟ್, ಲಾಗೀನ್ ಇಂಡಿಯಾ ಫೈನಾನ್ಸ್ ಅಂಡ್ ಅರ್ನಿಂಗ್ಸ್, ಲಕ್ಷ್ಮಿ ಕಾರ್‌ಜೋನ್ ಪ್ರೈವೇಟ್ ಲಿಮಿಟೆಡ್.
ತನಿಖೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ
ಜನರನ್ನು ವಂಚಿಸುವ ಸಲುವಾಗಿ ಕಂಪನಿಗಳನ್ನು ತೆರೆದಿದ್ದರೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರ್.ಅಶೋಕ ಹೇಳಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತಿದ್ದು, ಕ್ರಮ ಕೈಗೊಳ್ಳಲು ಆದೇಶಿಸಲಾಗುವುದು. ವಂಚನೆ ಕಂಪನಿಗಳನ್ನು ಪತ್ತೆಹಚ್ಚಿ ಮೂರು ತಿಂಗಳಲ್ಲಿ ಮಟ್ಟಹಾಕಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.