ಹುಬ್ಬಳ್ಳಿ: 'ನೇಹಾ ಕೊಲೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಸಿಐಡಿ ತನಿಖೆಯಿಂದ ಅವಳ ಸಾವಿಗೆ ನ್ಯಾಯ ಸಿಗಲಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲ್ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಬಿಡ್ನಾಳದಲ್ಲಿರುವ ನೇಹಾ ನಿವಾಸಕ್ಕೆ ತೆರಳಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. 'ರಾಜಕಾರಣ ಮಾಡುವುದಿದ್ದರೆ, ಈ ಮನೆಯನ್ನು ಹೊರತು ಪಡಿಸಿ ಮಾಡಿ. ಸಾವಿನ ಮನೆಯಲ್ಲಿ ಬೇಡ' ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
'ನೇಹಾ, ನಿರಂಜನಯ್ಯ ಹಿರೇಮಠ ಅವರ ಪುತ್ರಿಯಷ್ಟೇ ಅಲ್ಲ. ಅವಳು ಕನ್ನಡ ನಾಡಿನ ಮಗಳು. ಅವಳು ನಮ್ಮ ಕುಟುಂಬದ ಸದಸ್ಯಳಿದ್ದಂತೆ. ಈ ಘಟನೆ ಬಗ್ಗೆ ಅತ್ಯಂತ ದುಃಖವಿದ್ದು, ನಾವೆಲ್ಲ ಅವರ ಜೊತೆಗೆ ಇದ್ದೇವೆ. ಸಾವಿಗೆ ನ್ಯಾಯ ಕೊಡಿಸುವುದು ಸರ್ಕಾರದ ಕರ್ತವ್ಯ' ಎಂದು ಹೇಳಿದರು.
'ಆರೋಪಿಗೆ ಗಲ್ಲುಶಿಕ್ಷೆಯಾಗಬೇಕು ಎನ್ನುವುದು ನಮ್ಮ ಆಗ್ರಹ. ಈಗಾಗಲೇ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. 90 ದಿನಗಳಲ್ಲಿ ನ್ಯಾಯ ಸಿಗುವ ಭರವಸೆಯಿದೆ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.