ನವದೆಹಲಿ: ಬಿಬಿಎಂಪಿಯ ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಲಯಗಳಲ್ಲಿ ನಡೆದಿರುವ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ (ವಿಶೇಷ ಘಟಕಗಳು ಹಾಗೂ ಆರ್ಥಿಕ ಅಪರಾಧಗಳು) ಮಾಡಿರುವ ಶಿಫಾರಸಿಗೆ ಕರ್ನಾಟಕ ಸರ್ಕಾರ ಎಂಟು ವರ್ಷಗಳ ಬಳಿಕ ಪ್ರತಿಕ್ರಿಯಿಸಿದೆ.
ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್‌ಗಳನ್ನು ಅನುಮೋದಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಪಶ್ಚಿಮ ವಲಯದ ಜಂಟಿ ಆಯುಕ್ತರಾಗಿದ್ದ ವಿ.ಶ್ರೀರಾಮ ರೆಡ್ಡಿ ಹಾಗೂ ವಿ.ಪಿ.ಇಕ್ಕೇರಿ (ಇವರಿಬ್ಬರು ನಿವೃತ್ತರಾಗಿದ್ದಾರೆ) ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಿಐಡಿಯ ಪೊಲೀಸ್ ಮಹಾನಿರ್ದೇಶಕರು 2014ರ ಜೂನ್‌ನಲ್ಲಿ ಶಿಫಾರಸು ಮಾಡಿದ್ದರು.
ಈ ಶಿಫಾರಸಿಗೆ ಇತ್ತೀಚೆಗೆ ಪ್ರತಿಕ್ರಿಯಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ‘ಅಖಿಲ ಭಾರತ ಸೇವೆ (ಡಿಸಿಆರ್‌ಬಿ) ನಿಯಮಗಳು 1958ರ ಅನ್ವಯ ಕಾಲಮಿತಿ ಮೀರಿರುವ ಕಾರಣ ಈ ಇಬ್ಬರು ಅಧಿಕಾರಿಗಳ ವಿರುದ್ಧದ ಶಿಸ್ತುಕ್ರಮ ಶಿಫಾರಸನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದ್ದಲ್ಲಿ ಅಧಿಕಾರಿಗಳ ವಿರುದ್ಧ ಸಿವಿಲ್ ದಾವೆ ಹೂಡಬಹುದು’ ಎಂದು ಹೇಳಿದೆ. ಈ ಮೂರು ವಲಯಗಳಲ್ಲಿ ನಡೆದ ಅಕ್ರಮಗಳ ಬಗ್ಗೆ ‘ಪ್ರಜಾವಾಣಿ’ ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಮೂರು ವಲಯಗಳಲ್ಲಿ 2008–09ರಿಂದ 2011–12ನೇ ಸಾಲಿನ ವರೆಗೆ ಕೈಗೊಂಡಿರುವ ಕಾಮಗಾರಿಗಳಲ್ಲಿ ಬಹಳಷ್ಟು ಅಕ್ರಮಗಳು ನಡೆದಿದ್ದು, ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗಿರುವುದರಿಂದ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪಾಲಿಕೆ ಆಯುಕ್ತರು ಪಾಲಿಕೆಯ ತಾಂತ್ರಿಕ ಹಾಗೂ ಜಾಗೃತ ಕೋಶಕ್ಕೆ (ಟಿವಿಸಿಸಿ) ಸೂಚಿಸಿದ್ದರು. ವಿಭಾಗವು ಕೆಲವು ಪ್ರಕರಣಗಳನ್ನು ಸಾಂಕೇತಿಕವಾಗಿ ಪರಿಶೀಲಿಸಿತ್ತು. ಕಾಮಗಾರಿ ಸಂಕೇತಗಳನ್ನು (ಜಾಬ್ ಕೋಡ್) ನಕಲಿಯಾಗಿ ಸೃಷ್ಟಿಸಿ ಅಪಾರವಾದ ಹಣವನ್ನು ಬಿಲ್‌ಗಳ ಮೂಲಕ ಕ್ಲೇಮು ಮಾಡಿರುವುದು, ಕೆಟಿಪಿಪಿ ಕಾಯ್ದೆಗೆ ವ್ಯತಿರಿಕ್ತವಾಗಿ ಟೆಂಡರ್ ಪ್ರಕ್ರಿಯೆ ನಡೆಸಿರುವುದು, ಲೋಕೋಪಯೋಗಿ ಕೋಡ್‌ಗೆ ವಿರುದ್ಧವಾಗಿ ಕಾಮಗಾರಿ ಕೈಗೊಂಡಿರುವುದು, ನಿಯಮಬಾಹಿರವಾಗಿ ಕೆಲವೇ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿರುವುದನ್ನು ಪತ್ತೆ ಮಾಡಿತ್ತು. ಬಳಿಕ ಪಾಲಿಕೆಯ ವಿಶೇಷ ಆಯುಕ್ತರು ಬಿಎಂಟಿಎಫ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ನಂತರ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.
67 ಕಾಮಗಾರಿಗಳ ತನಿಖೆ ಪೂರ್ಣಗೊಳಿಸಿದ್ದ ಸಿಐಡಿ, 33 ಎಂಜಿನಿಯರ್‌ಗಳು ಹಾಗೂ 31 ಗುತ್ತಿಗೆದಾರರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಕಾಮಗಾರಿಗಳಲ್ಲಿ ₹6.22 ಕೋಟಿ ಆರ್ಥಿಕ ನಷ್ಟ ಉಂಟಾಗಿದೆ ಎಂದೂ ಹೇಳಿತ್ತು. ಬಳಿಕ 285 ಪ್ರಕರಣಗಳ ತನಿಖೆ ನಡೆಸಿತ್ತು. ಗಾಂಧಿನಗರ ಹಾಗೂ ಮಲ್ಲೇಶ್ವರ ವಿಭಾಗಗಳಲ್ಲಿ ಭಾರಿ ಅಕ್ರಮಗಳು ನಡೆದಿರುವುದನ್ನು ಪತ್ತೆ ಹಚ್ಚಿತ್ತು. ಈ ವೇಳೆ, ಶ್ರೀರಾಮ ರೆಡ್ಡಿ ಹಾಗೂ ವಿ.ಪಿ.ಇಕ್ಕೇರಿ ಅವರು ಪಶ್ಚಿಮ ವಲಯದ ಜಂಟಿ ಆಯುಕ್ತರಾಗಿದ್ದರು.
ರಸ್ತೆ ಡಾಂಬರೀಕರಣ ಕಾಮಗಾರಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ ದರಗಳನ್ನು ಅಳವಡಿಸಿಕೊಂಡು ಪಾಲಿಕೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಲಾಗಿದೆ. ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್‌ಗಳನ್ನು ಅನುಮೋದಿಸಿ ಅಕ್ರಮ ಎಸಗಲಾಗಿದೆ ಎಂದು ಸಿಐಡಿ ತಿಳಿಸಿತ್ತು.
ಅಕ್ರಮ ನಡೆಸಿದ್ದು ಹೇಗೆ?
*ಬಿಬಿಎಂಪಿಯವಲಯ ಮಟ್ಟದಲ್ಲಿ ಜಂಟಿ ಆಯುಕ್ತರು ಅಧ್ಯಕ್ಷರಾಗಿರುವ ಟೆಂಡರ್ ಅನುಮೋದನಾ ಸಮಿತಿಗೆ ₹30 ಲಕ್ಷದಿಂದ ₹60 ಲಕ್ಷದ ವರೆಗಿನ ಟೆಂಡರ್‌ಗಳನ್ನು ಅನುಮೋದಿಸಲು ಅಧಿಕಾರ ಇದೆ. ಆದರೆ, 2008ರಿಂದ 2012ನೇ ಸಾಲಿನ ವರೆಗೆ ಪಶ್ಚಿಮ ವಲಯದಲ್ಲಿ ₹60 ಲಕ್ಷ ಮೇಲ್ಪಟ್ಟ ಮೊತ್ತದ ಟೆಂಡರ್‌ಗಳನ್ನು ವಲಯ ಮಟ್ಟದ ಸಮಿತಿಯೇ ಅಧಿಕಾರ ವ್ಯಾಪ್ತಿ ಮೀರಿ ಅನುಮೋದಿಸಿದೆ. ನೂರಾರು ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಸಿಐಡಿ ಹೇಳಿದೆ.
*ಕೆಟಿಪಿಪಿ ನಿಯಮಗಳು 2000ರ ಪ್ರಕಾರ, ₹50 ಲಕ್ಷಕ್ಕೂ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ದ್ವಿ ಲಕೋಟೆ ಪದ್ಧತಿಯಲ್ಲಿ ಟೆಂಡರ್ ಆಹ್ವಾನಿಸಬೇಕು. ಗುತ್ತಿಗೆದಾರರ ತಾಂತ್ರಿಕ ಅರ್ಹತೆ ಅಳೆಯಲು ತಾಂತ್ರಿಕ ಮೌಲ್ಯಮಾಪನ ಮಾಡಬೇಕು. ₹50 ಲಕ್ಷದ ಮಿತಿಯೊಳಗೆ (₹49.99 ಲಕ್ಷ, 49.97 ಲಕ್ಷ ಇತ್ಯಾದಿ) ಅಂದಾಜು ಪಟ್ಟಿ ತಯಾರಿಸಲಾಗಿದೆ. ಬಳಿಕ ರಾಷ್ಟ್ರೀಯ ಹೆದ್ದಾರಿ ದರ ಪಟ್ಟಿಗೆ ಅನುಗುಣವಾಗಿ ಅಂದಾಜು ಮೊತ್ತವನ್ನು ₹70 ಲಕ್ಷ, 72 ಲಕ್ಷಕ್ಕೆ ಏರಿಸಲಾಗಿದೆ. ನಿಯಮ ಉಲ್ಲಂಘಿಸಿ ಟೆಂಡರ್ ಮೊತ್ತಗಳನ್ನು ನಿರ್ಧರಿಸಿ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಲಾಗಿದೆ ಎಂದು ಸಿಐಡಿ ವರದಿಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.