ಕಲಬುರಗಿ: ಕಲಬುರಗಿ ನಗರ, ಅಫಜಲಪುರ, ಯಾದಗಿರಿ ಸೇರಿ ಇತರೆ ಪರೀಕ್ಷಾ ಕೇಂದ್ರಗಳಲ್ಲಿ ಕೆಲವು ಅಭ್ಯರ್ಥಿಗಳು ಅಕ್ರಮವಾಗಿ ಬ್ಲೂಟೂತ್ ಉಪಕರಣ ಬಳಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆ ಬರೆದ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.
ಅಕ್ಟೋಬರ್ 28ರಂದು ಕೆಇಎ ವಿವಿಧ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಸಿತ್ತು. ಕೆಲ ಅಭ್ಯರ್ಥಿಗಳು ಬ್ಲೂಟೂತ್ ಡಿವೈಸ್‌ಗಳನ್ನು ಪಡೆದು ಪರೀಕ್ಷೆ ಬರೆಯುವಾಗ ಹಾಗೂ ತಪಾಸಣೆ ವೇಳೆ ಬಂಧಿತರಾಗಿದ್ದರು. ಪ್ರಕರಣದ ಆರೋಪಿ ಆರ್.ಡಿ. ಪಾಟೀಲ ಬಂಧನವಾದ ಮರುದಿನವೇ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.
‘ಅಫಜಲಪುರ ಠಾಣೆಯ ಅಪರಾಧ ಸಂಖ್ಯೆ 267/2023ರಲ್ಲಿ ಐಪಿಸಿ 109, 114, 120 ಬಿ, 420 ಇತರೆ ಸೆಕ್ಷನ್‌ಗಳಲ್ಲಿ ದಾಖಲಾದ ಪ್ರಕರಣವನ್ನು ಮುಂದಿನ ತನಿಖೆಗಾಗಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಐಡಿಗೆ ವರ್ಗಾಯಿಸಲಾಗಿದೆ. ಮುಂದಿನ ತನಿಖೆಗಾಗಿ ಪ್ರಕರಣದ ಕಡತವನ್ನು ಸಿಐಡಿಗೆ ಒಪ್ಪಿಸಬೇಕು’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್.ಹಿತೇಂದ್ರ ಅವರು ಶನಿವಾರ ಆದೇಶಿಸಿದ್ದಾರೆ.
ಪ್ರಕರಣದ ಕಡತವನ್ನು ಸಿಐಡಿ ತನಿಖಾಧಿಕಾರಿಗೆ ಖುದ್ದಾಗಿ ಹಸ್ತಾಂತರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ. ಸಿಐಡಿಯ ವಿಶೇಷ ಘಟಕವು ಹೆಚ್ಚಿನ ತನಿಖೆ ಕೈಗೊಳ್ಳಲು ವ್ಯವಸ್ಥೆ ಮಾಡಿಕೊಂಡು, ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ವಿವರವಾದ ವರದಿಯನ್ನು ಕಳುಹಿಸುವಂತೆಯೂ ತಿಳಿಸಿದ್ದಾರೆ.
ಸಿಐಡಿಯ ಮುಂದಿನ ನಡೆ ಏನು?: ‘ಪರೀಕ್ಷೆಯಲ್ಲಿ ಅಕ್ರಮ ಬ್ಲೂಟೂತ್ ಬಳಕೆಯ ಸಂಬಂಧ ಎಂಟು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಮಾಹಿತಿಯನ್ನು ಸಿಐಡಿ ತನಿಖಾ ಅಧಿಕಾರಿ ತರಿಸಿಕೊಳ್ಳುವರು. ನ್ಯಾಯಾಂಗ ಬಂಧನದ ಬಳಿಕ ಪ್ರಕರಣದ ಆರೋಪಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವರು’ ಎಂದು ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಅಫಜಲಪುರದ ಸೊನ್ನ ಗ್ರಾಮದ ನಿವಾಸಿ, ಆರ್.ಡಿ. ಪಾಟೀಲನ ಆಪ್ತ ಸಲಿಂ ಹಾಗೂ ನಗರದ ಖಾಸಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ಎಂಬಾತನನ್ನು ಅಶೋಕ ನಗರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದು, ಬಂಧಿತರ ಸಂಖ್ಯೆ 8ಕ್ಕೆ ತಲುಪಿದೆ. ಅಪಾರ್ಟ್‌ಮೆಂಟ್‌ನಿಂದ ತಪ್ಪಿಸಿಕೊಳ್ಳಲು ಸಹಕರಿಸಿದ್ದ ಮೂವರು ಆಪ್ತರು ಈಗಾಗಲೇ ಬಂಧಿತರಾಗಿದ್ದಾರೆ.
ಬ್ಲೂಟೂತ್ ಇರಿಸಿಕೊಂಡಿದ್ದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಹೊರಗಡೆಯಿಂದ ಉತ್ತರ ಹೇಳಿದ ಆರೋಪದಡಿ ಸಲೀಂ ಹಾಗೂ ಇದಕ್ಕೆ ಸಹಕರಿಸಿದ ಸಂತೋಷನನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.
‘ಆದೇಶ ಕೈ ಸೇರಿದ ಬಳಿಕ ಕ್ರಮ’
ಬೆಂಗಳೂರು: ‘ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ತೀರ್ಪು ನೀಡಿದೆ. ಆದೇಶದ ಕೈ ಸೇರಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಕೋರ್ಟ್ ಆದೇಶವನ್ನು ನಾನು ನೋಡಿಲ್ಲ. ಅಡ್ವೊಕೇಟ್ ಜನರಲ್ ಜೊತೆ ಮಾತನಾಡಿದ್ದೇನೆ’ ಎಂದರು.
‘ಸ್ವತಂತ್ರ ಸಂಸ್ಥೆಯಿಂದ ಆದಷ್ಟು ಬೇಗ ಪರೀಕ್ಷೆ ನಡೆಸುವಂತೆ ಕೋರ್ಟ್ ಹೇಳಿದೆ. ನಮಗೆ ಓದಲು ಸಮಯ ನೀಡುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಪರಿಗಣಿಸುತ್ತೇವೆ’ ಎಂದರು.
‘ಪಿಎಸ್‌ಐ ನೇಮಕಾತಿ ಬಳಿಕ ತರಬೇತಿ ಮುಗಿಯಲು ಒಂದು ವರ್ಷ ಬೇಕು. ಹೀಗಾಗಿ, ಸುಮಾರು 600 ಎಎಸ್ಐಗಳಿಗೆ ನಿಯಮ 32ರಡಿ ಪಿಎಸ್‌ಐ ಹುದ್ದೆಗೆ ಬಡ್ತಿ ನೀಡಿದ್ದೇವೆ. ನೇಮಕಾತಿ ಪ್ರಕ್ರಿಯೆ ನಡೆದಿದ್ದ 545 ಪಿಎಸ್‌ಐ ಹುದ್ದೆಗಳ ಜೊತೆಗೆ ಇನ್ನೂ 400 ಹುದ್ದೆಗಳು ಖಾಲಿ ಇವೆ. ಈ ಎಲ್ಲ ಹುದ್ದೆಗಳಿಗೆ ಒಟ್ಟಿಗೆ ಪರೀಕ್ಷೆ ಮಾಡಬೇಕೇ? ಪ್ರತ್ಯೇಕವಾಗಿ ಮಾಡಬೇಕೇ ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.