ADVERTISEMENT

ಸಂಶೋಧನೆ–ಅಭಿವೃದ್ಧಿಗೆ ಒತ್ತು ನೀಡಿ: ಸಚಿವ ಪ್ರಿಯಾಂಕ್‌ ಖರ್ಗೆ

ಸಿಐಐ ಇನ್ನೋವರೇಜ್‌ ಶೃಂಗಸಭೆಯಲ್ಲಿ ಸಚಿವ, ಉದ್ಯಮಿಗಳ ಕರೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 15:39 IST
Last Updated 4 ಸೆಪ್ಟೆಂಬರ್ 2024, 15:39 IST
<div class="paragraphs"><p>ಸಿಐಐ ಇನ್ನೋವರೇಜ್‌–2024 ಶೃಂಗಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.&nbsp; </p></div>

ಸಿಐಐ ಇನ್ನೋವರೇಜ್‌–2024 ಶೃಂಗಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. 

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಂಶೋಧನೆ ಮತ್ತು ಅಭಿವೃದ್ಧಿಗೆ (ಆರ್ ಅಂಡ್‌ ಡಿ) ಪ್ರಬಲ ಒತ್ತು ನೀಡುತ್ತಿರುವುದೇ ಕರ್ನಾಟಕವನ್ನು ₹1 ಲಕ್ಷ ಕೋಟಿಯ ಆರ್ಥಿಕತೆಯನ್ನಾಗಿಸುವ ಗುರಿಯ ಚಾಲಕ ಶಕ್ತಿಯಾಗಿದೆ’ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ADVERTISEMENT

ಸಿಐಐ ನಗರದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಇನ್ನೋವರೇಜ್‌ 2024’ ನಾವೀನ್ಯತಾ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆರ್‌ ಅಂಡ್‌ ಡಿಗೆ ಒತ್ತು ನೀಡುವಲ್ಲಿ ನಾವೀನ್ಯತೆ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ನೀತಿಗಳನ್ನು ಕರ್ನಾಟಕ ರೂಪಿಸುತ್ತಿದೆ. ಬೆಂಗಳೂರಿನ ಆಚೆಗೂ ಹಲವು ಜಿಲ್ಲೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿ, ಸಂಶೋಧನೆಗೆ ಅವಕಾಶ ಮಾಡಿಕೊಡಲಾಗಿದೆ’ ಎಂದರು.

ಉದ್ಯಮಿ ಕ್ರಿಸ್‌ ಗೋಪಾಲಕೃಷ್ಣನ್‌ ಮಾತನಾಡಿ, ‘ಭಾರತವನ್ನು ಉತ್ಪನ್ನ ಆಧಾರಿತ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಅವಶ್ಯ ಇದೆ. ಇದಕ್ಕಾಗಿ ಉದ್ಯಮಗಳು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಹೆಚ್ಚು ಹೂಡಿಕೆ ಮಾಡಬೇಕು’ ಎಂದರು. 

ಬುಧವಾರ ಆರಂಭವಾಗಿರುವ ಶೃಂಗಸಭೆಯು ಶುಕ್ರವಾರದವರೆಗೂ ನಡೆಯಲಿದೆ. ಪ್ರತಿದಿನ ಹಲವು ಸಂವಾದಗಳನ್ನು ಆಯೋಜಿಸಲಾಗಿದೆ. 

ಶೃಂಗಸಭೆಯ ಭಾಗವಾಗಿ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ನಿರ್ಮಾಣ ತಂತ್ರಜ್ಞಾನ, ವಿದ್ಯುತ್ ಚಾಲಿತ ವಾಹನಗಳ ತಂತ್ರಜ್ಞಾನ, ಬಹುಪಯೋಗಿ ಡ್ರೋನ್‌ಗಳು, ಸೌರದೀಪ ತಂತ್ರಜ್ಞಾನಕ್ಕೆ ಸಂಬಂಧಿಸದ ಪರಿಕರಗಳನ್ನು ಹಲವು ಕಂಪನಿಗಳು ಪ್ರದರ್ಶನದಲ್ಲಿ ಇರಿಸಿವೆ.

ನಗರದ ಬಗ್ಗೆ ಒಳ್ಳೆಯ ಮಾತನಾಡಿ

‘ಬೆಂಗಳೂರು ನಮಗೆ ಏನೇನೆಲ್ಲಾ ನೀಡಿದೆ. ಹೊಸ ತಲೆಮಾರಿನ ವಿದ್ಯಾವಂತ ಯುವಕರು ಕೇವಲ ‘ಟ್ರಾಫಿಕ್‌ ಟ್ರಾಫಿಕ್‌’ ಎಂದು ದೂರುವುದನ್ನು ಬಿಡಬೇಕು. ನಗರದ ಬಗ್ಗೆ ಒಳ್ಳೆಯ ಮಾತುಗಳನ್ನೂ ಆಡಬೇಕು’ ಎಂದು ರಾಯಲ್ ಆರ್ಕಿಡ್ಸ್‌ ಮತ್ತು ರೆಜೆಂಟಾ ಹೋಟೆಲ್ಸ್‌ನ ಮುಖ್ಯಸ್ಥ ಚಂದರ್‌ ಬಾಲ್ಜೀ ಸಲಹೆ ನೀಡಿದರು.

ಪ್ರವಾಸೋದ್ಯಮ ಮತ್ತು ಆತಿಥ್ಯದ ಒಳಹೊರಗು ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಸಭಿಕರೊಬ್ಬರು ‘ನಾವಿಲ್ಲಿ ಆತಿಥ್ಯದ ಬಗ್ಗೆ ಮಾತನಾಡುತ್ತೇವೆ. ಮನೆಯಿಂದ ಕೆಲವೇ ನೂರು ಮೀಟರ್‌ ದೂರದಲ್ಲಿರುವ ಹೋಟೆಲ್‌ನಿಂದ ಊಟ ತರಿಸಿಕೊಳ್ಳಲು 45 ನಿಮಿಷವಾಗುತ್ತದೆ. ಸಂಚಾರದ ವ್ಯವಸ್ಥೆಯನ್ನು ಸುಧಾರಿಸದೆ ಬೇರೆನನ್ನೂ ಸುಧಾರಿಸಲಾಗದು. ಇದಕ್ಕೇನು ಮಾಡುವುದು’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಚಂದರ್ ಹೀಗೆ ಉತ್ತರಿಸಿದರು.

‘ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರೂ ಕೈಜೋಡಿಸಬೇಕು. ನಾವಿರುವ ಸ್ಥಳವನ್ನು ನಾವೇ ಉತ್ತಮ ಪಡಿಸಿಕೊಳ್ಳಬೇಕು. ಎಲ್ಲವನ್ನೂ ದೂರುತ್ತಾ ಕೂತರೆ ಏನೂ ಸರಿಯಾಗುವುದಿಲ್ಲ. ನಮ್ಮ ನಗರದ ಬಗ್ಗೆ ಒಳ್ಳೆಯ ಮಾತನಾಡಬೇಕು. ಆಗ ಅದರ ಬಗ್ಗೆ ಪ್ರೀತಿ ಬೆಳೆಯುತ್ತದೆ. ಸಮಸ್ಯೆಯನ್ನು ನಿವಾರಿಸಲೂ ಸಾಧ್ಯವಾಗುತ್ತದೆ’ ಎಂದು ಚಂದರ್‌ ಹೇಳಿದರು.

ನವೋದ್ಯಮಗಳ ನೆರವಿಗೆ ಕಾರ್ಯಕ್ರಮ

ಸುಸ್ಥಿರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡ (ಕ್ಲೀನ್‌ಟೆಕ್‌) ನವೋದ್ಯಮಗಳಿಗೆ ನೆರವು ನೀಡುವ ಕರ್ನಾಟಕ ಕ್ಲೀನ್‌ಟೆಕ್‌ ನವೋದ್ಯಮ ಕಾರ್ಯಕ್ರಮಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಬುಧವಾರ ಚಾಲನೆ ನೀಡಿದರು.  ಸಿಐಐ ಮತ್ತು ಜಿಇಸಿ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ನವೀಕರಿಸಬಹುದಾದದ ಇಂಧನ ಸೌರವಿದ್ಯುತ್ ನೀರಿನ ಸಂರಕ್ಷಣೆ ಮತ್ತು ಕಸ ವೈಜ್ಞಾನಿಕ ವಿಲೇವಾರಿ ವಲಯಗಳಿಗಾಗಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿರುವ ನವೋದ್ಯಮಗಳು ಇದರ ಪ್ರಯೋಜನ ಪಡೆಯಬಹುದು. ಅಂತಹ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕೆ ಸಿಐಐ ಮತ್ತು ಜಿಇಸಿ ನೆರವಾಗಲಿವೆ. ಸೆಪ್ಟೆಂಬರ್ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿಗಳನ್ನು https://forms.mycii.in/form/f728ad1b-f919-4dcd-9d2a-8b1c73e55658 ಲಿಂಕ್‌ನ ಮೂಲಕ ಸಲ್ಲಿಸಬಬಹುದಾಗಿದೆ.

ಭಾರತವನ್ನು ತಾಂತ್ರಿಕ ಮತ್ತು ಆರ್ಥಿಕ ಸೂಪರ್‌ ಪವರ್ ಆಗಿ ರೂಪಿಸುವಲ್ಲಿ ನಮ್ಮ ನಡೆಗಳು ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಳ್ಳುವಂತಿರಬೇಕು
-ಗೀತಾಂಜಲಿ ಕಿರ್ಲೋಸ್ಕರ್ ಮುಖ್ಯಸ್ಥೆ ಕಿರ್ಲೋಸ್ಕರ್ ಸಿಸ್ಟಂಸ್‌ ಪ್ರೈ.ಲಿ.
ಭಾರತವನ್ನು ಜಾಗತಿಕ ನಾವೀನ್ಯತಾ ಕೇಂದ್ರವನ್ನಾಗಿಸುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ರಾಜ್ಯದ ಕೊಡುಗೆಯು ದೇಶದ ಎಲ್ಲರ ನೆರವಿಗೂ ಬರಲಿದೆ
-ಎನ್‌.ವೇಣು ಅಧ್ಯಕ್ಷ ಸಿಐಐ ಕರ್ನಾಟಕ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.