ಬೆಂಗಳೂರು: ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಲಾವಿದರು, ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಸಾಮಾಜಿಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರವು, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪಿಸಲು ಮುಂದಾಗಿದೆ.
ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ, ಒಪ್ಪಿಗೆ ಪಡೆದಿದೆ. ಈ ಮಸೂದೆಯು ಕಾಯ್ದೆಯಾಗಿ ಜಾರಿಯಾದರೆ, ಕಾರ್ಮಿಕ ಸಚಿವರ ಅಧ್ಯಕ್ಷತೆಯ ಮಂಡಳಿ ರಚನೆಯಾಗುತ್ತದೆ. ಮಂಡಳಿಯು ಯಾವೆಲ್ಲಾ ರೀತಿಯ ಕಲ್ಯಾಣ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತರುತ್ತದೆ ಎಂಬುದರ ಬಗ್ಗೆ ಇನ್ನಷ್ಟೇ ನಿಯಮಗಳನ್ನು ರಚಿಸಬೇಕಿದೆ.
ಸಿನಿಮಾ ಟಿಕೆಟ್ ಮೇಲೆ ಸೆಸ್
ರಾಜ್ಯ ಸರ್ಕಾರವು ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿ’ಯನ್ನು ಸ್ಥಾಪನೆ ಮಾಡಲಿದೆ. ಈ ನಿಧಿಯ ಮೂಲಕವೇ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ನೀಡಿದ ಅನುದಾನವನ್ನು ಈ ನಿಧಿ ಒಳಗೊಂಡಿರುತ್ತದೆ. ಈ ನಿಧಿಗೆ ನೋಂದಾಯಿತ ಕಾರ್ಯಕರ್ತರಿಂದ ವಂತಿಗೆ ಸಂಗ್ರಹಿಸಲು ಮಸೂದೆಯಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ಸಿನಿಮಾ ಟಿಕೆಟ್ ದರದ ಮೇಲೆ ಸೆಸ್ ವಿಧಿಸಬಹುದಾಗಿದೆ.
ಮಂಡಳಿ ಮತ್ತು ನೋಂದಣಿ
*ಕಾರ್ಮಿಕ ಸಚಿವ, ಕಾರ್ಮಿಕ ಇಲಾಖೆ ಪ್ರಧಾನ/ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಆಯುಕ್ತರು, ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತ 17 ಸದಸ್ಯರನ್ನು ಒಳಗೊಂಡ ಮಂಡಳಿ ರಚನೆಗೆ ಅವಕಾಶ
*ಸಿನಿ ಮತ್ತು ಕಾರ್ಯಕರ್ತರ ನೋಂದಣಿಯನ್ನು ಮಾಡಿಸುವ ಮತ್ತು ನಿರ್ವಹಣೆ ಮಾಡುವ ಹೊಣೆಗಾರಿಕೆ ಮಂಡಳಿಯದ್ದು
ಯಾರಿಗೆಲ್ಲಾ ಸಾಮಾಜಿಕ ಭದ್ರತೆ...
* ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಕಲಾವಿದರು. ಸಿನಿಮಾ ಕ್ಷೇತ್ರದ ಯಾವುದೇ ಕೌಶಲಯುಕ್ತ ಮತ್ತು ಕೌಶಲ ಅಗತ್ಯವಿಲ್ಲದ ಕೆಲಸದಲ್ಲಿ ತೊಡಗಿಸಿಕೊಂಡವರು
* ಚಲನಚಿತ್ರ, ನಾಟಕ, ಸಂಗೀತ ಮತ್ತು ನೃತ್ಯ, ಜಾನಪದ, ಲಲಿತಕಲಾ, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಗಳು ನಿರ್ವಹಿಸುವ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವವರು
* ಏಕಪರದೆ ಚಿತ್ರಮಂದಿರ, ಮಲ್ಟಿಫ್ಲೆಕ್ಸ್, ದೂರದರ್ಶನ ವಾಹಿನಿಗಳು, ಓಟಿಟಿಗೆ ಸಂಬಂಧಿಸಿದಂತೆ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿರುವವರು
* ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತನ/ಳ ಪತ್ನಿ/ಪತಿ, ಅಪ್ರಾಪ್ತ ಗಂಡುಮಕ್ಕಳು, ಅವಿವಾಹಿತ ಹೆಣ್ಣು ಮಕ್ಕಳು, ಪೋಷಕರು, ಸಂಪೂರ್ಣವಾಗಿ ಅವಲಂಬಿತರಾಗಿರುವ ಮಾನಸಿಕ ಅಸ್ವಸ್ಥ/ಅಂಗವಿಕಲ/ ವಿಧವೆ ಹೆಣ್ಣುಮಕ್ಕಳಿಗೆ ಅನ್ವಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.