ಮಂಗಳೂರು: ರಿಸರ್ವೆಶನ್, ಟ್ರಿಪಲ್ ತಲಾಕ್ ಮತ್ತಿತರ ಸೂಕ್ಷ್ಮ ಸಂವೇದನೆಯ ಸಿನಿಮಾಗಳನ್ನು ನೀಡಿದ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ಲಾಕ್‌ಡೌನ್ ಸಂದರ್ಭ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಗುಜರಿ ವ್ಯಾಪಾರಕ್ಕೆ ಮೊರೆ ಹೋಗಿದ್ದಾರೆ.
ಈ ಸಂಕಷ್ಟದ ನಡುವೆಯೂ ಸೃಜನಶೀಲತೆಯನ್ನು ಬಿಡಲೊಲ್ಲದ ಅವರು, ಲಾಕ್‌ಡೌನ್ ಸಂವೇದನೆಯನ್ನು ‘ಇದ್ದತ್’ (ಪತಿ ನಿಧನ ಸಂದರ್ಭದಲ್ಲಿ ಮರೆಯಲ್ಲಿ ಇರುವುದು) ಸಿನಿಮಾ ಮೂಲಕ ತೆರೆಗೆ ತರಲು ಹೆಜ್ಜೆ ಇಟ್ಟಿದ್ದಾರೆ.
ಸಂಚಲನ ಮೂಡಿಸಿದ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಮೂಲತಃ ಕುಂದಾಪುರದ ಗುಲ್ವಾಡಿ, ಅನಿವಾರ್ಯವಾಗಿ ಆರನೇ ತರಗತಿಯಲ್ಲೇ ಶಾಲೆ ಬಿಟ್ಟು, ಸೈಕಲ್ ಮೂಲಕ ಗುಜರಿ ವ್ಯಾಪಾರ ಆರಂಭಿಸಿದ್ದರು.
‘ಅಂದು ಗುಜರಿಗೆ ಬಂದ ಪುಸ್ತಕಗಳನ್ನು ಓದುತ್ತಿದ್ದೆನು. ಅದರಲ್ಲಿ ಸಂತೋಷ್ ಕುಮಾರ್ ಗುಲ್ವಾಡಿ ಅವರ ‘ಅಂತರಂಗ–ಬಹಿರಂಗ’ ನನ್ನ ಅಚ್ಚುಮೆಚ್ಚಾಗಿತ್ತು. ಅದಕ್ಕಾಗಿ ಅವರನ್ನು ಭೇಟಿಯಾಗಿದ್ದೆನು. ಆದರೆ, 2006ರಲ್ಲಿ ಅಚ್ಚರಿ ಎಂಬಂತೆ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಕರೆ ನನಗೆ ಬಂದಿತ್ತು. ಅವರ ‘ಗುಲಾಬಿ ಟಾಕೀಸ್’ ಸಿನಿಮಾದಲ್ಲಿನ ಕುಂದಾಪುರ ಕನ್ನಡ ಹಾಗೂ ಬ್ಯಾರಿ ಭಾಷೆ, ಸಾಂಸ್ಕೃತಿಕ ವಿಚಾರಗಳಿಗಾಗಿ ಸಂಪರ್ಕಿಸಿದ್ದರು. ಆಗಲೇ ನನಗೆ ಸಿನಿಮಾ ‘ಸ್ಕ್ರಿಪ್ಟ್’ ಬಗ್ಗೆ ಅರಿವಾಗಿದ್ದು. ನಾನೂ ಅದರಲ್ಲಿ ಕೆಲಸ ಮಾಡಿದೆನು’ ಎಂದು ಅಂದಿನ ನೆನಪನ್ನು ಯಾಕೂಬ್ ಮೆಲುಕು ಹಾಕಿದರು.
‘ಅನಂತರ, 2012–13ರಲ್ಲಿ ನಿಖಿಲ್ ಮಂಜು ಅವರು ‘ಹಜ್’ ಸಿನಿಮಾಕ್ಕಾಗಿ ಸಂಪರ್ಕಿಸಿದರು. ಬಳಿಕ ಅವರ ‘ಗೆರೆಗಳು’ ಇತ್ಯಾದಿ ಸಿನಿಮಾಗಳಿಗೆ ಕೆಲಸ ಹಾಗೂ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಎಲ್ಲವೂ ರಾಷ್ಟ್ರ, ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ ಅಂತರರಾಷ್ಟ್ರೀಯ ಪ್ರದರ್ಶನ ಕಂಡವು’ ಎಂದರು.
‘2016–17ರಲ್ಲಿ ನಾನೇ ನಿರ್ದೇಶನಕ್ಕೆ ಇಳಿದೆ. ‘ರಿಸರ್ವೇಷನ್’ ನನ್ನ ಮೊದಲ ಸಿನಿಮಾ. ‘ಟ್ರಿಪಲ್ ತಲಾಕ್’ ಬಳಿಕ ಬಂತು. ಎರಡೂ ಅಂತರರಾಷ್ಟ್ರೀಯ ಪ್ರದರ್ಶನ, ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವು. ಸುಮಾರು 17 ದೇಶಗಳಿಗೆ ಹೋಗಿಬಂದೆನು.’ ಎಂದು ಸಾರ್ಥಕತೆಯ ನಿಟ್ಟುಸಿರು ಬಿಟ್ಟರು.
‘ಟ್ರಿಪಲ್ ತಲಾಕ್’ 54 ದೇಶಗಳಲ್ಲಿ ಪ್ರದರ್ಶನಕ್ಕೆ ಹೋಗಬೇಕಿತ್ತು. ಆಗಲೇ ಲಾಕ್‌ಡೌನ್ ಘೋಷಿಸಿಬಿಟ್ಟರು. ನನಗೆ ಬದುಕೇ ಇಲ್ಲದಂತಾಗಿ, ಆರ್ಥಿಕ–ಮಾನಸಿಕವಾಗಿ ಜರ್ಜರಿತಗೊಂಡೆನು. ಹೀಗಾಗಿ, ಎರಡೂವರೆ ತಿಂಗಳ ಹಿಂದೆ ಮತ್ತೆ ಗುಜರಿ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದೆ’ ಎಂದು ವಿವರಿಸಿದರು.
ಆದರೆ, ಲಾಕ್‌ಡೌನ್ ಸಂದರ್ಭದ ಸಂವೇದನೆಯು, ಮುಸ್ಲಿಂ ಮಹಿಳೆಯೊಬ್ಬಳು ಪತಿ ನಿಧನ ಹೊಂದಿದ ಸಂದರ್ಭದಲ್ಲಿ ಮರೆಯಾಗಿರಬೇಕಾದ ‘ಇದ್ದತ್’ ನಂತೆ ಭಾಸವಾಯಿತು. ಸೂಲಗಿತ್ತಿ ಮಹಿಳೆಯ ಪತಿ ತೀರಿ ಹೋದ ಸಂದರ್ಭದಲ್ಲೇ, ಸಮೀಪದ ಮನೆಯ ಯುವತಿಗೆ ಹೆರಿಗೆ ನೋವು ಬಂದರೆ ಏನಾಗಬಹುದು? ಎಂದು ಕಾಡಿತು. ಮತ್ತೆ ಸಿನಿಮಾ ಸೆಳೆಯುತ್ತಿದೆ’ ಎಂದು ಕಣ್ಣರಳಿಸಿದರು.
ಈ ನಡುವೆಯೇ, ಆಫ್ರಿಕಾದ ನೈಜೀರಿಯಾದಲ್ಲಿ ನಡೆಯುತ್ತಿರುವ ಸಿನಿಮೋತ್ಸವದ ಸ್ಪರ್ಧೆಯ ಮೂರು ವಿಭಾಗಗಳಲ್ಲಿ ಯಾಕೂಬ್ ಅವರ ‘ಟ್ರಿಪಲ್ ತಲಾಕ್ ’ ಸಿನಿಮಾ ಆಯ್ಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.