ADVERTISEMENT

ಪೌರತ್ವ ಕಾಯ್ದೆ; ಹೆಚ್ಚಾದ ಹೋರಾಟದ ಕಿಚ್ಚು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 19:41 IST
Last Updated 16 ಡಿಸೆಂಬರ್ 2019, 19:41 IST
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು ‍– ಪಿಟಿಐ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು ‍– ಪಿಟಿಐ   

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಗಳು ಮುಂದುವರಿದಿದ್ದು, ಸೋಮವಾರವೂ ನಗರದ ಹಲವೆಡೆ ಪ್ರತಿಭಟನೆಗಳು ನಡೆದವು.

ನಗರದ ಪುರಭವನ ಎದುರುಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ಯಾವುದೇ ಅಭಿವೃದ್ಧಿ ಮಾಡದ ಕೇಂದ್ರ ಸರ್ಕಾರ ಇದೀಗ ಭಾರತವನ್ನೇ ಒಡೆಯಲು ಮುಂದಾಗಿದೆ. ಇದನ್ನು ಪ್ರಶ್ನಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಹೋರಾಟಗಾರರ ಮೇಲೆಯೇ ಪೊಲೀಸರನ್ನು ಬಿಟ್ಟು ಹಲ್ಲೆ ಮಾಡಿಸುವ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ವಿರೋಧಿ ನೀತಿ ಆಗಿದೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ADVERTISEMENT

‘ಸರ್ವರೂ ಒಂದೇ ಎಂಬ ಭಾವನೆಯಿಂದ ನಾವೆಲ್ಲರೂ ಬದುಕುತ್ತಿದ್ದೇವೆ. ಬಹುಮತ ಪಕ್ಷವೆಂದು ಬೀಗುತ್ತಿರುವ ಕೇಂದ್ರ ಸರ್ಕಾರ,ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ದೇಶವನ್ನು ಅಪಾಯದ ಅಂಚಿಗೆ ತೆಗೆದುಕೊಂಡು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಕೃತ್ಯವನ್ನು ಖಂಡಿಸುತ್ತೇವೆ. ಕ್ಯಾಂಪಸ್‌ಗೆ ನುಗ್ಗಿ ವಿದ್ಯಾರ್ಥಿಗಳನ್ನು ಹಲ್ಲೆ ಮಾಡಿರುವುದಕ್ಕೆ ಸರ್ಕಾರ ಮುಂದಿನ ದಿನಗಳಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಪ್ರತಿಭಟನಾಕಾರರು ಹೇಳಿದರು.

ಗೃಹ ಸಚಿವರ ರಾಜೀನಾಮೆಗೆ ಒತ್ತಾಯ: ಪುರಭವನ ಎದುರು ಪ್ರತಿಭಟನೆ ನಡೆಸಿದ ಮತ್ತೊಂದು ಗುಂಪು, ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿತು.

‘ಗೃಹ ಸಚಿವರಿಂದಲೇ ದೇಶದಲ್ಲಿ ಇಂಥ ಬೆಳವಣಿಗೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ ಅವರೇ ಕಾರಣ’ ಎಂದು ಪ್ರತಿಭಟನಾಕಾರರು ದೂರಿದರು.

ಐಐಎಸ್ಸಿ, ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯನ್ ಯೂನಿವರ್ಸಿಟಿ ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್‌ನಲ್ಲಿ ಸೋಮವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಆಡಳಿತ ಕಚೇರಿ ಎದುರು ಸೇರಿದ್ದ ವಿದ್ಯಾರ್ಥಿಗಳು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿದರು.

‘ಪೌರತ್ವ ತಿದ್ದುಪಡಿ ಕಾಯ್ದೆಯು ಅಮಾನವೀಯ’, ‘ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಜೊತೆ ನಾವಿದ್ದೇವೆ’ ಹಾಗೂ ‘ಹಕ್ಕು ರಕ್ಷಣೆಗಾಗಿ ನಮ್ಮ ಹೋರಾಟ’ ಎಂಬ ಘೋಷಣಾ ಫಲಕಗಳನ್ನು ಪ್ರತಿಭಟನಕಾರರು ಗೋಡೆಗೆ ಅಂಟಿಸಿದರು.

ಒಟ್ಟಿಗೆ ಪ್ರತಿಭಟನೆಗೆ ಆಕ್ಷೇಪ

ಮೂರ್ನಾಲ್ಕು ದಿನಗಳಿಂದ ಪುರಭವನ ಎದುರು ಸರಣಿಯಾಗಿ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಸ್ಥಳದಲ್ಲೇ ಪೊಲೀಸರು ಅಶ್ರುವಾಯು ವಾಹನಗಳನ್ನು ನಿಲ್ಲಿಸಿದ್ದಾರೆ. ಹೆಚ್ಚುವರಿ ಪೊಲೀಸರನ್ನೂ ಭದ್ರತೆಗೆ ನಿಯೋಜಿಸಲಾಗಿದೆ.

ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದ ಎರಡು ಸಂಘಟನೆಗಳು ಪುರಭವನ ಎದುರು ಏಕಕಾಲದಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು.

ನಿರ್ದಿಷ್ಟಪಡಿಸಿದ ಸಮಯದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ಮಾಡಿ ಸ್ಥಳದಿಂದ ಹೊರಟು ಹೋಗುವಂತೆ ಪೊಲೀಸರು ಎಚ್ಚರಿಸಿದರು. ಬಳಿಕ ಕೆಲ ಪ್ರತಿಭಟನಕಾರರು ಸ್ಥಳದಿಂದ ಹೊರಟು ಹೋದರು.

‘ದೇಶದ ಭವಿಷ್ಯದಲ್ಲಿ ಕರಾಳ ದಿನ’

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಮಾಜಿ ಐಎಎಸ್‌ ಅಧಿಕಾರಿ ಸಸಿಕಾಂತ್ ಸೆಂಥಿಲ್,‘ದೇಶದ ಭವಿಷ್ಯದಲ್ಲಿ ಕರಾಳ ದಿನಗಳು ಬರಲಿವೆ. ಸಮಾನ ದೇಶಕ್ಕಾಗಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆಯನ್ನು ನಾವೆಲ್ಲರೂ ಖಂಡಿಸಬೇಕು’ ಎಂದು ಹೇಳಿದರು.

ಪ್ರಧಾನಿ, ಸಚಿವರ ಭಾವಚಿತ್ರಕ್ಕೆ ಮಸಿ

ಬೊಮ್ಮನಹಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಮವಾರ ಪ್ರತಿಭಟನೆ ನಡೆಸಿದ್ದ ‘ಅಂಜುಮನ್ ಅಲ್ ಅನ್ಸರ್’ ಸಂಘಟನೆ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್ ಶಾ ಅವರ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ಮಂಗಮ್ಮನಪಾಳ್ಯದಿಂದ ಬೊಮ್ಮನಹಳ್ಳಿ ವೃತ್ತದವರೆಗೆ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

‘ಅಪ್ಪಟ ಭಾರತೀಯರಾದ ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನಿಯರಂತೆ ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಈ ರೀತಿಯ ಗೊಂದಲಗಳನ್ನು ಸೃಷ್ಟಿಸಿ ದೇಶದಲ್ಲಿ ಅಭದ್ರತೆ, ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದೆ. ಜನರ ನೈಜ ಸಮಸ್ಯೆಗಳನ್ನು ಮರೆ ಮಾಚುವ ಹುನ್ನಾರ ಅಡಗಿದೆ’ ಎಂದು ಪ್ರತಿಭಟನಕಾರರು ದೂರಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.