ADVERTISEMENT

ಧರ್ಮಾಧಾರಿತ ಪೌರತ್ವ ನೀಡುವ ಕಾಯ್ದೆಯನ್ನು ‌ಹಿಂ‌ಪಡೆಯಲಿ: ನಿರ್ದೇಶಕ ಬಿ. ಸುರೇಶ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 7:58 IST
Last Updated 7 ಫೆಬ್ರುವರಿ 2020, 7:58 IST
ಚಿತ್ರ ನಿರ್ದೇಶಕ ಬಿ. ಸುರೇಶ್
ಚಿತ್ರ ನಿರ್ದೇಶಕ ಬಿ. ಸುರೇಶ್   

ಕಲಬುರ್ಗಿ: ಇಲ್ಲಿನ ಗುಲಬರ್ಗಾ ‌ವಿಶ್ವವಿದ್ಯಾಲಯದ ಆವರಣದಲ್ಲಿ ‌ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ಚಲನಚಿತ್ರ: ಕನ್ನಡ ಸಾಹಿತ್ಯ' ಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ಬಿ.ಸುರೇಶ್, ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನಿಲ್ಲಿಸಲು ನಡೆದ ಘಟನೆಯನ್ನು ಖಂಡಿಸಿದರು‌.

'ಕಿರುತೆರೆ: ಸಾಮಾಜಿಕ ಜವಾಬ್ದಾರಿಗಳು' ಕುರಿತು ಮಾತನಾಡಲು ಆರಂಭಿಸುವ‌ ಮುನ್ನ ವಿಷಯ ಪ್ರಸ್ತಾಪಿಸಿದ ಅವರು, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ‌ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಎಲ್ಲ ರೀತಿಯ ಸಹಕಾರ ನೀಡಬೇಕಿತ್ತು. ಅಗತ್ಯವಿರುವ ‌ಅನುದಾನ ಬಿಡುಗಡೆ ಮಾಡಬೇಕಿತ್ತು ಎಂದರಲ್ಲದೆ ಧರ್ಮಾಧಾರಿತವಾಗಿ ಪೌರತ್ವ ನೀಡುವ ಕಾಯ್ದೆಯನ್ನು ‌ಕೇಂದ್ರ ಸರ್ಕಾರ ‌ಜಾರಿಗೆ‌ ತಂದಿದೆ. ಕೂಡಲೇ ಇದನ್ನು ಹಿಂದಕ್ಕೆ ‌ಪಡೆಯಬೇಕು‌‌ ಎಂದು ಒತ್ತಾಯಿಸಿದರು.

ಸಮ್ಮೇಳನದ ವೇದಿಕೆ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಹಾಕುತ್ತಾರೆ ಎಂಬ ಕಾರಣಕ್ಕಾಗಿ ಪೊಲೀಸರು ಸಮ್ಮೇಳನ ಮೊಟಕುಗೊಳಿಸಲು ಸೂಚಿಸಿದರು. ಬಾಂಬ್ ಹಾಕಲು‌ ಬೆದರಿಕೆ ‌ಹಾಕಿದವರೇ ಭಯೋತ್ಪಾದಕರು. ಹೀಗಾಗಿ ಅವರನ್ನು ತಕ್ಷಣ ಬಂಧಿಸಬೇಕು ಎಂದು ಹೇಳಿದರು.

ADVERTISEMENT

ಸುರೇಶ್ ಅವರ ಟೀಕೆಗೆ ಪ್ರತಿಕ್ರಿಯೆ ‌ನೀಡಿದ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್, ಸರ್ಕಾರದ ಅನುದಾನವೆಂದರೆ ಜನರದ್ದೇ ಅನುದಾನ. ಅದನ್ನು ಬಳಕೆ ಮಾಡಲು ‌ಎಲ್ಲ ರೀತಿಯ ಹಕ್ಕಿದೆ. ಆದರೆ, ಚಿಕ್ಕಮಗಳೂರು ‌ಜಿಲ್ಲಾ ಸಾಹಿತ್ಯ ‌ಸಮ್ಮೇಳನ ಮಾಡುವಾಗ ಪರಿಸ್ಥಿತಿ ಸರಿ ಇರಲಿಲ್ಲ. ಹೀಗಾಗಿ, ಒಂದೆರಡು ತಿಂಗಳು ಸಮ್ಮೇಳನ ‌ಮುಂದಕ್ಕೆ ಹಾಕಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷರಿಗೆ ಸೂಚನೆ ನೀಡಿದ್ದೆ. ಆದರೆ ಆ ಸೂಚನೆ ಧಿಕ್ಕರಿಸಿ‌ ಸಮ್ಮೇಳನ ‌ನಡೆಸಿದರು. ಆದಾಗ್ಯೂ ಸಚಿವರಿಗೆ ಹಣ ಬಿಡುಗಡೆಗೆ ಸೂಚಿಸಿದ್ದೆ.‌ ಆದರೆ ಹಟಕ್ಕೆ ಬಿದ್ದು ಸಮ್ಮೇಳನ ‌ನಡೆಸಲು ಮುಂದಾದಾಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಒಪ್ಪಲಿಲ್ಲ ‌ಎಂದು ಸಮಜಾಯಿಷಿ ನೀಡಿದರು.

ಕೇಂದ್ರ ‌ಕಸಾಪ ಜಿಲ್ಲಾ ಸಮಿತಿಯ ನಿರ್ಣಯಗಳಿಗೆ ಯಾವತ್ತೂ ಅಡ್ಡಿ ಬರುವುದಿಲ್ಲ. ಸಮ್ಮೇಳನ ಗೋಷ್ಠಿಗಳಲ್ಲೂ ಎಲ್ಲ ವಿಚಾರಧಾರೆಯವರಿಗೆ ಅವಕಾಶ ‌ನೀಡಿದ್ದೇನೆ ಎಂದರು.

ಸಮ್ಮೇಳನದ ಗೋಷ್ಠಿಗಾಗಿ ನೀಡಲಾದ ಗೌರವಧನವನ್ನು ಬಿ.ಸುರೇಶ್ ಹಿಂದಿರುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.