ಬೆಂಗಳೂರು: ಸುಮಾರು ₹25,000 ಕೋಟಿ ಅಂದಾಜು ವೆಚ್ಚದಲ್ಲಿ ಬೆಂಗಳೂರು ಹೊರವರ್ತುಲ ರಸ್ತೆ ಯೋಜನೆ ಮತ್ತು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಈ ಯೋಜನೆಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಈ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅನುಷ್ಠಾನಕ್ಕೆ ತರಲಿದೆ.
‘ಆರ್ಥಿಕ ಇಲಾಖೆಯ ಅಭಿಪ್ರಾಯದ ಪ್ರಕಾರ ಆರ್‌ಇಸಿ, ಹುಡ್ಕೊ, ಪಿಎಫ್‌ಸಿ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಒಪ್ಪಿಗೆ ನೀಡಲಾಯಿತು. ಶೇ 75 ರಷ್ಟು ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿ ಪಡೆಯುವ ಸಾಲದ ಮೊತ್ತಕ್ಕೆ ರಾಜ್ಯ ಸರ್ಕಾರದ ವತಿಯಿಂದ ಭದ್ರತೆ ನೀಡಲು ಮತ್ತು ಬಡ್ಡಿ ಮರುಪಾವತಿಯನ್ನು ಸರ್ಕಾರದ ಅನುದಾನದ ಮೂಲಕ ನೀಡಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲು ಅನುಮತಿ ನೀಡಲಾಗಿದೆ’ ಎಂದರು.
ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮೊತ್ತಕ್ಕೆ ರಾಜ್ಯ ಸರ್ಕಾರದ ವತಿಯಿಂದ ಭದ್ರತೆ ನೀಡಲು ಮತ್ತು ಆರ್ಥಿಕ ಇಲಾಖೆಯ ಅಭಿಪ್ರಾಯದಂತೆ ಬಡ್ಡಿ ಮೊತ್ತವನ್ನು ಬಿಡಿಎ ಮತ್ತು ರಾಜ್ಯ ಸರ್ಕಾರ ಭರಿಸಬೇಕು ಎಂಬ ಅಂಶಕ್ಕೂ ಒಪ್ಪಿಗೆ ನೀಡಲಾಯಿತು ಎಂದು ಹೇಳಿದರು.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಲಿಮಿಟೆಡ್ ಅಧ್ಯಕ್ಷರ ಸ್ಥಾನಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವರ ಬದಲಾಗಿ ಬೇರೊಬ್ಬರನ್ನು ನೇಮಿಸಲೂ ಸಂಪುಟ ಸಭೆ ಅನುಮತಿ ನೀಡಿದೆ ಎಂದರು.
ಇತರ ನಿರ್ಣಯಗಳು
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಾಕಿ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಒಂದು ಬಾರಿಗೆ ಪಾವತಿಸುವ ಯೋಜನೆ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮತಿ ಹಾಗೂ ಯೋಜನೆ ಅವಧಿಯನ್ನು 2024ರ ನವೆಂಬರ್ 30ರವರೆಗೆ ವಿಸ್ತರಿಸಲು ಬೆಂಗಳೂರು ಮಹಾನಗರ ಪಾಲಿಕೆ (2ನೇ ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ.
* ಬೆಂಗಳೂರಿನ ನ್ಯೂರಾಲಜಿ ಸಂಸ್ಥೆಯ ಹೊರ ರೋಗಿಗಳ ವಿಭಾಗಕ್ಕೆ ₹16.15 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.
* ಬೆಂಗಳೂರು ನವೀಕರಿಸಬಹುದಾದ ಇಂಧನ ಪಾರ್ಕ್ ನಿಗಮ ನಿಯಮಿತ ಎಂಬ ನವೀಕರಿಸಬಹುದಾದ ಇಂಧನ ಪಾರ್ಕ್ ಅನ್ನು ನಗರಾಭಿವೃದ್ಧಿ ಇಲಾಖೆಯ ವಿವಿಧ ಅಂಗ ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಅನುಮೋದನೆ.
* ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 600 ಕೈದಿಗಳ ಸಾಮರ್ಥ್ಯವುಳ್ಳ ನೂತನ ಕೇಂದ್ರ ಕಾರಾಗೃಹ, ವಸತಿಯೇತರ ಕಟ್ಟಡಗಳು ಮತ್ತು ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
* ಸಾಮರ್ಥ್ಯ ಪ್ರಮಾಣಪತ್ರ ನವೀಕರಣಕ್ಕೆ ಬರುವ ವಾಹನಗಳಿಗೆ ಅರ್ಹತಾ ಪರೀಕ್ಷೆ ಕೈಗೊಳ್ಳಲು ರಾಜ್ಯದ 32 ಸ್ಥಳಗಳಲ್ಲಿ ಸ್ವಯಂ ಚಾಲಿತ ವಾಹನಗಳ ಪರೀಕ್ಷಾ ಕೇಂದ್ರವನ್ನು ₹341 ಕೋಟಿ ಅಂದಾಜು ವೆಚ್ಚದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.