ADVERTISEMENT

ಯುನೆಸ್ಕೊ ಪಟ್ಟಿಗೆ ದ್ರಾವಿಡ ಪರಂಪರೆ ಸೇರ್ಪಡೆಗೆ ಹಕ್ಕೊತ್ತಾಯ

ಸಮ್ಮೇಳನದಲ್ಲಿ 41 ಭಾಷೆಗಳ ‘ಧ್ವನಿ’

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 12:58 IST
Last Updated 7 ಸೆಪ್ಟೆಂಬರ್ 2018, 12:58 IST

ಬೆಂಗಳೂರು: ದ್ರಾವಿಡ ಭಾಷೆಗಳ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೊ ಪಟ್ಟಿಗೆ ಸೇರಿಸಬೇಕು ಎಂಬ ಹಕ್ಕೊತ್ತಾಯಕ್ಕೆ ದ್ರಾವಿಡ ಭಾಷಾ ಸಮ್ಮೇಳನ ವೇದಿಕೆಯಾಗಲಿದೆ.

ದ್ರಾವಿಡ ಭಾಷೆಗಳ ಮೇಲೆ ಹಿಂದಿ ಹೇರಿಕೆಯನ್ನು ವಿರೋಧಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ದ್ರಾವಿಡ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಈ ಸಮ್ಮೇಳನದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳ, ತುಳು, ಅರೆ ಭಾಷೆ, ಕೊಡವ, ಬ್ಯಾರಿ ಭಾಷಾ ತಜ್ಞರು ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ‍ಪರಿಷತ್‌, ರಾಜ್ಯದ ಎಲ್ಲ ಅಕಾಡೆಮಿಗಳ ಸಹಯೋಗವನ್ನು ಪ್ರಾಧಿಕಾರ ಕೋರಿದೆ.

‘ದೇಶದಲ್ಲಿ ಹಿಂದಿ ಹೇರಿಕೆ ವ್ಯಾಪಕವಾಗಿದೆ. ಪ್ರಾದೇಶಿಕ ಭಾಷೆಗಳಿಗೆ ಎರಡನೇ ದರ್ಜೆ ಸ್ಥಾನಮಾನ ನೀಡಲಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಿದೆ. ಇದಕ್ಕೆ ಪೂರಕವಾಗಿ ಸಮ್ಮೇಳನ ಆಯೋಜಿಸಲಾಗಿದೆ' ಎಂದು ಪ್ರಾಧಿಕಾರದ ಅಧ್ಯಕ್ಷ ‍ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ತಿಳಿಸಿದರು.

ADVERTISEMENT

‘ದ್ರಾವಿಡ ಭಾಷೆಗಳಿಗೆ 3 ಸಾವಿರ ವರ್ಷಗಳ ಇತಿಹಾಸ ಇದೆ. ಆದರೆ, ಯಾವ ಭಾಷೆಯೂ ಯುನೆಸ್ಕೊ ಮಾನ್ಯತೆ ಪಡೆದಿಲ್ಲ. ಮಾನ್ಯತೆ ಗಳಿಸಲು ಕೇಂದ್ರ ಸರ್ಕಾರದ ಮೂಲಕ ಪ್ರಸ್ತಾವ ಕಳುಹಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ. ಒಂದು ವೇಳೆ ಮಾನ್ಯತೆ ಸಿಕ್ಕರೆ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ನಮ್ಮ ಭಾಷೆಗಳ ಬೋಧನೆಗೆ ಅವಕಾಶ ಸಿಗಲಿದೆ’ ಎಂದು ಅವರು ಹೇಳಿದರು.

ಅಳಿವಿನಂಚಿನಲ್ಲಿರುವ ಭಾಷೆಗಳ ಪಟ್ಟಿಯನ್ನು ಯುನೆಸ್ಕೊ ಮಾಡುತ್ತದೆ. ರಾಜ್ಯದ ಕೊರಗ, ಬೆಳ್ಳಾರಿ ಹಾಗೂ ಕುರುಬ ಸೇರಿದಂತೆ ದೇಶದ 41 ಭಾರತೀಯ ಭಾಷೆಗಳು ತೀರಾ ಅಳಿವಿನಂಚಿನಲ್ಲಿವೆ ಎಂದು ಯುನೆಸ್ಕೊ ಪಟ್ಟಿ ಮಾಡಿದೆ. ಯುನೆಸ್ಕೊದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ‍ಪಟ್ಟಿಯಲ್ಲಿ ಭಾಷೆಗಳ ಸೇರ್ಪಡೆಗೊಳಿಸಲು ಅವಕಾಶ ಇದೆ. ಇಲ್ಲಿಯವರೆಗೆ ಭಾರತದ 13 ಅಮೂರ್ತ ಸಾಂಸ್ಕೃತಿಕ ಪರಂಪರೆಗಳು ಈ ಪಟ್ಟಿಗೆ ಸೇರ್ಪಡೆಯಾಗಿವೆ. ಈ ನಿಟ್ಟಿನಲ್ಲಿ ಯಾವ ರೀತಿ ಮುಂದಿನ ಹೆಜ್ಜೆ ಇಡಬೇಕು ಎಂಬ ಬಗ್ಗೆ ಸಮ್ಮೇಳನದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಂಕಲ್ಪಿಸಲಾಗಿದೆ.

41 ಭಾಷೆಗಳ ಧ್ವನಿ: ‘ದಕ್ಷಿಣದಲ್ಲಿ 41 ದ್ರಾವಿಡ ಭಾಷೆಗಳಿವೆ. ತೆಲುಗು ಭಾಷೆಯನ್ನು 8.1 ಕೋಟಿ, ತಮಿಳು ಭಾಷೆಯನ್ನು 7 ಕೋಟಿ, ಕನ್ನಡವನ್ನು 4.3 ಕೋಟಿ, ಮಲಯಾಳವನ್ನು 3.3 ಕೋಟಿ ಜನರು ಮಾತನಾಡುತ್ತಿದ್ದಾರೆ. ಇನ್ನೊಂದೆಡೆ, 930 ಮಂದಿ ಕೋಟ, ಸಾವಿರ ಮಂದಿ ಪಥಿಯಾ, 500 ಮಂದಿ ಹೊಲೆಯ ಭಾಷೆ ಬಲ್ಲವರು ಇದ್ದಾರೆ. ಕೆಲವು ಭಾಷೆಗಳು ಅಳಿವಿನ ಅಂಚಿಗೆ ತಲುಪಿವೆ. ಈ ಎಲ್ಲ ಭಾಷೆಗಳ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ಪರಿಚಯಕ್ಕೆ ವೇದಿಕೆ ಒದಗಿಸಲಾಗುತ್ತದೆ. ತಜ್ಞರು ಈ ಭಾಷೆಗಳ ವೈವಿಧ್ಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ’ ಎಂದು ಸಿದ್ಧರಾಮಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.