ನವದೆಹಲಿ: ‘ಕಳೆದ ಒಂಬತ್ತೂವರೆ ವರ್ಷಗಳಲ್ಲಿ 14 ಸಾವಿರ ಕಿ.ಮೀ ರೈಲ್ವೆ ವ್ಯಾಪ್ತಿ ವಿಸ್ತರಿಸಿದೆ. ಹಿಂದಿನ 14 ವರ್ಷಗಳಲ್ಲಿ ಕೇವಲ 1,400 ಕಿ.ಮೀನಷ್ಟು ವ್ಯಾಪ್ತಿಯ ಕಾರ್ಯ ನಡೆದಿದೆ’ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಇಲ್ಲಿನ ಪ್ರಗತಿ ಮೈದಾನದ ಭಾರತ್ ಮಂಟಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ 68ನೇ ರೈಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ಸಾಧಕರಿಗೆ 'ಅತಿ ವಿಶಿಷ್ಟ ಸೇವಾ ಪುರಸ್ಕಾರ' ಪ್ರದಾನ ಮಾಡಿ ಅವರು ಮಾತನಾಡಿದರು.
‘2015ರಲ್ಲಿ ರೈಲ್ವೆ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಬಜೆಟ್ ಜೊತೆ ವಿಲೀನಗೊಳಿಸಿದ್ದರಲ್ಲಿ ದೂರಾಲೋಚನೆ ಇತ್ತು. ಎಲ್ಲರೂ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇದರಿಂದ ಇಲಾಖೆ ಅತ್ಯಂತ ದೊಡ್ಡ ಹೂಡಿಕೆಯ ಸಮಸ್ಯೆ ಸಂಪೂರ್ಣ ಬಗೆಹರಿದಿದೆ. 2014ರಲ್ಲಿ ₹35 ಸಾವಿರ ಕೋಟಿ ಒಟ್ಟು ಬೆಂಬಲ ಬಜೆಟ್ ಸಿಗುತ್ತಿತ್ತು. ಈಗ ಅದು
₹2.40 ಲಕ್ಷ ಕೋಟಿ ಆಗಿದೆ’ ಎಂದರು.
ರೈಲ್ವೆ ವಿಭಾಗದ ಕುರಿತು ಎಲ್ಲರೂ ಇಟ್ಟುಕೊಂಡಿದ್ದ ಭರವಸೆ ಈಡೇರಿದೆ. ಪ್ರಧಾನಿಯವರು ಮಾತಿನಂತೆ ರೈಲ್ವೆಗೆ ಸುವರ್ಣ ಯುಗ ಆರಂಭವಾಗಿದೆ ಎಂದು ಹೇಳಿದರು.
100 ಸಾಧಕರಿಗೆ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ರಾಜ್ಯಗಳ 100 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೈಲ್ವೆ ಮಂಡಳಿ ಅಧ್ಯಕ್ಷೆ ಜಯವರ್ಮಾ ಸಿನ್ಹಾ, ಸಿಇಒ ಹಾಗೂ ಸದಸ್ಯರು, ಎಲ್ಲ ವಲಯ ರೈಲ್ವೆಗಳ ಪ್ರಧಾನ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.
ಭಾರತೀಯ ರೈಲ್ವೆ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಏಕ ಭಾರತ, ಶ್ರೇಷ್ಠ ಭಾರತ ವಿಷಯದ ಅಡಿ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು.
ನೈರುತ್ಯ ರೈಲ್ವೆಗೆ 'ಸ್ವಚ್ಛತೆ'ಯ ಗರಿ: ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದ 'ಸ್ವಚ್ಛತಾ ಪಾಕ್ಷಿಕ ಅಭಿಯಾನ'ದ
ಸ್ವಚ್ಛತಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನೈರುತ್ಯ ರೈಲ್ವೆ ಪಡೆಯಿತು. ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಪ್ರಶಸ್ತಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.