ನವದೆಹಲಿ: ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಅಬ್ಬನ ಗ್ರಾಮದಲ್ಲಿ 11 ಎಕರೆ ಅರಣ್ಯ ಭೂಮಿ ಒತ್ತುವರಿ ಒತ್ತುವರಿ ತೆರವುಗೊಳಿಸಲಾಗಿದೆ. ಸರ್ವೆ ಸಂಖ್ಯೆ 128ರ ಜಾಗವನ್ನು ಅರಣ್ಯ/ಗೋಮಾಳವಾಗಿಯೇ ಉಳಿಸಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ಸರ್ಕಾರವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಪ್ರಮಾಣಪತ್ರ ಸಲ್ಲಿಸಿದೆ.
ಭವಿಷ್ಯದಲ್ಲಿ ಈ ಜಾಗವನ್ನು ಯಾರಿಗೂ ಮಂಜೂರು ಮಾಡುವುದಿಲ್ಲ. ಈಗಿನಂತೆಯೇ ಹಸಿರು ಹೊದಿಕೆ ಸದಾ ಕಾಲ ಇರಲಿದೆ. ಒತ್ತುವರಿಗೂ ಅವಕಾಶ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥ) ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರು ಎನ್‌ಜಿಟಿಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಅಬ್ಬನ ಗ್ರಾಮದಲ್ಲಿ ಅರಣ್ಯ ಒತ್ತುವರಿ ನಡೆದಿದೆ ಎಂದು ಆರೋಪಿಸಿ ಗ್ರಾಮದ ನಿವಾಸಿ ಮೋಹಕ್ ದೀಪಕ್ ಮೆಹರಾ ಎಂಬುವರು ಅರಣ್ಯ ಸಚಿವ ಉಮೇಶ್ ಕತ್ತಿ ಅವರಿಗೆ 2021ರ ನವೆಂಬರ್ 24ರಂದು ದೂರು ಸಲ್ಲಿಸಿದ್ದರು. ಈ ದೂರನ್ನು ನಿಯಮಾನುಸಾರ ಸೂಕ್ತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಆಗಿರಲಿಲ್ಲ. ಒತ್ತುವರಿ ತೆರವಿಗೆ ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ದೀಪಕ್ ಅವರು ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು. ಅಲ್ಲೂ ಕ್ರಮ ಆಗಿರಲಿಲ್ಲ. ಆ ಬಳಿಕ ದೀಪಕ್ ಅವರು ಎನ್‌ಜಿಟಿ ಮೆಟ್ಟಿಲೇರಿದ್ದರು.
‘ಗ್ರಾಮದ ಸರ್ವೆ ಸಂಖ್ಯೆ 128ರಲ್ಲಿ ಒಟ್ಟು 70 ಎಕರೆ 32 ಗುಂಟೆ ಜಮೀನು ಇದೆ. ಅದರಲ್ಲಿ ಅರಣ್ಯ ಇಲಾಖೆಗೆಂದು 67 ಎಕರೆ 12 ಗುಂಟೆಯನ್ನು ಮೀಸಲಿಡಲಾಗಿದೆ. ಕಾಡಾನೆ ಹಾವಳಿ ತಡೆಯಲು ಕಾರಿಡಾರ್ ನಿರ್ಮಾಣಕ್ಕಾಗಿ ಈ ಜಾಗ ಮೀಸಲಿಡಲಾಗಿದೆ. ಆದರೆ, 11 ಎಕರೆ ಜಾಗವನ್ನು ಧರ್ಮಪ್ಪ, ಸುಬ್ಬೇಗೌಡ, ರಾಜು, ಕಾಂತರಾಜು, ಚಂದ್ರೇಗೌಡ, ಧರ್ಮಶೇಖರ್, ವಿಶ್ವನಾಥ್ ಎಂಬುವರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ. ಕಾಫಿ, ಸಿಲ್ವರ್ ಇತರೆ ಜಾತಿಯ ಮರಗಳನ್ನು ಬೆಳೆದಿದ್ದಾರೆ. ಇದರಿಂದ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಊರಿನ ಜನರಿಗೆ ತೊಂದರೆಯಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದರು.
‘ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ತೆರವುಗೊಳಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದರೆ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಒತ್ತುವರಿದಾರರ ಜತೆಗೆ ಕೈಜೋಡಿಸಿರುವ ಅನುಮಾನ ಇದೆ. ಈ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ದೀಪಕ್ ದೂರಿನಲ್ಲಿ ಒತ್ತಾಯಿಸಿದ್ದರು. ಅರಣ್ಯ ಒತ್ತುವರಿ ಕುರಿತು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಎನ್‌ಜಿಟಿ ತಾಕೀತು ಮಾಡಿತ್ತು. ಈ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.