ವಿಧಾನಸಭೆ(ಬೆಳಗಾವಿ): ಮುಂದಿನ ಮೂರರಿಂದ ನಾಲ್ಕು ದಿನಗಳು ರಾಜ್ಯದ ಹಲವು ಭಾಗಗಳಲ್ಲಿ ಮಳೆ ಸುರಿಸಬಲ್ಲ ಮೋಡಗಳು ಬರುವುದರಿಂದ, ಮೋಡ ಬಿತ್ತನೆಗೆ ಸರ್ಕಾರ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ನ ಪ್ರಕಾಶ್ ಕೋಳಿವಾಡ ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಮೋಡ ಬಿತ್ತನೆ ಮಾಡಲು ಸೂಕ್ತವಾದ ಮೋಡಗಳು ಬರಲಿದ್ದು, ಮೋಡ ಬಿತ್ತನೆ ಮಾಡಬಹುದು ಎಂದು ಕೇಂದ್ರ ಹವಾಮಾನ ಇಲಾಖೆಯೂ ಹೇಳಿದೆ. ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಅನುಕೂಲಕ್ಕಾಗಿ ಮೋಡ ಬಿತ್ತನೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
‘ಶನಿವಾರ ಮತ್ತು ಭಾನುವಾರ ಸದನಕ್ಕೆ ರಜೆ ಇರುವುದರಿಂದ ಇವತ್ತೇ ಕ್ರಮ ತೆಗೆದುಕೊಳ್ಳಬೇಕು. ಪೈಲಟ್ ಶುಲ್ಕ, ನಿರ್ವಹಣಾ ವೆಚ್ಚವನ್ನು ಸರ್ಕಾರವೇ ನೀಡಿದರೆ ನಾನೇ ಮೋಡ ಬಿತ್ತನೆ ಮಾಡಿಸುತ್ತೇನೆ. ಒಂದು ವೇಳೆ ಅನುದಾನ ಬಿಡುಗಡೆ ಮಾಡುವುದು ಕಷ್ಟವಾದರೆ, ಮುಖ್ಯ ಕಾರ್ಯದರ್ಶಿಯವರು ಅನುಮತಿ ನೀಡಿದರೂ ಸ್ವಂತ ಖರ್ಚಿನಿಂದ ಮೋಡ ಬಿತ್ತನೆ ಮಾಡಿಸುತ್ತೇನೆ. ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಸ್ವಂತ ಖರ್ಚಿನಿಂದ ಮೋಡ ಬಿತ್ತನೆ ಮಾಡಿಸಿದ್ದೇನೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ‘ಪ್ರಕಾಶ್ ಅವರು ಮೋಡ ಬಿತ್ತನೆ ವಿಚಾರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದಕ್ಕೆಲ್ಲ ಟೆಂಡರ್ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಆದರೆ, 3–4 ದಿನಗಳಲ್ಲಿ ಮೋಡ ಬಿತ್ತನೆ ಮಾಡಬೇಕು ಎಂಬುದಾಗಿ ಮನವಿ ಮಾಡಿದ್ದಾರೆ. ಈ ಬಗ್ಗೆ ಹಣಕಾಸು ಇಲಾಖೆ ಜತೆ ಚರ್ಚೆ ಮಾಡುತ್ತೇನೆ. ಈ ವಿಚಾರದಲ್ಲಿ ನಾನು ಸಕಾರಾತ್ಮಕವಾಗಿದ್ದೇನೆ’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.