ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ವಾಪಸ್ ತೆರಳುವ ಮೊದಲು ಮಾಜಿ ಸಂಸದ ಸಂಗಣ್ಣ ಕರಡಿ ಅವರ ಇಲ್ಲಿನ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನದ ಭೋಜನ ಸವಿದರು.
ಇತ್ತೀಚೆಗಷ್ಟೇ ಪಂಚಮಿ ಹಬ್ಬ ಮುಗಿದಿದ್ದು ಹಬ್ಬಕ್ಕಾಗಿ ತಯಾರಿಸಲಾಗಿದ್ದು ಅಂಟಿನ ಉಂಡೆ, ರವೆ ಉಂಡೆ ಸೇರಿದಂತೆ ಅನೇಕ ಸಿಹಿ ತಿನಿಸುಗಳನ್ನು ಮುಖ್ಯಮಂತ್ರಿಗೆ ಉಣಬಡಿಸಲಾಯಿತು. ಜೊತೆಗೆ ಚಪಾತಿ, ಮುದ್ದೆ, ಹೀರೇಕಾಯಿ ಪಲ್ಲೆ, ಮೆಣಸಿನಕಾಯಿ ಚಟ್ಲಿ, ಗೋಧಿ ಹುಗ್ಗಿ, ಹೆಸರುಕಾಳು ಪಲ್ಲೆ, ಜೋಳದ ರೊಟ್ಟಿ, ಬೇಳೆ ಸಾಂಬಾರು, ಟೊಮೆಟೊ ಗೊಜ್ಜು ಸೇರಿದಂತೆ ತರಹೇವಾರಿ ಆಹಾರ ತಯಾರಿಸಲಾಗಿತ್ತು.
ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿದ್ದ ಸಂಗಣ್ಣ ಕರಡಿ ಅವರು ಹಿಂದಿನ ಲೋಕಸಭಾ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಇದಾದ ಬಳಿಕ ಸಿದ್ದರಾಮಯ್ಯ ಮೊದಲ ಬಾರಿಗೆ ಸಂಗಣ್ಣ ಕರಡಿ ಅವರ ಮನೆಗೆ ಮೊದಲ ಬಾರಿಗೆ ಭೇಟಿ ನೀಡಿದರು. ಸಿ.ಎಂ. ವಾಪಸ್ ಹೊರಡುವಾಗ ಸಂಗಣ್ಣ ಕುಟುಂಬದವರ ಜೊತೆ ಫೋಟೊ ತೆಗೆಯಿಸಿಕೊಂಡರು. ಈ ವೇಳೆ ಕುಟುಂಬದವರು ಕಿನ್ನಾಳ ಕಲೆಯಲ್ಲಿ ಸಿದ್ದರಾಮಯ್ಯ ಭಾವಚಿತ್ರವಿರುವ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ವಿವಿಧ ಕ್ಷೇತ್ರಗಳ ಶಾಸಕರು ಹಾಗೂ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.