ADVERTISEMENT

ಹಿಂದುಳಿದವರ ಅಭಿವೃದ್ಧಿಗೆ ಬೊಮ್ಮಾಯಿ 3 ‘ಇ’ ಮಂತ್ರ

ಶಿಕ್ಷಣ, ಉದ್ಯೋಗ,ಉದ್ಯಮದಲ್ಲಿ ಅವಕಾಶಕ್ಕೆ ಹೊಸ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 9:14 IST
Last Updated 20 ಆಗಸ್ಟ್ 2021, 9:14 IST
ಬಸವಪ್ರಭು ಲಖಮಗೌಡ ಪಾಟೀಲ, ಕೆ.ಭಾಸ್ಕರ್ ದಾಸ್ ಎಕ್ಕಾರು ಮತ್ತು ಎಸ್‌.ಜಿ.ಸುಶೀಲಮ್ಮ ಅವರಿಗೆ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಸವಪ್ರಭು ಲಖಮಗೌಡ ಪಾಟೀಲ, ಕೆ.ಭಾಸ್ಕರ್ ದಾಸ್ ಎಕ್ಕಾರು ಮತ್ತು ಎಸ್‌.ಜಿ.ಸುಶೀಲಮ್ಮ ಅವರಿಗೆ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ಬೆಂಗಳೂರು:ಸರ್ಕಾರಿ ವಲಯದಲ್ಲಿ ಅವಕಾಶ ಕಡಿಮೆ ಆಗುತ್ತಿರುವ ಕಾರಣ ಪರಿಶಿಷ್ಟಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದ ಬಿಪಿಎಲ್‌ ವರ್ಗದವರಿಗೆ ಶಿಕ್ಷಣ, ಉದ್ಯೋಗ ಮತ್ತು ಉದ್ಯಮದಲ್ಲಿ ಹೆಚ್ಚಿನ ಅವಕಾಶ ಸಿಗುವುದಕ್ಕೆ ಪೂರಕವಾಗಿ ಹೊಸ ಯೋಜನೆಗಳನ್ನು ರೂಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮೂರು ’ಇ’ಗಳು ಅಂದರೆ ಎಜುಕೇಷನ್‌, ಎಂಪ್ಲಾಯ್‌ಮೆಂಟ್‌ ಮತ್ತು ಎಂಟರ್‌ಪ್ರೀನರ್‌ಶಿಪ್‌ಗೆ ಸರ್ಕಾರ ಒತ್ತು ಕೊಡಲಿದೆ ಎಂದರು.

ಸರ್ಕಾರಿ ವಲಯದಲ್ಲಿ ಅವಕಾಶಗಳು ಕಡಿಮೆ ಆಗುತ್ತಿವೆ. ಆದ್ದರಿಂದ ಬಡ ಮತ್ತು ಬಿಪಿಎಲ್‌ ವರ್ಗದ ಜನರಿಗಾಗಿ ಶಿಕ್ಷಣ, ಉದ್ಯಮ ಮತ್ತು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜತೆಗೆ ಆರ್ಥಿಕ ಸಹಾಯ ಮಾಡುವ ಯೋಜನೆ ರೂಪಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ADVERTISEMENT

ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ:ಪರಿಶಿಷ್ಟ ಜಾತಿ, ವರ್ಗಗಳು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗಾಗಿ ನಿರ್ಮಿಸಿರುವ ವಸತಿ ಶಾಲೆಗಳನ್ನು ಗುಣಾತ್ಮಕವಾಗಿ ಉನ್ನತೀಕರಿಸಲಾಗುವುದು. ಆಧುನಿಕ ಕಾಲದ ಉದ್ಯಮ ಮತ್ತು ಉದ್ಯೋಗಗಳಿಗೆ ತಕ್ಕಂತೆ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು. ಅಂತರರಾಷ್ಟ್ರೀಯ ಗುಣಮಟ್ಟದ ಉನ್ನತ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಸಿಇಟಿ ಮತ್ತು ನೀಟ್‌ನಂತಹ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅನುಕೂಲವಾಗುವಂತೆ ವಿದ್ಯಾರ್ಥಿಗಳನ್ನು ತಯಾರಿಗೊಳಿಸಲಾಗುವುದು. ಇದಕ್ಕಾಗುಣಮಟ್ಟದ ಶಿಕ್ಷಣ ನೀತಿ ರೂಪಿಸಲಾಗುವುದು ಎಂದರು.

ಅಲೆಮಾರಿ ಜನಾಂಗದ ಮಕ್ಕಳಿಗೆ ಶಿಕ್ಷಣ ನೀಡಲು ಈ ವರ್ಷ ಮೂರು ವಸತಿ ಶಾಲೆಗಳನ್ನು ಆರಂಭಿಸಲಾಗುವುದು. ಈಗಾಗಲೇ ನಾಲ್ಕು ವಸತಿ ಶಾಲೆಗಳಿವೆ. ಈ ಶಾಲೆಗಳಲ್ಲಿ ಎರಡು ಶಾಲೆಗಳಿಗೆ ಸ್ವಂತ ಕಟ್ಟಡಗಳಿವೆ. ಇನ್ನೆರಡು ಶಾಲೆಗಳಿಗೆ ಕಟ್ಟಡ ಹೊಂದಲು ತಲಾ ₹6 ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಬಸವಪ್ರಭು ಲಖಮಗೌಡ ಪಾಟೀಲ, ಕೆ.ಭಾಸ್ಕರ್ ದಾಸ್ ಎಕ್ಕಾರು ಮತ್ತು ಎಸ್‌.ಜಿ.ಸುಶೀಲಮ್ಮ ಅವರಿಗೆ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.