ADVERTISEMENT

ಬಿಜೆಪಿ ಬಗ್ಗೆ ಜನತೆಗಿರುವ ಆಕ್ರೋಶಕ್ಕೆ ಖಾಲಿ ಕುರ್ಚಿಗಳೇ ಸಾಕ್ಷಿ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2023, 12:07 IST
Last Updated 28 ಜನವರಿ 2023, 12:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಖಾಲಿ ಕುರ್ಚಿಗಳ ನಡುವೆಯೇ ಮೂರು ದಿನಗಳ ‘ಹಂಪಿ ಉತ್ಸವ’ದ ಉದ್ಘಾಟನೆಯನ್ನು ಮಾಡಿದ್ದಾರೆ.

ಖಾಲಿ ಕುರ್ಚಿಗಳ ವಿಚಾರವಾಗಿ ‘ಪ್ರಜಾವಾಣಿ ವರದಿ’ಯನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, ರಾಜ್ಯ ಸರ್ಕಾರ ಹಾಗೂ ಮುಖ್ಯ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದೆ.

‘ಬಿಜೆಪಿ ಪಕ್ಷದ ಕಾರ್ಯಕ್ರಮಗಳಿಗೂ ಖಾಲಿ ಕುರ್ಚಿಗಳು. ಬಿಜೆಪಿ ಸರ್ಕಾರದ ಕಾರ್ಯಕ್ರಮಗಳಿಗೂ ಖಾಲಿ ಕುರ್ಚಿಗಳು. ಬಿಜೆಪಿ ಸರ್ಕಾರದ ಬಗ್ಗೆ ಜನತೆಗಿರುವ ಅಸಹನೆ, ಆಕ್ರೋಶಕ್ಕೆ ಖಾಲಿ ಕುರ್ಚಿಗಳು ಸಾಕ್ಷಿ ಹೇಳುತ್ತಿವೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ADVERTISEMENT

‘ಬಸವರಾಜ ಬೊಮ್ಮಾಯಿ ಅವರೇ, ಹಂಪಿ ಉತ್ಸವದಲ್ಲಿ ಖಾಲಿ ಕುರ್ಚಿಗಳನ್ನು ರಂಜಿಸಲು ₹4 ಕೋಟಿ ಖರ್ಚು ಮಾಡುವ ಅಗತ್ಯವಿತ್ತೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಅನಗತ್ಯ ವೆಚ್ಚಕ್ಕೆ ಕಡಿವಾಣ’ ಎಂದು ಸಿಎಂ ಕುರ್ಚಿ ಹತ್ತಿ ಕುಳಿತ ಬೊಮ್ಮಾಯಿ ಅವರೇ, 5 ನಿಮಿಷದ ವಿಡಿಯೊಗೆ ₹4.5 ಕೋಟಿ ಪಾವತಿಸಿದ್ದು ಅಗತ್ಯವೋ, ಅನಗತ್ಯವೋ? ಸಿಎಂ ಪ್ರಕಾರ ಅನಗತ್ಯ ಖರ್ಚು ಎಂದರೆ ಬಿಸಿಯೂಟ, ಇಂದಿರಾ ಕ್ಯಾಂಟೀನ್, ಅಂಗನವಾಡಿಗಳ ಅನುದಾನ, ವಿದ್ಯಾರ್ಥಿವೇತನ, ವಸತಿ ಯೋಜನೆಗಳ ಅನುದಾನ. ಶೇ 40ರಷ್ಟು ಕಮಿಷನ್ ಸಿಗುವಂತವು - ಅಗತ್ಯ ಖರ್ಚು!’ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

‘ಬೊಮ್ಮಾಯಿ ಅವರೇ, ಖಾಲಿ ಕುರ್ಚಿಗಳನ್ನ ರಂಜಿಸಲು ಹಂಪಿ ಉತ್ಸವಕ್ಕೆ ಸರ್ಕಾರ ₹4 ಕೋಟಿ ಖರ್ಚು ಮಾಡಿದ್ದು ನಾಚಿಕೆಗೇಡು ಅಲ್ಲವೇ. ಮಕ್ಕಳ ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮಗಳಿಗೆ ಹಣವಿಲ್ಲ. ಅಂಗನವಾಡಿಗಳಿಗೆ ಅನುದಾನವಿಲ್ಲ, ಪರಿಶಿಷ್ಠ ವಿದ್ಯಾರ್ಥಿಗಳ ಹಾಸ್ಟೆಲ್ ಸಮಸ್ಯೆ ಬಗೆಹರಿದಿಲ್ಲ. ಉತ್ಸವಕ್ಕೆ ಇರುವ ಹಣ ಜನಪರ ಯೋಜನೆಗಳಿಗೆ ಏಕಿಲ್ಲ?’ ಎಂದು ಕಾಂಗ್ರೆಸ್ ಟೀಕಿಸಿದೆ.

ವೇದಿಕೆ ಎದುರು 40 ಸಾವಿರ ಆಸನಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಎರಡು ಸಾವಿರ ಜನರೂ ಇರಲಿಲ್ಲ. ಅತಿ ಗಣ್ಯರು, ಗಣ್ಯರು ಹಾಗೂ ಸಾರ್ವಜನಿಕರಿಗೆ ಹಾಕಿದ್ದ ಕುರ್ಚಿಗಳೆಲ್ಲ ಖಾಲಿ ಇದ್ದವು. ‘ಜನವೇ ಇಲ್ವಲ್ಲ’ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಸಂಜೆ 6ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಬೇಕಿತ್ತು. ಆದರೆ, ಜನರಿಲ್ಲದ ಕಾರಣ ಒಂದು ಗಂಟೆ ವಿಳಂಬ ಮಾಡಲಾಯಿತು. ಆದರೂ ಜನ ಸುಳಿಯಲಿಲ್ಲ. ಖಾಲಿ ಕುರ್ಚಿಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವ ಉದ್ಘಾಟಿಸಿದ್ದರು. ಒಂದು ಗಂಟೆಯಲ್ಲಿ ವೇದಿಕೆ ಕಾರ್ಯಕ್ರಮ ಕೊನೆಗೊಂಡಿತ್ತು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು. ಆದರೂ ಜನ ಸುಳಿಯಲಿಲ್ಲ. ರಾತ್ರಿ 9ರ ನಂತರವೂ ಜನ ಬರಲಿಲ್ಲ. ಪ್ರಚಾರದ ಕೊರತೆಯೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.