ADVERTISEMENT

ಹಿಂದಿ ರಾಷ್ಟ್ರ ಭಾಷೆ ವಿವಾದ | ನಟ ಸುದೀಪ್‌ ಹೇಳಿದ್ದು ಸರಿ ಇದೆ: ಬೊಮ್ಮಾಯಿ ಬೆಂಬಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2022, 7:57 IST
Last Updated 28 ಏಪ್ರಿಲ್ 2022, 7:57 IST
ಬಸವರಾಜ ಬೊಮ್ಮಾಯಿ ಮತ್ತು ಕಿಚ್ಚ ಸುದೀಪ್‌
ಬಸವರಾಜ ಬೊಮ್ಮಾಯಿ ಮತ್ತು ಕಿಚ್ಚ ಸುದೀಪ್‌   

ಬೆಂಗಳೂರು: ‘ಹಿಂದಿ ರಾಷ್ಟ್ರ ಭಾಷೆ ಅಲ್ಲ’ ‌‌‌‌ಎಂಬ ನಟ ಕಿಚ್ಚ ಸುದೀಪ್‌ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸುದೀಪ್‌ ಅವರು ಹೇಳಿದ್ದು ಸರಿಯಾಗಿಯೇ ಇದೆ. ಭಾಷಾವಾರು ಪ್ರಾಂತ್ಯಗಳ ಆಧಾರಗಳಿಂದ ರಾಜ್ಯಗಳು ರಚನೆಯಾದ ಮೇಲೆ ಮಾತೃಭಾಷೆಗೆ ಮಹತ್ವ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪರಸ್ಪರ ಗೌರವಿಸಬೇಕು’ ಎಂದು ಹೇಳಿದ್ದಾರೆ.

ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಕಾರ್ಯಕ್ರಮವೊಂದರಲ್ಲಿ 'ಹಿಂದಿ ರಾಷ್ಟ್ರಭಾಷೆ ಅಲ್ಲ' ಎಂದಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಅಜಯ್ ದೇವಗನ್, 'ಹಿಂದಿ ರಾಷ್ಟ್ರ ಭಾಷೆ' ಎಂದು ಪ್ರತಿಪಾದಿಸಿದ್ದರು. 'ರಾಷ್ಟ್ರಭಾಷೆ' ವಿಚಾರದ ಬಗ್ಗೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಕಿಚ್ಚ ಸುದೀಪ್ ಮತ್ತು ಅಜಯ್‌ ದೇವಗನ್‌ ಅವರ ಮಾತು–ತಿರುಗೇಟಿನ ನಡುವೆ 'ಹಿಂದಿ ರಾಷ್ಟ್ರ ಭಾಷೆ'(?) ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಸುದೀಪ್‌ ಹೇಳಿದ್ದೇನು?
ಕೆಲ ದಿನಗಳ ಹಿಂದೆ ನಡೆದ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ, ನಟ ಉಪೇಂದ್ರ ಅವರ ನೂತನ ಪ್ಯಾನ್‌ ಇಂಡಿಯಾ ಚಿತ್ರ 'ಐ ಆ್ಯಮ್‌ ಆರ್‌' ಶೀರ್ಷಿಕೆ ಅನಾವರಣ ಸಂದರ್ಭದಲ್ಲಿ ಸುದೀಪ್‌ ಮಾತನಾಡಿ, ‘ಪ್ರಸ್ತುತ ಹಿಂದಿ ಎನ್ನುವುದು ರಾಷ್ಟ್ರೀಯ ಭಾಷೆಯಾಗಿಲ್ಲ. ಬಾಲಿವುಡ್‌ನವರು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದು, ಅಲ್ಲಿಂದ ತೆಲುಗು ಮತ್ತು ತಮಿಳು ಭಾಷೆಗೆ ಡಬ್‌ ಮಾಡಿ, ಒದ್ದಾಡುತ್ತಿದ್ದಾರೆ. ದಕ್ಷಿಣದ ಸಿನಿಮಾಗಳು ಡಬ್‌ ಆಗಿ ಅಲ್ಲಿ ಓಡುತ್ತಿವೆ. ನಾವು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿಲ್ಲ. ಅದು ಮುಂಬೈನಿಂದ ಬರುತ್ತಿದೆ. ನಾವು ಎಲ್ಲೆಡೆಯೂ ತಲುಪುವ ಸಾಮರ್ಥ್ಯವಿರುವ ಸಿನಿಮಾ ಮಾಡುತ್ತಿದ್ದೇವೆ. ಇವತ್ತು ಚಿತ್ರರಂಗವು ಮುನ್ನುಗುತ್ತಿರುವುದನ್ನು ನೋಡುತ್ತಿರುವಾಗ, ಭಾಷೆ ಎನ್ನುವುದು ಕೇವಲ ತಡೆಯಾಗಿತ್ತಷ್ಟೇ. ಇವತ್ತು ಇದನ್ನು ಒಡೆದು ಮುನ್ನುಗ್ಗಿದೆ’ ಎಂದಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲೂ ಇದನ್ನು ಮರು ಉಲ್ಲೇಖಿಸಿದ್ದರು.

ಆ ಹೇಳಿಕೆ ಸಂಬಂಧ ಬುಧವಾರ ಅಜಯ್‌ ದೇವಗನ್‌ ಟ್ವೀಟ್‌ ಮಾಡಿ, 'ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್‌ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ. ಜನ ಗಣ ಮನ' ಎಂದಿದ್ದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.