ಬೆಂಗಳೂರು: ‘ಸಚಿವ ಸಂಪುಟ ರಚನೆಗೆ ಒತ್ತಡಗಳು ಸಹಜ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರವಾಹ ವೀಕ್ಷಣೆಗೆ ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ಹೊರಡುವ ಮೊದಲು ಸುದ್ದಿಗಾರರ ಜೊತೆ ಗುರುವಾರ ಬೆಳಿಗ್ಗೆ ಮಾತನಾಡಿದ ಅವರು, ‘ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಅವಕಾಶ ಕೊಟ್ಟರೆ ಶುಕ್ರವಾರ ಬೆಳಿಗ್ಗೆ ಹೋಗುವ ಚಿಂತನೆ ಇದೆ. ಸಂಫುಟ ಸಂಪುಟ ರಚನೆ ವಿಚಾರ ಮೊದಲ ಭೇಟಿಯಲ್ಲಿ ಚರ್ಚೆ ಮಾಡುವುದಿಲ್ಲ. ಮುಂದಿನ ಭೇಟಿಯಲ್ಲಿ ಚರ್ಚೆ ಮಾಡುತ್ತೇನೆ’ ಎಂದರು.
‘ನಿನ್ನೆ ಪ್ರಧಾನಿ ಕರೆ ಮಾಡಿ ಮಾತನಾಡಿದ್ದಾರೆ. ಒಳ್ಳೆಯ ಆಡಳಿತ ಕೊಡಿ ಎಂದು ಶುಭ ಕೋರಿದ್ದಾರೆ. ಒಳ್ಳೆಯ ಆಡಳಿತ ನೀಡುವ ವಿಶ್ವಾಸವಿದೆ ಎಂದೂ ಹೇಳಿದ್ದಾರೆ. ದೆಹಲಿಗೆ ಹೋಗಿ ಪ್ರಧಾನಿ, ಗೃಹ ಸಚಿವ ರಾಜನಾಥ್ ಸಿಂಗ್, ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುವ ಕಾರ್ಯಕ್ರಮದ ಇದೆ’ ಎಂದರು.
‘ದೆಹಲಿಗೆ ಹೋದ ವೇಳೆ ಲಭ್ಯ ಸಮಯವನ್ನು ಬಳಕೆ ಮಾಡಿ ರಾಜ್ಯದ ಸಂಸದರು, ಕರ್ನಾಟಕದ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಬಾಕಿ ಇರುವ ರಾಜ್ಯದ ಯೋಜನೆಗಳ ಬಗ್ಗೆಯೂ ಚರ್ಚೆ ಮಾಡುತ್ತೇನೆ’ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಜಿಎಸ್‌ಟಿ ಪರಿಹಾರ ನಾನೇ ನೋಡುತ್ತಿದ್ದೇನೆ. ಈ ವರ್ಷ ₹ 18 ಸಾವಿರ ಕೋಟಿ ಪರಿಹಾರ ಕೊರತೆ ಇದೆ. ಕಳೆದ ಬಾರಿ ₹ 12 ಸಾವಿರ ಕೋಟಿ ಸಾಲ ಕೊಟ್ಟಿದ್ದರು. ಅದಕ್ಕೆ ಸಾಲವನ್ನು ಸೆಸ್ ಮೂಲಕ ಮೂಲಕ ಅವರೇ ತೀರಿಸಿ ಕೊಳ್ಳುವ ಯೋಜನೆ ಇದೆ. ಅದರಂತೆ ಕೊಡಲು ಒಪ್ಪಿಕೊಂಡಿದ್ದಾರೆ. ಬರುವ ದಿನಗಳಲ್ಲಿ ನಮ್ಮ ಪಾಲು ಪಡೆಯಲು ಪ್ರಯತ್ನಿಸುತ್ತೇನೆ’ ಎಂದರು.
‘ಉತ್ತರ ಕನ್ನಡ ಜಿಲ್ಲೆಯಲ್ಲಿ ಯಲ್ಲಾಫುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಿಂದ ಭಾರಿ ಹಾನಿಯಾಗಿದ್ದು, ಮೂರು ಮಂದಿ ಸಾವಿಗೀಡಾಗಿದ್ದಾರೆ. ಎಲ್ಲ ಪ್ರದೇಶಗಳನ್ನು ಸಮೀಕ್ಷೆ ಮಾಡಿ ಅಧಿಕಾರಿಗಳ ಚರ್ಚೆ ಮಾಡುತ್ತೇನೆ. ಪರಿಹಾರ, ಸಮರೋಪಾದಿಯಲ್ಲಿ ರಕ್ಷಣಾ ಕ್ರಮಗಳಿಗೆ ಸೂಚನೆ ಕೊಡುತ್ತೇನೆ. ಪರಿಹಾರ ಘೋಷಿಸುವ ಬಗ್ಗೆ ಪರಿಶೀಲಿಸಿದ ಬಗ್ಗೆ ತೀರ್ಮಾನಿಸುತ್ತೇನೆ. ಎಲ್ಲೆಲ್ಲಿ ಪ್ರವಾಹದಿಂದ ಹೆಚ್ಚಿನ ಹಾನಿಯಾಗಿದೆ ಆ ಪ್ರದೇಶಗಳಲ್ಲಿ ಬರುವ ದಿನಗಳಲ್ಲಿ ಪ್ರವಾಸ ಮಾಡುತ್ತೇನೆ’ ಎಂದೂ ತಿಳಿಸಿದರು.
ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೂ ಮೊದಲು ಅವರು ಯಡಿಯೂರಪ್ಪರನ್ನು ಅವರನ್ನು ಕಾವೇರಿ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.