ADVERTISEMENT

ಅನ್ನಭಾಗ್ಯಕ್ಕೂ ಕನ್ನ ಹಾಕಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ: ಬೊಮ್ಮಾಯಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಸೆಪ್ಟೆಂಬರ್ 2022, 11:50 IST
Last Updated 10 ಸೆಪ್ಟೆಂಬರ್ 2022, 11:50 IST
 ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: 'ಅನ್ನಭಾಗ್ಯದ ಅವ್ಯವಹಾರ ತನಿಖೆ ನಡೆಸುತ್ತಿದ್ದ ಅನುರಾಗ್ ತಿವಾರಿ ಅವರು ಉತ್ತರ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಾವೀಗಿಡಾದರು. ಈ ರೀತಿಯ ಆಡಳಿತದ ಪಾರದರ್ಶಕತೆ ಮತ್ತು ಅನ್ನಭಾಗ್ಯಕ್ಕೂ ಕನ್ನ ಹಾಕಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ‘ಜನಸ್ಪಂದನ’ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರ ಮುಂದಿಟ್ಟಿದ್ದಾರೆ.

ಜನಸ್ಪಂದನ ಕಾರ್ಯಕ್ರಮಕ್ಕೆ ಅಭೂತಪೂರ್ವ ಜನಸ್ಪಂದನೆ ದೊರಕಿದೆ.‌ ಇದು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರು ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ADVERTISEMENT

‘ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು. ಆದರೆ, ಕರ್ನಾಟಕದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಮರ್ಥವಾಗಿ ನಿಭಾಯಿಸಿದ್ದರು’ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಧಿಕಾರದ ಆಸೆಗಾಗಿ, ಬಹುಮತವಿಲ್ಲದಿದ್ದರೂ ಜೆಡಿಎಸ್ ಜೊತೆ ಕೈ ಜೋಡಿಸಿದ ಸಿದ್ದರಾಮಯ್ಯನವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಸಮಾಜದ ಎಲ್ಲಾ ವರ್ಗಗಳಿಗೂ ಅವಕಾಶ ನೀಡುವ ಮೂಲಕ ಎಲ್ಲರೂ ಅಭಿವೃದ್ಧಿಯಾಗ ಬೇಕೆಂಬುದೇ ನಮ್ಮ ಸರ್ಕಾರದ ಆಶಯವಾಗಿದೆ ಎಂದರು.

‘ನಾವು (ಬಿಜೆಪಿ) ಜಾತಿ, ಧರ್ಮಗಳನ್ನು ನೋಡದೇ ಎಲ್ಲರ ಮಕ್ಕಳಿಗೂ ‘ರೈತ ವಿದ್ಯಾ ನಿಧಿ’ ಯೋಜನೆಯನ್ನು ವಿಸ್ತರಿಸಿದ್ದೇವೆ. 21ನೇ ಶತಮಾನ ಜ್ಞಾನದ ಶತಮಾನ. ನಮ್ಮ ಕರ್ನಾಟಕದ ಮಕ್ಕಳು ಇತರರಿಗೂ ಪೈಪೋಟಿ ನೀಡುವಂತಹ ವಾತಾವರಣ ಕಲ್ಪಿಸುತ್ತಿದ್ದೇವೆ’ ಎಂದು ಬೊಮ್ಮಾಯಿ ತಿಳಿಸಿದರು.

‘ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿದ್ದು, 2023ರ ಚುನಾವಣೆ ವೇಳೆಗೆ ನಾವು ನಮ್ಮ ರಿಪೋರ್ಟ್ ಕಾರ್ಡ್ ಅನ್ನು ನಿಮ್ಮ ಬಳಿ ನೀಡಿ, ಪುನಃ ನಿಮ್ಮ ಆಶೀರ್ವಾದವನ್ನು ಪಡೆಯುತ್ತೇವೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇದೇ ವೇಳೆ 2023ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸುವ ಆಶಯದಿಂದ ಹೊಸ ಯೋಜನೆಗಳನ್ನು ಘೋಷಿಸಿದರು.

* ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿನಗರಗಳನ್ನು ಸ್ಯಾಟಲೈಟ್ ಟೌನ್‌ಗಳಾಗಿ ಅಭಿವೃದ್ಧಿಪಡಿಸಲಾಗುವುದು.

*ಹಾಲು ಉತ್ಪಾದಕರಿಗೆ ಕ್ಷೀರ ಅಭಿವೃದ್ಧಿ ಬ್ಯಾಂಕ್ , ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ 75 ಯುನಿಟ್ ಉಚಿತ ವಿದ್ಯುತ್ ಯೋಜನೆ.

*ರೈತರ ವ್ಯವಸಾಯಕ್ಕೆ ಅನುಕೂಲವಾಗಲು, ಹಾಗೂ ವೆಚ್ಚ ಕಡಿತವಾಗಲು ‘ರೈತ ಶಕ್ತಿ’ ಯೋಜನೆ ಅನುಷ್ಠಾನ.

* ರಾಜ್ಯದ ಮಾವು ಬೆಳೆಗಾರರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಲು ಅಗತ್ಯ ಕ್ರಮ.

* ಮೀನುಗಾರಿಕೆಯನ್ನು ಉತ್ತೇಜಿಸಲು, ಮೀನುಗಾರಿಕಾ ಮಹಿಳೆಯರಿಗೆ ಅಲ್ಪಾವಧಿ ಸಾಲ ವಿತರಿಸಲು ಕ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.