ADVERTISEMENT

ಸ್ವಾತಂತ್ರ್ಯ ದಿನಾಚರಣೆ: ಭಾಷಣದಲ್ಲಿ ಸಂಪ್ರದಾಯ ಮುರಿದ ಬೊಮ್ಮಾಯಿ!

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 16:37 IST
Last Updated 15 ಆಗಸ್ಟ್ 2021, 16:37 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡುವಾಗ ಮುದ್ರಿತ ಭಾಷಣವನ್ನಷ್ಟೇ ಓದುವ ಸಂಪ್ರದಾಯವನ್ನು ಮುರಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜಕೀಯ ಟೀಕೆಗಳು ಮತ್ತು ತಮ್ಮ ಮುಂದಿರುವ ಸವಾಲುಗಳ ಕುರಿತು ಪ್ರತಿಕ್ರಿಯಿಸಿದರು.
ಟೀಕೆಗಳಿಗೆ ಎದೆಗುಂದದೆ ಸಾಗುವುದಾಗಿ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು.

‘ಹಲವು ದಿನಗಳಿಂದ ನನ್ನನ್ನು ಟೀಕಿಸುವುದು, ಅವಮಾನಿಸುತ್ತಿರುವುದೂ ನಡೆಯುತ್ತಿದೆ. ಟೀಕೆ, ಅವಮಾನ ಎಲ್ಲವೂ ಆಶೀರ್ವಾದ ಎಂದೇ ಭಾವಿಸುವೆ. ಅವುಗಳನ್ನೇ ಮೆಟ್ಟಿಲಾಗಿ ಬಳಸಿಕೊಂಡು ಯಶಸ್ವಿಯಾಗುವೆ’ ಎಂದು ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಹೇಳಿದರು.

ತಮಗೆ ಇರುವುದು ಕೇವಲ 20 ತಿಂಗಳ ಅವಧಿ ಎಂಬ ಅರಿವಿದೆ. ಈ ಕಾರಣಕ್ಕಾಗಿಯೇ ರಾಜ್ಯದ ಅಭಿವೃದ್ಧಿಗೆ ದೀರ್ಘಾವಧಿ ಮತ್ತು ಅಲ್ಪಾವಧಿ ಯೋಜನೆಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರಲಾಗುವುದು. ಅಭಿವೃದ್ಧಿ ಎಂದರೆ ಕೇವಲ ಅಂಕಿಅಂಶಗಳಲ್ಲ. ಅಭಿವೃದ್ಧಿಯ ಸುತ್ತ ಜನರು ಸುತ್ತುವಂತಾಗಬಾರದು. ಜನರ ಬಳಿಗೆ ಅಭಿವೃದ್ಧಿ ತಲುಪಬೇಕು ಎಂಬ ಮಾತಿನಲ್ಲಿ ತಮಗೆ ನಂಬಿಕೆ ಇದೆ. ಅದೇ ರೀತಿ ತಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.

ADVERTISEMENT

‘ಜನರು ಸರ್ಕಾರಿ ಸೇವೆಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡುವುದು ಕೊನೆಯಾಗಬೇಕು. ಜನರ ಬಳಿಗೆ ಸುಲಭವಾಗಿ ಸರ್ಕಾರಿ ಸೇವೆಗಳು ತಲುಪಬೇಕು. ಆಡಳಿತ ನಡೆಸುವುದು ಮತ್ತು ಆಳುವುದು ಬೇರೆ ಬೇರೆ ಎಂಬ ಮಾತು ಇದೆ. ಈ ವ್ಯತ್ಯಾಸ ಅರಿತು ಕೆಲಸ ಮಾಡುತ್ತೇನೆ. ನವ ಕರ್ನಾಟಕದ ನಿರ್ಮಾಣಕ್ಕೆ ಈ ಕ್ಷಣದಿಂದಲೇ ಕಾರ್ಯಪ್ರವೃತ್ತನಾಗಿದ್ದೇನೆ’ ಎಂದು ಹೇಳಿದರು.

ನೈಸರ್ಗಿಕ ಸಂಪತ್ತನ್ನು ಜನಪರವಾಗಿ ಬಳಸಿಕೊಳ್ಳಲಾಗುವುದು. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳ ಅಭಿವೃದ್ಧಿಗೆ ವೇಗ ನೀಡಲಾಗುವುದು. ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗುವುದು. ಮಹಿಳೆಯರ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಜನರ ವೈಯಕ್ತಿಕ ಆದಾಯ ಹೆಚ್ಚಿಸುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿದರು.

ಸಹಕಾರಕ್ಕೆ ಮನವಿ: ‘ಒಂದೂವರೆ ವರ್ಷಗಳಿಂದ ಕೋವಿಡ್‌ ನಮ್ಮನ್ನು ಕಾಡುತ್ತಿದೆ. ಈಗ ಮೂರನೇ ಅಲೆಯ ಭೀತಿಯಲ್ಲಿ ಇದ್ದೇವೆ. ಜನರು ಆರೋಗ್ಯ ಇಲಾಖೆ ಮತ್ತು ತಜ್ಞರ ಸಲಹೆ, ನಿರ್ದೇಶನಗಳನ್ನು ಪಾಲಿಸುವ ಮೂಲಕ ಸಂಪೂರ್ಣ ಸಹಕಾರ ನೀಡಬೇಕು’ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.