ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಯಾರ ಜತೆಗೂ ಚರ್ಚೆ ಆಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನವೆಂಬರ್‌ನಲ್ಲಿ ನಡೆಯುವ ಕರ್ನಾಟಕ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಇಲಾಖೆ ಏರ್ಪಡಿಸಿರುವ ವಿವಿಧ ದೇಶಗಳ ರಾಯಭಾರಿಗಳ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಇಲ್ಲ. ಇಬ್ಬರೂ ಸಿಕ್ಕಿದ್ದರೆ ಈ ವಿಷಯ ಪ್ರಸ್ತಾಪಿಸುವ ಉದ್ದೇಶವಿತ್ತು ಎಂದು ಅವರು ಹೇಳಿದರು.
ಆಕಾಂಕ್ಷಿಗಳ ನಿರೀಕ್ಷೆ: ಈ ಬಾರಿ ಖಂಡಿತಾ ಸಂಪುಟ ಪುನಾರಚನೆ ಆಗಬಹುದು ಎಂಬ ವಿಶ್ವಾಸದಲ್ಲಿ ಹಲವು ಆಕಾಂಕ್ಷಿಗಳು ಕಾದು ಕುಳಿತಿದ್ದಾರೆ. ಮುಖ್ಯಮಂತ್ರಿಯವರ ದೆಹಲಿ ಭೇಟಿಯ ವೇಳೆ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಗೆ ವರಿಷ್ಠರು ಒಪ್ಪಿಗೆ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಮಂಗಳವಾರ ಅದಕ್ಕೆ ಅವಕಾಶ ಸಿಗಲಿಲ್ಲ. ಕೆಲವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು.
ಒಂದು ವೇಳೆ ಮುಖ್ಯಮಂತ್ರಿಯವರಿಗೆ ಬುಧವಾರ ನಡ್ಡಾ ಮತ್ತು ಶಾ ಅವರ ಜತೆಗೆ ಭೇಟಿಗೆ ಸಮಯ ಸಿಕ್ಕಿದ್ದರೆ, ಸಂಪುಟ ವಿಸ್ತರಣೆಯ ವಿಷಯ ಪ್ರಸ್ತಾಪಿಸುವ ಸಾಧ್ಯತೆ ಇದೆ. ಬುಧವಾರ ಸಂಜೆ ಬೆಂಗಳೂರಿಗೆ ವಾಪಸಾಗಿ ಸಚಿವ ಸಂಪುಟ ಸಭೆಗೆ ಹಾಜರಾಗಬೇಕಾಗಿತ್ತು. ಸಂಪುಟ ಸಭೆಯನ್ನು ಈಗ ಗುರುವಾರಕ್ಕೆ ಮುಂದೂಡಲಾಗಿದೆ.
ಸಂಪುಟ ಪುನರ್‌ರಚನೆ ಮಾಡಬೇಕು ಎಂಬ ಆಂತರಿಕ ಒತ್ತಡ ಹೆಚ್ಚಾಗಿರುವುದರಿಂದ ಬೊಮ್ಮಾಯಿ ಅವರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ವರಿಷ್ಠರ ಅನುಮತಿ ಇಲ್ಲದೇ ಈ ವಿಷಯದ ಸಂಬಂಧ ಯಾವುದೇ ಭರವಸೆಯನ್ನು ನೀಡುವ ಸ್ಥಿತಿಯಲ್ಲಿ ಅವರು ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.