ಬೆಂಗಳೂರು: ವರ್ಷದ ಹಿಂದೆ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಕಾರ್ಯಾಚರಣೆಯಲ್ಲಿ ಮುಂಚೂಣಿ ‘ಯೋಧ’ರಂತೆ ದುಡಿದ ಇಬ್ಬರಿಗೆ ವಿಧಾನಪರಿಷತ್ತಿನ ಸದಸ್ಯತ್ವ ಕೊಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ‘ಅಧಿಕಾರ ಋಣ’ ತೀರಿಸಿದ್ದಾರೆ.
ಪರಿಷತ್ತಿನ ಐದು ನಾಮನಿರ್ದೇಶನ ಸ್ಥಾನಗಳ ಪೈಕಿ ಮೂರನ್ನು ತಮ್ಮ ‘ಹಿತೈಷಿ’ಗಳಿಗೆ ದಯಪಾಲಿಸಿ, ತಮ್ಮನ್ನು ನಂಬಿದವರ ಕೈಬಿಡುವುದಿಲ್ಲ ಎಂಬ ಸಂದೇಶವನ್ನೂ ಯಡಿಯೂರಪ್ಪ ರವಾನಿಸಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಕಾರಣರಾದ ಎಚ್. ವಿಶ್ವನಾಥ್ ಹಾಗೂ ಸಿ.ಪಿ. ಯೋಗೇಶ್ವರ್ ಅವರನ್ನು ಸರ್ಕಾರಕ್ಕೆ ವರ್ಷ ತುಂಬುವ ಮೊದಲೇ ಪರಿಷತ್ ಸದಸ್ಯರನ್ನಾಗಿ
ನಾಮನಿರ್ದೇಶನ ಮಾಡಿಸಿರುವ ಮುಖ್ಯಮಂತ್ರಿ, ಕೊಟ್ಟ ವಾಗ್ದಾನ ಈಡೇರಿಸಿದ್ದಾರೆ.
ರಾಜ್ಯಸಭೆಯ ಎರಡು ಸ್ಥಾನಗಳನ್ನು ಪಕ್ಷ ನಿಷ್ಠರಿಗೆ ಕೊಡುವ ಮೂಲಕ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದರು ಎಂಬ ಚರ್ಚೆ ನಡೆದಿತ್ತು. ಬಳಿಕ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ದಕ್ಕಿದ್ದ ನಾಲ್ಕು ಸ್ಥಾನಗಳಲ್ಲಿ ಮೂರನ್ನು ಯಡಿಯೂರಪ್ಪ ಹೇಳಿದವರಿಗೇ ನೀಡಲಾಗಿತ್ತು. ಈಗಲೂ ಮೂರು ಸ್ಥಾನಗಳ ಆಯ್ಕೆಯ ಪೂರ್ಣಾಧಿಕಾರ ಯಡಿಯೂರಪ್ಪಗೆ ಸಿಕ್ಕಂತಾಗಿದ್ದು, ಪಕ್ಷದಲ್ಲಿ ಅವರ ಪ್ರಭಾವ ಬಲಿಷ್ಠವಾಗಿರುವುದರ ದ್ಯೋತಕದಂತಿದೆ.
ಅಸಾಧ್ಯವಾಗಿರುವುದು ಸಾಧ್ಯ: ಬಿಜೆಪಿ ಜತೆ ಗುರುತಿಸಿಕೊಂಡಿದ್ದಕ್ಕೆ ಎಚ್. ವಿಶ್ವನಾಥ್ ಅವರನ್ನುಜೆಡಿಎಸ್ ಶಾಸಕತ್ವದಿಂದ ಅನರ್ಹಗೊಳಿಸಲಾಗಿತ್ತು. ಅನರ್ಹತೆಯ ಕುರಿತು ವಿಚಾರಣೆ ನಡೆಸಿ, ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಹಿಂದಿನ ಸಭಾಧ್ಯಕ್ಷರು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು. ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿತ್ತಲ್ಲದೇ, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವವರೆಗೆ ಸಾಂವಿಧಾನಿಕ ಅಧಿಕಾರ ಹೊಂದತಕ್ಕದ್ದಲ್ಲ ಎಂದು ಹೇಳಿತ್ತು. ಉಪಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ವಿಶ್ವನಾಥ್, ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಇಚ್ಛಿಸಿದ್ದರು. ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ವಿಶ್ವನಾಥ್ ರಾಜಕೀಯ ಭವಿಷ್ಯ ಮುಗಿಯಿತು ಎಂಬ ಚರ್ಚೆಗಳು ಆಗ ನಡೆದಿದ್ದವು.
ಕಾಂಗ್ರೆಸ್–ಜೆಡಿಎಸ್ ಶಾಸಕರ ಬಲ ಒಗ್ಗೂಡಿಸಿ ಮೈತ್ರಿ ಸರ್ಕಾರ ಕೆಡಹುವ ನೇತೃತ್ವ ವಹಿಸಿದ್ದವರು ವಿಶ್ವನಾಥ್. ಶಾಸಕರನ್ನು ಮುಂಬೈಗೆ ಕರೆದೊಯ್ದು, ರಕ್ಷಿಸುವ ಕಾರ್ಯಾಚರಣೆಯ ಸೂತ್ರಧಾರಿ ಸಿ.ಪಿ. ಯೋಗೇಶ್ವರ್.
ಈ ಇಬ್ಬರೂ ಮೇಲ್ಮನೆ ಪ್ರವೇಶಿಸುವ ಇರಾದೆಯಲ್ಲಿದ್ದರು. ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಬುಧವಾರ ಭೇಟಿ ಮಾಡಿದ ಯಡಿಯೂರಪ್ಪ, ಈ ಪಟ್ಟಿಗೆ ಅಂಕಿತ ಹಾಕಿಸುವಲ್ಲಿ ‘ಯಶಸ್ವಿ’ಯಾಗಿದ್ದಾರೆ. ತಮ್ಮ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಭಾರತಿ ಶೆಟ್ಟಿ ಅವರನ್ನು ಎರಡನೇ ಬಾರಿ ಪರಿಷತ್ ಸದಸ್ಯರಾಗಿ ನಾಮನಿರ್ದೇಶನ ಮಾಡಿಸುವಲ್ಲಿ ಕೂಡ ಯಡಿಯೂರಪ್ಪ ತಮ್ಮ ‘ಪ್ರಭಾವ’ ಬಳಸಿ
ದ್ದಾರೆ. ನಂಬಿದವರನ್ನು ನಾಯಕ ಕೈಬಿಡುವುದಿಲ್ಲ ಎಂಬುದನ್ನು ಈ ಮೂಲಕ ಅವರು ಸಾಬೀತು ಮಾಡಿದ್ದಾರೆ.
ಸಿದ್ದಿ, ಕೋಲಿ ಸಮುದಾಯಕ್ಕೆ ಪ್ರಾತಿನಿಧ್ಯ
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷ ನಿಷ್ಠರನ್ನು ಅಭ್ಯರ್ಥಿಯಾಗಿಸಿ ಅಚ್ಚರಿ ಮೂಡಿಸಿದ್ದ ಬಿಜೆಪಿ ವರಿಷ್ಠರು, ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡುವಾಗಲೂ ಇಲ್ಲಿಯವರೆಗೆ ಅಲಕ್ಷಿಸಲ್ಪಟ್ಟಿದ್ದ ತಳ ಸಮುದಾಯಕ್ಕೆ ಪ್ರಾತಿನಿಧ್ಯ ಕೊಟ್ಟಿದ್ದಾರೆ.
ಸಿದ್ದಿ ಸಮುದಾಯದ ಮೊದಲ ಪದವೀಧರ ಶಾಂತರಾಮ ಸಿದ್ದಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಸಮುದಾಯದವರು ಇಲ್ಲಿಯವರೆಗೆ ಜಿಲ್ಲಾ ಪಂಚಾಯಿತಿಗೂ ಆಯ್ಕೆಯಾಗಿರಲಿಲ್ಲ. ಕಡೆಗಣಿಸಲಾಗಿದ್ದ ಜನಾಂಗವನ್ನು ಗುರುತಿಸಿ ಪ್ರಾತಿನಿಧ್ಯ ಕೊಡಲಾಗಿದೆ. ಆರೆಸ್ಸೆಸ್‌ನ ಸಹ ಸಂಘಟನೆಯಾದ ವನವಾಸಿ ಕಲ್ಯಾಣ ಸಮಿತಿಯಲ್ಲಿ ಸಕ್ರಿಯರಾಗಿರುವ ಸಿದ್ದಿ ಅವರು ಬಿಜೆಪಿಯ ರಾಜ್ಯ ಕಾರ್ಯದರ್ಶಿಯೂ ಹೌದು.
ಹಿಂದುಳಿದ ವರ್ಗಕ್ಕೆ ಸೇರಿರುವ ಕೋಲಿ ಕಬ್ಬಲಿಗ ಸಮುದಾಯದವರಾದ, ಅರ್ಥಶಾಸ್ತ್ರ ಪ್ರಾಧ್ಯಾಪಕ ಸಾಬಣ್ಣ ತಳವಾರ ಅವರಿಗೆ ಶಿಕ್ಷಣ ಕ್ಷೇತ್ರದಿಂದ ಪ್ರಾತಿನಿಧ್ಯ ನೀಡಲಾಗಿದೆ.
***
ಜನಸೇವೆಗೆ ಮತ್ತೊಂದು ಅವಕಾಶ ಸಿಕ್ಕಿರುವುದು ಸಂತೋಷ ಉಂಟು ಮಾಡಿದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಯಡಿಯೂರಪ್ಪ ನಡೆದುಕೊಂಡಿದ್ದಾರೆ.
– ಎಚ್. ವಿಶ್ವನಾಥ್, ಮೇಲ್ಮನೆ ನೂತನ ಸದಸ್ಯ
ಇಷ್ಟು ದಿನ ಸಾಮಾಜಿಕ ಕಾರ್ಯಕರ್ತನಾಗಿ ಕೈಲಾದಷ್ಟು ಒಳ್ಳೆಯ ಕಾರ್ಯ ಮಾಡುತ್ತಿದ್ದೆ. ನಾನು ರಾಜಕಾರಣಿ ಅಲ್ಲದಿದ್ದರೂ, ಈಗ ಒಂದು ಪಾದ ಅಲ್ಲಿ ಇಟ್ಟಂತಾಗಿದೆ
– ಶಾಂತಾರಾಮ ಸಿದ್ದಿ,ಮೇಲ್ಮನೆ ನೂತನ ಸದಸ್ಯ
ಹಿಂದುಳಿದ ವರ್ಗಗಳ ಸಂಘಟನೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದನ್ನು ಸರ್ಕಾರ ಗುರುತಿಸಿದೆ. ಇಂಥದೊಂದು ದೊಡ್ಡ ಹುದ್ದೆ ಸಿಗುತ್ತದೆಂದು ನಿರೀಕ್ಷೆ ಮಾಡಿರಲಿಲ್ಲ
– ಪ್ರೊ. ಸಾಬಣ್ಣ ತಳವಾರ,ಮೇಲ್ಮನೆ ನೂತನ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.